ಕಟಕ್: ನಿರೀಕ್ಷೆಯಂತೆ ದುರ್ಬಲ ಅರುಣಾಚಲ ಪ್ರದೇಶ ವಿರುದ್ಧ ಭಾರೀ ಅಂತರದ ಜಯ ಸಾಧಿಸಿದ ಕರ್ನಾಟಕ, “ಸಯ್ಯದ್ ಮುಷ್ತಾಕ್ ಅಲಿ ಟಿ20 ಸರಣಿ’ಯಲ್ಲಿ ಹ್ಯಾಟ್ರಿಕ್ ಪರಾಕ್ರಮದೊಂದಿಗೆ ಮುನ್ನುಗ್ಗಿದೆ. ರವಿವಾರ ಕಟಕ್‌ನಲ್ಲಿ ನಡೆದ “ಡಿ’ ವಿಭಾಗದ ಈ ಮುಖಾಮುಖೀಯಲ್ಲಿ ರಾಜ್ಯ ತಂಡ 146 ರನ್ನುಗಳ ಜಯಭೇರಿ ಮೊಳಗಿಸಿತು.
ನಾಯಕ ಮನೀಷ್ ಪಾಂಡೆ ಅವರ ಬಿರುಸಿನ ಶತಕ ಕರ್ನಾಟಕ ಸರದಿಯ ಆಕರ್ಷಣೆಯಾಗಿತ್ತು. ಪಾಂಡೆ ಕೇವಲ 46 ಎಸೆತಗಳಲ್ಲಿ 111 ರನ್ ರಾಶಿ ಹಾಕಿದರು. ಈ ಬಿರುಸಿನ ಬ್ಯಾಟಿಂಗ್ ವೇಳೆ 7 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಯಿತು. ಪಾಂಡೆ ಅವರ ಈ ಅಮೋಘ ಬ್ಯಾಟಿಂಗ್ ಪರಾಕ್ರಮದಿಂದ ಕರ್ನಾಟಕ 4 ವಿಕೆಟಿಗೆ 226 ರನ್ ಪೇರಿಸಿತು. ಜವಾಬಿತ್ತ ಅರುಣಾಚಲ ಪ್ರದೇಶ 14.4 ಓವರ್‌ಗಳಲ್ಲಿ 80 ರನ್ನಿಗೆ ಆಲೌಟ್ ಆಯಿತು.
ಆರಂಭಕಾರ ಸಮರ್ಥ್ ಸೇಥ್ (49) ಹೊರತುಪಡಿಸಿ ಅರುಣಾಚಲದ ಯಾವ ಆಟಗಾರನೂ ಎರಡಂಕೆಯ ಗಡಿ ತಲುಪಲಿಲ್ಲ. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 11 ರನ್ನಿಗೆ 5 ವಿಕೆಟ್ ಉರುಳಿಸಿ ಮಿಂಚಿದರು.
ಕರ್ನಾಟಕ ಸರದಿಯ ಉಳಿದ ಪ್ರಮುಖ ಸ್ಕೋರರ್‌ಗಳೆಂದರೆ ರೋಹನ್ ಕದಮ್ (25) ಮತ್ತು ಬಿ.ಆರ್. ಶರತ್ (45). ಪಾಂಡೆ-ಶರತ್ 4ನೇ ವಿಕೆಟಿಗೆ 11.4 ಓವರ್‌ಗಳಿಂದ 115 ರನ್ ಸೂರೆಗೈದರು. ಮಾಯಾಂಕ್ ಅಗರ್ವಾಲ್ ಆಡಲಿಳಿದಿದ್ದರಿಂದ ಶರತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಅಗರ್ವಾಲ್ ಗಳಿಕೆ 15 ರನ್. ಕರುಣ್ ನಾಯರ್ 11 ರನ್ ಮಾಡಿದರು.
ಸೋಮವಾರ ಕರ್ನಾಟಕ-ಮಿಜೋರಾಂ ಮುಖಾ ಮುಖೀಯಾಗಲಿವೆ. ಸಂಕ್ಷಿಪ್ತ ಸ್ಕೋರ್: ಕರ್ನಾಟಕ-4 ವಿಕೆಟಿಗೆ 226 (ಪಾಂಡೆ 111, ಶರತ್ 43, ಕದಮ್ 25, ಸಹಾನಿ 39ಕ್ಕೆ 2). ಅರುಣಾಚಲ ಪ್ರದೇಶ-14.4 ಓವರ್‌ಗಳಲ್ಲಿ 80 (ಸಮರ್ಥ್ ಸೇಥ್ 49. ಶ್ರೇಯಸ್ ಗೋಪಾಲ್ 11ಕ್ಕೆ 5, ಕೌಶಿಕ್ 13ಕ್ಕೆ 2).