ಹುಣಸೂರು: ಹುಣಸೂರು ತಾಪಂ ಅಪ್ರತಿಮ ಸಾಧನೆಗಾಗಿ 2020-21ನೇ ಸಾಲಿನ ಕೇಂದ್ರ ಸರಕಾರದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಸಶಕ್ತಿಕರಣ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದ್ದು, ಎರಡನೇ ಬಾರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗಿಟ್ಟಿಸಿದ ರಾಜ್ಯದ ಏಕೈಕ ತಾಲೂಕು ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತಾಲೂಕಿನ ಬಿಳಿಕೆರೆ ಹೋಬಳಿಯ ಹಳೇಬೀಡು ಗ್ರಾಪಂ ಸಹ ತನ್ನ ಅಮೋಘ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಡಬ್ಬಲ್ ಧಮಾಕ. 2017-18 ರಿಂದ ಸತತವಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವ ರಾಜ್ಯದ ಏಕೈ ಕ ತಾಲೂಕೆಂಬ ಹಿರಿಮೆ ಹುಣಸೂರು ತಾಲೂಕಿನದ್ದು!
ಈ ಸಾಲಿನಲ್ಲಿ ಕರ್ನಾಟಕ ರಾಜ್ಯದ ಹುಣಸೂರು ಹಾಗೂ ಸೂಳ್ಯ ತಾಲೂಕು ಪಂಚಾಯ್ತಿ ಹಾಗೂ ಹುಣಸೂರು ತಾಲೂಕಿನ ಹಳೇಬೀಡು ಗ್ರಾಪಂ, ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಪಂ ಹಾಗೂ ದಕ್ಷಿಣ ಕನ್ನಡದ ಮುನ್ನೂರು ಗ್ರಾಪಂಗಳು ಮಾತ್ರ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿವೆ.
ಸಾಧನೆಯ ಶಿಖರ: ತಾಪಂ ಕಾರ್ಯನಿರ್ವಾಹಕರಾಗಿ ಎಚ್.ಡಿ.ಗಿರೀಶ್ ಅವರು ಬಂದ ನಂತರ ಶಾಸಕರು, ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಜಿಪಂನ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಸ್ತು, ಕ್ರಮ ಬದ್ಧ ಆಡಳಿತದ ಮೂಲಕ ಗ್ರಾಪಂನ ಆಡಳಿತ ವರ್ಗ, ಪಿಡಿಒಗಳು ಹಾಗೂ ಎಲ್ಲ ಸಿಬ್ಬಂದಿ, ಸಂಘ-ಸಂಸ್ಥೆಗಳವರು, ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಬದ್ಧತೆಯ ಕಾರ್ಯ ನಿರ್ವಹಣೆಯ ಅಮೋಘ ಸಾಧನೆಗೈದ ಪರಿಣಾಮವೇ ರಾಷ್ಟ್ರ ಮಟ್ಟದ ಈ ಪ್ರಶಸ್ತಿಯನ್ನು ಸತತವಾಗಿ ಮುಡಿಗೇರಿಸಿಕೊಳ್ಳಲು ಸಾಧ್ಯ.
ನರೇಗಾದಲ್ಲೂ ಪ್ರಥಮ: ಇನ್ನು ನರೇಗಾ ಯೋಜನೆ ಅನುಷ್ಠಾನದಲ್ಲೂ ಜಿಲ್ಲೆಗೆ ಮೊದಲ ತಾಲೂಕೆಂಬ ಹೆಗ್ಗಳಿಕೆಯ ಜೊತೆ ಜೊತೆಗೆ ಕ್ರಮ ಬದ್ದ ಸಭೆಗಳು, ದಾಖಲೆಗಳ ನಿರ್ವಹಣೆ, ಕೆರೆಗಳ ಪುನಶ್ಚೇತನ, ಸೋಕ್ ಪಿಟ್‌ಗಳ ನಿರ್ಮಾಣ, ಹೈಟೆಕ್,ಡಿಜಿಟಲ್ ಗ್ರಂಥಾಲಯ, ಸ್ಮಶಾನ ನಿರ್ಮಾಣ, ರೈತರ ವೈಯಕ್ತಿಕ ಕಾಮಗಾರಿಗಳು, ಕೃಷಿ ತೋಟಗಾರಿಗೆ, ರೇಷ್ಮೆ ಪ್ರಗತಿ ಸೇರಿದಂತೆ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಟಾನ, ಹೀಗೆ ಅನೇಕಾನೇಕ ಪ್ರಗತಿದಾಯಕ ಕಾಯಕ ದಾಖಲೆಯ ಅಭಿವೃದ್ಧಿಯ ಶಿಖರವೇ ಪ್ರಶಸ್ತಿಗೆ ಪೂರಕವಾಗಿದೆ.
ಹಳೆಬೀಡು ಗ್ರಾಪಂನಲ್ಲೂ ಅಭಿವೃದ್ಧಿ ಶಖೆ:ಇದೇ ರೀತಿ ಹಳೇಬೀಡು ಗ್ರಾಮ ಪಂಚಾಯ್ತಿಯು ಸಹ ಅಂತರ್ಜಲ ಮರು ಹೂರಣ, ದಾಖಲೆಗಳ ನಿರ್ವಹಣೆ, ಕೋವಿಡ್ ಕೇರ್ ಸೆಂಟರ್ ನಿರ್ವಹಣೆ. ತೆರಿಗೆ ಸಂಗ್ರಹ ಸೇರಿದಂತೆ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನದ ವಿಶಿಷ್ಟ ಸಾಧನೆಗಾಗಿಯೇ ಚೊಚ್ಚಲ ಪ್ರಶಸ್ತಿ ಲಭಿಸಿದೆ. ತಾಲೂಕಿಗೆ 2017-18ರಿಂದಲೂ ಅದರಲ್ಲೂ ತಾಪಂ 2ನೇ ಬಾರಿಗೆ ಪ್ರಶಸ್ತಿ ತನ್ನ ಮುಡಿಗೇರಿಸಿ ಕೊಂಡಿರುವುದು ಹುಣಸೂರಿನ ಹೆಮ್ಮೆ.
ತಾಪಂ ಇಒ ಗಿರೀಶ್ ಎಲ್ಲಾ ಜನಪ್ರತಿನಿಧಿ, ಹಿರಿಯ ಅಧಿಕಾರಿಗಳು ಸಹಕಾರದೊಂದಿಗೆ ಸರಕಾರಗಳ ಅನುದಾನದ ಕೊರತೆಯ ನಡುವೆ ಪಿಡಿಒಗಳು ಸೇರಿದಂತೆ ಎಲ್ಲರ ಒಗ್ಗೂಡುವಿಕೆಯಿಂದ ಕೆಲಸ ನಿರ್ವಹಿಸಿ ಅಭಿವೃದ್ಧಿಯ ಪರ್ವ ನಡೆಸಿದ್ದಾರೆ.
–ಎಚ್.ಪಿ.ಮಂಜುನಾಥ್, ಶಾಸಕ ಹುಣಸೂರು
ತಾಲೂಕಿಗರ ಡಬ್ಬಲ್ ಪ್ರಶಸ್ತಿಯ ಗರಿ ನಮ್ಮನ್ನು ಮತ್ತಷ್ಟು ಕಾಯಕಕ್ಕೆ ಪ್ರೇರೇಪಿಸಿದೆ. ಶಾಸಕ-ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಪಂಗಳ ಸಂಪೂರ್ಣ ಆಡಳಿತ ವರ್ಗ, ಪಿಡಿಒ, ಸಿಬ್ಬಂದಿ ಶಿಸ್ತುಬದ್ಧ ಕಾರ್ಯ ನಿರ್ವಹಣೆಯೇ ಈ ಪ್ರಶಸ್ತಿ ದಕ್ಕಿರುವುದಕ್ಕೆ ಸಾಕ್ಷಿ
. – ಎಚ್.ಡಿ.ಗಿರೀಶ್, ಹುಣಸೂರು ತಾಪಂ, ಇಒ
-ಸಂಪತ್ ಕುಮಾರ್ ಹುಣಸೂರು