ಚಿತ್ರದುರ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತಷ್ಟು ಬಲವಾಗುತ್ತಿದ್ದಂತೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಮುಖ್ಯಮಂತ್ರಿಯವರ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಾವುದೇ ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ್ಯವಿದ್ದಾಗ ಉತ್ತಮ ಆಡಳಿತ ಸಾಧ್ಯ. ಕೇಂದ್ರ ಸರ್ಕಾರ ಹತೋಟಿ ಸಾಧಿಸುವ ಸಂಚು ಮಾಡಿದರೆ ಎಂಥಹ ಮುಖ್ಯಮಂತ್ರಿ ಇದ್ದರೂ ಪರಿಪೂರ್ಣ ಆಡಳಿತ ಅಸಾಧ್ಯ. ಅವರ ಕೈ ಕಟ್ಟಿ ಹಾಕುತ್ತಾರೆ, ಬಿಎಸ್ ವೈ ವಿಚಾರದಲ್ಲಿ ಹೀಗಾಗಿದೆ. ಉತ್ತಮ ಆಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಕೇಂದ್ರ ಮತ್ತು ರಾಜ್ಯದ ನಾಯಕರಿಗೆ ಪಂಡಿತಾರಾಧ್ಯಶ್ರೀಗಳು ಕಿವಿಮಾತು ಹೇಳಿದರು.
ಯಾವುದೇ ಪಕ್ಷದ ವ್ಯಕ್ತಿ ಕನಿಷ್ಠ 5 ವರ್ಷ ಮುಂದುವರೆದರೆ ಒಳ್ಳೆಯ ಕಾರ್ಯ ಸಾಧ್ಯ. ಕೇಂದ್ರ, ರಾಜ್ಯ ಪ್ರತಿನಿಧಿಗಳು ಸಿಎಂಗೆ ಸಂಪೂರ್ಣ ಸ್ವತಂತ್ರ್ಯ ನೀಡಬೇಕು. ಒಳ್ಳೆಯ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು. ಆಡಳಿತದಲ್ಲಿ ದೋಷ ಕಂಡರೆ ಆಗ ಕ್ರಮ ಕೈಗೊಳ್ಳಬೇಕು. ಎರಡು ವರ್ಷಕ್ಕೆ ಮುಖ್ಯಮಂತ್ರಿ ಬದಲಿಸಬಾರದು ಎಂದಿದ್ದಾರೆ.
ಇದನ್ನೂ ಓದಿ:ಕೊನೆಯ ಹಂತದ ಪ್ರಯತ್ನ?: ಏಕಾಂಗಿಯಾಗಿ ದೆಹಲಿಗೆ ಹೊರಟ ರೇಣುಕಾಚಾರ್ಯ!
ಸಿಎಂ ಬದಲಾವಣೆಯಿಂದ ಅಧಿಕಾರಿಗಳು ಕೆಲಸ ಮಾಡಲು ಅಸಾಧ್ಯವಾಗುತ್ತದೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿ. ಹಾಲಿ ಸಿಎಂಗೆ ಪೂರ್ಣಾವಧಿ ಕೆಲಸ ಮಾಡಲು ಬಿಡಬೇಕು. ಸಿಎಂ ಬಿಎಸ್ ವೈ ಯಶಸ್ವಿಯಾಗಿ ಕೋವಿಡ್ ನಿರ್ವಹಿಸಿದ್ದಾರೆ. ಈ ವೇಳೆ ನೆಪ ಮಾಡಿಕೊಂಡು ಸಿಎಂ ಬದಲಾವಣೆ ಕೃತ್ಯ ನಡೆಸುವುದು ಒಳ್ಳೆಯ ರಾಜಕಾರಣದ ಸಂಕೇತ ಅಲ್ಲ. ಈಗಲಾದರೂ ಕೇಂದ್ರ ಸರ್ಕಾರ ಅನಾವಶ್ಯಕ ಮೂಗು ತೂರಿಸುವುದು ಬಿಡಲಿ ಎಂದು ಬಿಎಸ್ ವೈ ಪರವಾಗಿ ಮಾತನಾಡಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ಹೆಚ್ಚು ಆರ್ಥಿಕ ನೆರವು ನೀಡಬೇಕು. ಆರ್ಥಿಕ ನೆರವು ನೀಡದೆ ಪದೇ ಪದೇ ಕಿರುಕುಳ ನೀಡಿದರೆ ಉತ್ತಮ ಆಡಳಿತ ಅಸಾಧ್ಯ. ಮತ್ತೆ ಅವರನ್ನು ತೆಗೆದು ಮತ್ತೊಬ್ಬರನ್ನು ನೇಮಿಸುವುದರಿಂದ ಕರ್ನಾಟಕದಲ್ಲಿ ಅವ್ಯವಸ್ಥೆ ಸೃಷ್ಠಿ ಆಗುತ್ತದೆ. ಅವ್ಯವಸ್ಥೆ ಆಗಲು ಕೇಂದ್ರ ಸರ್ಕಾರ ಅವಕಾಶ ನೀಡಬಾರದು ಎಂದು ಪಂಡಿತಾರಾಧ್ಯ ಶ್ರೀ ಹೇಳಿದ್ದಾರೆ.