Advertisement

ಮರಾಠಿಯಲ್ಲಿ ರಂಜಿಸಿದ ಪಂಡರಾಪುರಚಾ ಮಹಿಮಾ

05:34 PM Jun 27, 2019 | mahesh |

ಮಹಾರಾಷ್ಟ್ರದ ಮರಾಠಿಗರಿಗೆ ಯಕ್ಷಗಾನ ಅಭಿರುಚಿ ಹುಟ್ಟಿಸುವ ಸಲುವಾಗಿ ಪ್ರಸಂಗಕರ್ತ ಎಂ. ಟಿ. ಪೂಜಾರಿಯವರು ಪಂಡರಾಪುರದ ಪಾಂಡುರಂಗನ ಕುರಿತಾದ “ಪಂಡರಾಪುರಚಾ ಮಹಿಮಾ’ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಇದರ 17ನೇ ಪ್ರಯೋಗ ಇತ್ತೀಚೆಗೆ ಡೊಂಬಿವಲಿಯಲ್ಲಿ ನಡೆಯಿತು. ಯಕ್ಷ ಕಲಾತರಂಗ ಮೇಳದವರು ಈ ಪ್ರಸಂಗವನ್ನುಪ್ರದರ್ಶಿಸಿದರು. ಇದು ಇಲ್ಲಿನ ಕೊಂಕಣಿ, ಮರಾಠಿ ಭಾಷಿಗರಿಗೆ ಯಕ್ಷಗಾನದ ಸವಿಯನ್ನು ಉಣ್ಣಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಮರಾಠಿ ಭಾಷೆಯಲ್ಲಿ ಪದ್ಯ, ಅರ್ಥಗಳನ್ನು ರಚಿಸಿ ಇಲ್ಲಿನ ಮರಾಠಿ ಭಾಷಿಗರಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಮರಾಠಿ ಭಾಷೆಯಲ್ಲಿ ಯಕ್ಷಕಲಾತರಂಗ ಮಂಡಳಿ ಯಕ್ಷಗಾನ ಪ್ರದರ್ಶನ ಪ್ರಾರಂಭಿಸಿದ ಕೀರ್ತಿಗೆ ಪಾತ್ರವಾಯಿತು.

Advertisement

ಭಾಗವತರಾಗಿ ರವಿ ಆಚಾರ್ಯರವರ ಇಂಪಾದ ಮರಾಠಿ ಭಾಷೆಯಲ್ಲೇ ಭಾಗವತಿಕೆ, ಮಧು ಪಾನ್‌ ಹಾಗೂ ಪ್ರವೀಣ್‌ ಶೆಟ್ಟಿಯವರ ಚೆಂಡೆ ಮದ್ದಳೆಯ ಕೈಚಳಕ ಪ್ರದರ್ಶನಕ್ಕೊಂದು ಹೊಸ ಹುರುಪು ತಂದಿತ್ತು. ಪುಂಡಲಿಕನಾಗಿ ಬಡಗು, ತೆಂಕು ತಿಟ್ಟಿನ ಸವ್ಯಸಾಚಿ ವಿಠಲ ಪ್ರಭು ಕುಕ್ಕೆಹಳ್ಳಿಯವರ ಅಮೋಘ ಅಭಿನಯ ಕರತಾಡನಕ್ಕೆ ಕಾರಣವಾಯಿತು. ಚಂದ್ರಾಳ ಪಾತ್ರದಲ್ಲಿ ಕು| ಅಂಕಿತ ನಾಯಕ್‌ ವೃತ್ತಿ ಮೇಳದ ಸ್ತ್ರೀ ಪಾತ್ರಕ್ಕೆ ಸರಿಸಾಟಿಯಾಗಿ ಅಭಿನಯಿಸಿದರು. ಕೃಷ್ಣನಾಗಿ ಕು| ಪ್ರತೀಕ್ಷಾ ನಾಯಕ್‌ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಉಳಿದಂತೆ ಗೋವಿಂದ ಸಪಲಿಗರವರ ಕಾಯವ, ರಾಧೆಯಾಗಿ ಶಿವಾನಿ ಪ್ರಭು, ರುಕ್ಮಿಣಿಯಾಗಿ ದಿಶಾ ಗೌಡ, ದೇವರಾಯನಾಗಿ ವಾಸುದೇವ ಶೆಣೈ, ಸತ್ಯವತಿಯಾಗಿ ಮೀನಾ ಕ್ಷೀರ್‌ಸಾಗರ್‌, ಮುಚುಕಂದನಾಗಿ ಎಸ್‌. ಕೆ. ನಾಯಕ್‌, ಕೃಷ್ಣಮೂರ್ತಿಯಾಗಿ ಕೃಷ್ಣ ನಾಯಕ್‌, ಕುಕುಟ ಮುನಿಯಾಗಿ ಟಿ. ವಿ. ಶೆಣೈ, ಕೃಷ್ಣನಾಗಿ ಸದಾನಂದ ನಾಯಕ್‌, ಬಾಲಗೋಪಾಲರಾಗಿ ಕೃಪಾ ಹಾಗೂ ಅವಿಷ್ಕಾರ್‌ವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದರು. ಸುಮಾರು ಮೂರು ತಾಸಿನ ಈ ಯಕ್ಷಗಾನ ಪ್ರದರ್ಶನ ಪಂಡರಾಪುರದ ಪಾಂಡುರಂಗ ವಿಠನ ಮಹಿಮೆಯನ್ನು ಸಮರ್ಥವಾಗಿ ಬಿಂಬಿಸಿತು.

ಜಯರಾಮ್‌ ಜಿ. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next