Advertisement

ಕೋಲಾಹಲ ಸೃಷ್ಟಿಸಿದ ಮಂತ್ರಿಸ್ಕ್ವೇರ್‌

12:14 PM Jan 31, 2017 | Team Udayavani |

ಬೆಂಗಳೂರು: ಇತ್ತೀಚೆಗಷ್ಟೇ ಸಂಪಿಗೆ ರಸ್ತೆಯ ಮಂತ್ರಿ ಸ್ಕ್ವೇರ್‌ ಕಟ್ಟಡದ ಗೋಡೆ ಕುಸಿತ ಘಟನೆ ಹಾಗೂ ಸಂಬಂಧಿತ ವಿವಾದ ಸೋಮವಾರ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೂ ಪ್ರತಿಧ್ವನಿಸಿತು. ಕಟ್ಟಡದ ನೆಲಮಹಡಿಯಲ್ಲಿ ವಾಹನ ನಿಲುಗಡೆ ಸ್ಥಳವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ನಿಯಮ ಉಲ್ಲಂ ಸಿದ್ದರೂ ಸ್ವಾಧೀನ ಪ್ರಮಾಣಪತ್ರ ರದ್ದುಪಡಿಸಲು ಕ್ರಮ ಕೈಗೊಳ್ಳದೆ ಆಡಳಿತ ಪಕ್ಷದ ಕೆಲವರು ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬ ಪ್ರತಿಪಕ್ಷದ ಆರೋಪ ಸಭೆಯಲ್ಲಿ ಕೋಲಾಹಲ ಎಬ್ಬಿಸಿತು.

Advertisement

ಬಿಬಿಎಂಪಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೆ.ಉಮೇಶ್‌ ಶೆಟ್ಟಿ, ಮಂತ್ರಿ ಸ್ಕ್ವೇರ್‌ ಕಟ್ಟಡದ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ನೆಲಮಹಡಿಯಲ್ಲಿ 132 ಕಾರು ನಿಲುಗಡೆ ಜಾಗದಲ್ಲಿ ಕಾಫಿಶಾಪ್‌ ಸೇರಿದಂತೆ ವಾಣಿಜ್ಯ ಚಟುವಟಿಕೆ ನಡೆಯುತ್ತಿದ್ದು, ಸ್ವಾಧೀನ ಪ್ರಮಾಣಪತ್ರ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದಾಗ್ಯೂ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ, ಮೇಯರ್‌ ಕೂಡ ಇದರಲ್ಲಿ ಶಾಮೀಲಾಗಿರುವ ಶಂಕೆ ಮೂಡಿದೆ ಎಂದು ಗಂಭೀರ ಆರೋಪ ಮಾಡಿದರು. ಇದು ಗದ್ದಲಕ್ಕೆ ನಾಂದಿಹಾಡಿತು.

ಇದರಿಂದ ಕೆರಳಿದ ಮೇಯರ್‌ ಜಿ.ಪದ್ಮಾವತಿ ಹಾಗೂ ಆಡಳಿತ ಪಕ್ಷದ ಸದಸ್ಯರು ಉಮೇಶ್‌ ಶೆಟ್ಟಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಷ್ಟ ಬಂದಂತೆ ಮಾತನಾಡುವ ಸಭೆ ಇದಲ್ಲ. ತಕ್ಷಣ ಸಭೆಯ ಕ್ಷಮೆ ಕೇಳಬೇಕು ಎಂದು ಪಟ್ಟುಹಿಡಿದರು. ಆದರೆ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಉಮೇಶ್‌ ಶೆಟ್ಟಿ ಹೇಳಿದರು. ಆಗ ಕೋಪಗೊಂಡ ಮೇಯರ್‌, “ಇದು (ಉಮೇಶ್‌ ಶೆಟ್ಟಿ ಅವರ ವರ್ತನೆ) ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದಾಗ ಬಿಜೆಪಿ ಸದಸ್ಯರು ಮೇಯರ್‌ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸಭೆಯಲ್ಲಿ ಕೋಲಾಹಲ ಉಂಟಾಗಿದ್ದರಿಂದ ಮೇಯರ್‌ ಸಭೆ ಮುಂದೂಡಿದರು.

ಮಧ್ಯಾಹ್ನ ಮತ್ತೆ ಸಭೆ ಆರಂಭವಾಗು ತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಮಹಮ್ಮದ್‌ ರಿಜ್ವಾನ್‌ ಮಾತನಾಡಿ, ಉಮೇಶ್‌ ಶೆಟ್ಟಿ ಅವರ ಆರೋಪ ಹಾಗೂ ಅದಕ್ಕೆ ಪ್ರತಿಯಾಗಿ ಬಿಜೆಪಿ ಬಗ್ಗೆ ನೀಡಿದ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉಮೇಶ್‌ ಶೆಟ್ಟಿ ಕೂಡ ಒಪ್ಪಿದಾಗ ಮೇಯರ್‌ ಸೂಚನೆಯಂತೆ ಕೆಲ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಲಾ ಯಿತು. ನಂತರ ವಿವಾದಕ್ಕೆ ತೆರೆಬಿತ್ತು.

ಆತುರದಿಂದಾದ ಪ್ರಮಾದ: ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ಪಾಲಿಕೆ ಅಧಿಕಾರಿಗಳು ಪೂರಕ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದಿರುವುದು ಜಪ್ತಿ ಮಾಡಿದ ಹುಕ್ಕಾಬಾರ್‌ಗಳು ಪುನರಾರಂಭಗೊಳ್ಳಲು ಕಾರಣವಾಯಿತು ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ಒಪ್ಪಿಕೊಂಡ ಪ್ರಸಂಗ ನಡೆಯಿತು. ಕಾಂಗ್ರೆಸ್‌ನ ಆರ್‌.ಸಂಪತ್‌ರಾಜ್‌, ಜಪ್ತಿ ಮಾಡಿದ 14 ಹುಕ್ಕಾಬಾರ್‌ಗಳು ಮತ್ತೆ ಆರಂಭವಾಗಿದ್ದರೂ ಜಪ್ತಿ ಮಾಡದಿರುವುದಕ್ಕೆ ಕಾರಣವೇನು? ಮತ್ತೆ ಆರಂಭಿಸಲು ಅವಕಾಶ ನೀಡಿದ್ದು ಏಕೆ? ಎಂಬ ಆಕ್ಷೇಪಕ್ಕೆ ಸಭೆಯಲ್ಲಿ ಆಯುಕ್ತರು ಈ ಸಮಜಾಯಿಷಿ ನೀಡಿದರು.

Advertisement

ದಾಳಿ ನಡೆಸಿದ ಹುಕ್ಕಾಬಾರ್‌ಗಳ ವಿರುದ್ಧ ನೋಟಿಸ್‌ ಜಾರಿ ಮಾಡಿ, ದಂಡ ಪಾವತಿಸಲು ಸೂಚಿಸಬೇಕಿತ್ತು. ನಂತರ ಆ ನೋಟಿಸ್‌ಗೆ ಸಮಜಾಯಿಷಿ ನೀಡುವವರೆಗೆ ಕಾದು ಬಳಿಕ ಸಮಜಾಯಿಷಿ ಒಪ್ಪಲು ಸಾಧ್ಯವಿಲ್ಲ ಎಂದು ಬೀಗ ಜಡಿಯಬೇಕಿತ್ತು. ಆದರೆ, ಅಧಿಕಾರಿಗಳು ನೋಟಿಸ್‌ ಕೊಟ್ಟ ತಕ್ಷಣ ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು. ಮಾಜಿ ಮೇಯರ್‌ ಬಿ.ಎನ್‌.ಮಂಜುನಾಥ್‌ ರೆಡ್ಡಿ, ನಗರದಲ್ಲಿರುವ ಎಲ್ಲ 400 ಹುಕ್ಕಾಬಾರ್‌ಗಳನ್ನು ಬಂದ್‌ ಮಾಡಬೇಕು. ಇದಕ್ಕಾಗಿ ಪೊಲೀಸ್‌ ನೆರವು ಪಡೆಯಬೇಕು ಎಂದು ಸಲಹೆ ಮಾಡಿದರು.

ಸದಸ್ಯರ ವಿರುದ್ಧವೇ ದೂರು
ವಿಜಯನಗರದಲ್ಲಿ ಸ್ವತ್ಛತೆಗೆ ಮುಂದಾದ ತಮ್ಮ ವಿರುದ್ಧವೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಿಜೆಪಿ ಸದಸ್ಯೆ ಶ್ರೀಲತಾ ಪ್ರಸ್ತಾಪಿಸಿದಾಗ ಅಧಿಕಾರಿ ವಿರುದ್ಧ ಮೇಯರ್‌ ಸೇರಿದಂತೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಇದು ಅತ್ಯಂತ ಖಂಡನೀಯ. ತಮ್ಮ ವಾರ್ಡ್‌ ಸ್ವತ್ಛತೆ ಸೇರಿದಂತೆ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಆಯಾ ವಾರ್ಡ್‌ನ ಜನಪ್ರತಿನಿಧಿಯ ಕರ್ತವ್ಯ. ಅಧಿಕಾರಿಯ ಈ ವರ್ತನೆ ಅಕ್ಷಮ್ಯ. ಕೂಡಲೇ ದೂರು ಹಿಂಪಡೆದು, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಸೂಚಿಸಿದರು.

ಸಭೆ ಆರಂಭದಲ್ಲಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮಿಲ್ಲರ್‌ ಟ್ಯಾಂಕ್‌ಬಂಡ್‌ ಪ್ರದೇಶದ ಮೂರು ಎಕರೆ ಜಾಗಕ್ಕೆ ಸಂಬಂಧಪಟ್ಟಂತೆ ಗೋಲ್‌ಮಾಲ್‌ ನಡೆದಿದೆ. ಖಾತೆ ವಿಂಗಡಣೆ ಮಾಡಬಾರದೆಂಬ ಸುತ್ತೋಲೆ ಇದ್ದರೂ ಕ್ರೆಸೆಂಟ್‌ ರಸ್ತೆಯಲ್ಲಿರುವ ಸ್ವತ್ತಿನ ಸಂಖ್ಯೆ 9ರ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಪೂರಕ ದಾಖಲೆಗಳಿಲ್ಲದಿದ್ದರೂ ನರಸಮ್ಮ ಮತ್ತು ದಿನಾÒ ಟ್ರಸ್ಟ್‌ ನಡುವೆ ಪರಭಾರೆ ನಡೆದಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ಮತ್ತು ಸಹಾಯಕ ಕಂದಾಯ ಅಧಿಕಾರಿಯನ್ನು ಮಂಗಳವಾರ ಅಮಾನತು ಮಾಡಲಾಗುವುದು ಎಂದರು.

20 ದಿನದಲ್ಲಿ ಅಕ್ರಮ ಫ‌ಲಕ ತೆರವಿಗೆ ಕ್ರಮ
ಮಾಜಿ ಮೇಯರ್‌ ಎನ್‌.ಶಾಂತಕುಮಾರಿ ಮಾತನಾಡಿ, ಮಾರುತಿ ಮಂದಿರ ಆವರಣದಲ್ಲಿರುವ ಜಾಹೀರಾತು ಫ‌ಲಕ ತೆರವಿಗೆ ವರ್ಷದ ಹಿಂದೆಯೇ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆಯುಕ್ತರು ಕ್ರಮಕ್ಕೆ ಸೂಚಿಸಿದ್ದರೂ ಫ‌ಲಕ ತೆರವಾಗಿಲ್ಲ. ಹಾಗಾದರೆ, ಸದಸ್ಯರ ಮನವಿ ಹಾಗೂ ಆಯುಕ್ತರ ಆದೇಶಕ್ಕೆ ಬೆಲೆಯೇ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಸೇರಿದಂತೆ ಇತರರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌, ನಗರದಲ್ಲಿ 5,507 ಅನಧಿಕೃತ ಜಾಹೀರಾತು ಫ‌ಲಕಗಳಿದ್ದು, ದಂಡ ರೂಪದಲ್ಲಿ 150 ಕೋಟಿ ರೂ. ಸಂಗ್ರಹವಾಗಬೇಕು. ಆದರೆ, 4 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳಲ್ಲೂ ತೀರ್ಪು ಪಾಲಿಕೆ ಪರವಾಗಿ ಬಂದಿದ್ದು, ಕೋರ್ಟ್‌ ಸೂಚನೆಯಂತೆ ಜಾಹೀರಾತುದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

150 ಕೋಟಿ ರೂ. ಬಡ್ಡಿ ಮತ್ತು 33 ಕೋಟಿ ರೂ. ದಂಡ, ಅಸಲು ಸೇರಿದಂತೆ ಒಟ್ಟಾರೆ 333 ಕೋಟಿ ರೂ. ಬರಬೇಕಿದೆ. ಫೆ.10ರೊಳಗೆ ಜಾಹೀರಾತುದಾರರು ಹಣ ಪಾವತಿಸದಿದ್ದರೆ, ಯಾವುದೇ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ ಎಂದರು. ಅದರಂತೆ ಕೇವಲ ಜಾಹೀರಾತು ಪ್ರದರ್ಶನ ಫ‌ಲಕ ತೆರವಿನ ಜತೆಗೆ ಸಾಧನವನ್ನೂ ಆಮೂಲಾಗ್ರವಾಗಿ ಕಿತ್ತುಹಾಕಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಟೆಂಡರ್‌ ಕರೆಯಲಾಗುವುದು. ಒಂದೊಮ್ಮೆ ಟೆಂಡರ್‌ಗೆ ಯಾರೊಬ್ಬರು ಸ್ಪಂದಿಸದಿದ್ದರೆ ಪಾಲಿಕೆ ವತಿಯಿಂದಲೇ 20 ದಿನಗಳಲ್ಲಿ ತೆರವುಗೊಳಿಸಲಿದೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next