ಬೀಳಗಿ: ಇಡೀ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಹಾಗೂ ರಾಜ್ಯದ ಮೊದಲ ಸಕ್ಕರೆ ಕಾರ್ಖಾನೆ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಷ್ಟದಲ್ಲಿರುವ ಅಲ್ಲಿನ ರೈತರ ಕಣ್ಣೀರೊರೆಸುವ ಪ್ರಾಮಾಣಿಕ ಪ್ರಯತ್ನ ಜನ್ಮಭೂಮಿ ಬೀಳಗಿಯಿಂದ ಆಗುತ್ತಿರುವುದು ನನಗೆ ಹೆಮ್ಮೆಯ ವಿಷಯ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ-ಮೈಸೂರಲ್ಲಿ ಇರುವ 9 ಸಕ್ಕರೆ ಕಾರ್ಖಾನೆಗಳಲ್ಲಿ 6 ಕಾರ್ಖಾನೆಗಳು ತಮಿಳುನಾಡಿನವರ ಒಡೆತನದಲ್ಲಿದ್ದರೆ, ಇನ್ನುಳಿದ ಮೂರು ಕಾರ್ಖಾನೆಗಳು ಬಂದ್ ಆಗಿವೆ. ಕಾರಣ, ಸಕ್ಕರೆ ನಾಡು ಖ್ಯಾತಿಯ ಮಂಡ್ಯದಲ್ಲಿ ಪುನಃ ಕಬ್ಬು ಅರೆಯುವ ಮೂಲಕ ಸಕ್ಕರೆ ನಾಡಿನ ಕೀರ್ತಿ ಹೆಚ್ಚಿಸುವ ಆತ್ಮವಿಶ್ವಾಸ ನನಗಿದೆ ಎಂದರು.
ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಭೇದ ಮಾಡದೇ ಸಹೋದರತೆ ಭಾವದಿಂದ ಅಖಂಡ ಕರ್ನಾಟಕದ ಅಳಿಲು ಸೇವೆ ಮಾಡುವ ಸದಿಚ್ಛೆ ನನ್ನದಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭಿಸುವ ಕುರಿತು ಅಲ್ಲಿನ ಎಲ್ಲ ವರ್ಗದ ಜನಾಭಿಪ್ರಾಯ ಹಾಗೂ ಮಠಾಧೀಶರ ಆಶೀರ್ವಾದ ಪಡೆದುಕೊಂಡಿರುವೆ. ಕಾರ್ಖಾನೆಯ ಕಬ್ಬು ನುರಿಸುವ ಮಹತ್ಕಾರ್ಯಕ್ಕೆ ಅಲ್ಲಿನವರ ಸಂಪೂರ್ಣ ಸಹಕಾರ ಮತ್ತು ಸಲಹೆ ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಪಕ್ಷಾತೀತ ಮತ್ತು ಜಾತ್ಯತೀತವಾಗಿ ಕರ್ತವ್ಯದ ಕಡೆಗೆ ಗಮನಹರಿಸುವ ಮೂಲಕ ಎಲ್ಲರ ವಿಶ್ವಾಸ ಪಡೆದುಕೊಳ್ಳುವೆ. ಈಗಾಗಲೇ ಕಾರ್ಖಾನೆ ರಿಪೇರಿ ಕೆಲಸ ಆರಂಭವಾಗಿದೆ. ಸದ್ಯ 3500 ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆಯ ಅದೇ ಮಷಿನ್‌ಗಳಿಗೆ ಹೊಸ ಸ್ಪರ್ಶ ನೀಡುವ ಮೂಲಕ 4500ರಿಂದ 5000 ಟನ್ ಕಬ್ಬು ನುರಿಸುವ ಸಾಮರ್ಥ್ಯಕ್ಕೆ ಕಾರ್ಖಾನೆ ಸಜ್ಜುಗೊಳಿಸುವುದಾಗಿ ತಿಳಿಸಿದರು.
1933ರಲ್ಲಿ ಕರುನಾಡಿನ ಭವಿಷ್ಯಕ್ಕಾಗಿ ಬುನಾದಿ ಹಾಕಿದ ಸಕ್ಕರೆ ಕಾರ್ಖಾನೆ ಪುನರುಜ್ಜೀವನಗೊಳಿಸುವ ಮೂಲಕ ನಾಡಿನ ರೈತರ ಸೇವೆಯ ಸದಾವಕಾಶ ಸದ್ಬಳಕೆ ಮಾಡಿಕೊಳ್ಳುವೆ. ಕೃಷ್ಣೆಯಿಂದ ಕಾವೇರಿಯವರೆಗೆ ಬೀಳಗಿ ನೆಲದ ಹೆಸರು ಬೆಳೆಗಬೇಕು ಹಾಗೂ ಜನಮಾನಸದಲ್ಲಿ ಸದಾಕಾಲ ಉಳಿಯುವಂತಾಗಬೇಕೆನ್ನುವುದೇ ನನ್ನ ಸದಾಶಯವಾಗಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಸಂಗಪ್ಪ ಕಟಗೇರಿ, ಮಲ್ಲಪ್ಪ ಶಂಭೋಜಿ, ಪಪಂ ಸದಸ್ಯ ವಿಠuಲ ಬಾಗೇವಾಡಿ ಇದ್ದರು.