Advertisement

ಮದ್ದುಗುಡ್ಡೆ: ಮತ ಬಹಿಷ್ಕಾರ ಹಿಂದೆಗೆಸಿದ ಅಧಿಕಾರಿ

11:00 PM Mar 29, 2019 | sudhir |

ಕುಂದಾಪುರ: ಮದ್ದುಗುಡ್ಡೆ ಪರಿಸರದಲ್ಲಿ ತ್ಯಾಜ್ಯ ನೀರು ಮನೆಯಂಗಳಕ್ಕೆ ನುಗ್ಗುತ್ತದೆ ಎಂದು ಪ್ರತಿಭಟಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾಗಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರ ಮನವೊಲಿಸಿ ಮತದಾನ ಮಾಡುವಂತೆ ಮನ ಪರಿವರ್ತನೆ ಮಾಡಿದರು.

Advertisement

ಇಲ್ಲಿನ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆಯಲ್ಲಿ ಬಹುತೇಕ ಮನೆಗಳ ಎದುರು ಪ್ರತಿ 15 ದಿನಗಳಿಗೊಮ್ಮೆ ತ್ಯಾಜ್ಯ ನೀರಿನ ಸಂಗ್ರಹ, ಅದರಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳು, ದುರ್ವಾಸನೆ, ಉಪ್ಪು ನೀರಿನಿಂದಾಗಿ ಅಸಾಧ್ಯ ಸೆಕೆ. ಇಲ್ಲಿ ವಾಸಿಸುವುದೇ ದುಸ್ತರ ಎಂಬ ಪರಿಸ್ಥಿತಿ. ಮದ್ದುಗುಡ್ಡೆಯಲ್ಲಿ ಹರಿಯುವ ರಾಜಕಾಲುವೆಯನ್ನು ರಸ್ತೆಯ ನೆಪದಿಂದ ಕಿರಿದುಗೊಳಿಸಲಾಗಿದೆ. ಇದೇ ಕಾಲುವೆಯಲ್ಲಿ ಸಮುದ್ರದ ಹಿನ್ನೀರ ುಹರಿದು ಬರುತ್ತದೆ. ಕಾಲುವೆಯನ್ನು ಕಾಂಕ್ರಿಟ್‌ ಮಾಡಿದ ಕಾರಣ ನೀರು ಇಂಗುವುದಿಲ್ಲ. ಸಮುದ್ರದ ಉಬ್ಬರ ಇಳಿತದ ಸಂದರ್ಭ ಇದರಲ್ಲಿ ಹರಿಯುವ ನೀರಿನ ಪ್ರಮಾಣದಲ್ಲಿ ಏರುಪೇರಾಗು ತ್ತದೆ. ಉಬ್ಬರದ ಸಂದರ್ಭ ನೀರು ಒಮ್ಮೆಲೆ ಹರಿದು ಬಂದು ಅನಂತರ ಇಳಿಯುತ್ತದೆ. ಆದರೆ ಹಾಗೆ ಹರಿದು ಬಂದ ನೀರು ಗದ್ದೆ, ಮನೆಯಂಗಳ ಎಂದು ಎಲ್ಲೆಂದರಲ್ಲಿ ಸಂಗ್ರಹವಾಗಿ ಕಾಲುವೆಯನ್ನು ಮರಳಿ ಸೇರದೆ ಸಮುದ್ರಕ್ಕೂ ಹೋಗದೇ ಸಮಸ್ಯೆಯಾಗಿದೆ. ಇದೇ ಕಾಲುವೆಗೆ ಕೆಲವರು ತ್ಯಾಜ್ಯ ನೀರನ್ನೂ ಬಿಡುತ್ತಾರೆ.

ಕಾಲುವೆ ಎದುರು ಒಂದು ಅಣೆಕಟ್ಟು ಇದ್ದು ಇದರ ಹಲಗೆ ಹಾಕಿ ಕಾಮಗಾರಿ ಮಾಡಲಾಗಿದೆ. ಅದಕ್ಕಾಗಿ ಹಿನ್ನೀರು ಬರುವುದನ್ನು ತಡೆಯಲಾಗಿದೆ.

ಕಾಮಗಾರಿ ಮುಗಿದು ಮೂರುದಿನವಷ್ಟೇ ಆಗಿದ್ದು ತಡೆ ತೆಗೆದಿಲ್ಲ. ಹಿನ್ನೀರು ಬರದ ಕಾರಣ ತ್ಯಾಜ್ಯ ನೀರು ಬಾಕಿಯಾಗಿದೆ. ಸೊಳ್ಳೆ ಉತ್ಪತ್ತಿಯ ತಾಣವಾಗಿದೆ.
ಇದಕ್ಕಾಗಿ ಸ್ಥಳೀಯರು ಸಮಸ್ಯೆ ಬಗೆಹರಿಸದ ಹೊರತು ಚುನಾವಣಾ ಬಹಿಷ್ಕಾರ ಹಾಕುವುದಾಗಿ ಬ್ಯಾನರ್‌ ಅಳವಡಿಸಿದ್ದರು. ಮಾಹಿತಿ ತಿಳಿದು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭೇಟಿ ನೀಡಿದರು. ಸ್ಥಳೀಯರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಮೊದಲು ಸ್ಥಳೀಯರು ಒಪ್ಪದಿದ್ದರೂ ನಂತರ ಚುನಾವಣಾ ಬಹಿಷ್ಕಾರ ಹಿಂತೆಗೆದು ಮತ ಚಲಾಯಿಸುವುದಾಗಿ ಹೇಳಿದರು.

ಇಲ್ಲಿನ ಸಮಸ್ಯೆ ಕುರಿತು ಉದಯವಾಣಿ ಜ.1ರಂದು ವರದಿ ಮಾಡಿತ್ತು. ತತ್‌ಫ‌ಲವಾಗಿ ಇಲ್ಲಿ ಒಂದಷ್ಟು ಬದಲಾವಣೆ, ಕಾಮಗಾರಿ ಮಾಡಲಾಗಿದೆ.

Advertisement

ಮತದಾನಕ್ಕೆ ಒಪ್ಪಿದ್ದಾರೆ
ಲಭ್ಯ ಸಂಪನ್ಮೂಲ ಬಳಸಿ ತತ್‌ಕ್ಷಣ ಪರಿಹಾರ ಒದಗಿಸಲಾಗುವುದು. ಉಳಿಕೆ ಬೇಡಿಕೆ ಈಡೇರಿಸಲು ದೊಡ್ಡ ಮೊತ್ತದ ಅನುದಾನ ಅಗತ್ಯವಿದ್ದು ಇದಕ್ಕಾಗಿ ಸರಕಾರಕ್ಕೆ ಬರೆಯಲಾಗುವುದು ಎಂದು ಹೇಳಿದ್ದೇವೆ. ಚುನಾವಣಾ ಬಹಿಷ್ಕಾರ ಹಿಂತೆಗೆದುಕೊಂಡಿದ್ದಾರೆ.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next