ಪಂಡರಪುರ: ವಿಠ್ಠಲ..ವಿಠ್ಠಲ ಎಂದು ಸ್ತುತಿಸುತ್ತ ಪಂಢರಪುರ ವಿಠ್ಠಲನಿಗೆ ಏಕಾದಶಿ ಉಪವಾಸ ವ್ರತಾಚರಣೆ ಮಾಡಿ ಭಕ್ತಿ ಪಾರಮ್ಯ ಮೆರೆದಿದ್ದ ವಾರಕರಿ ಭಕ್ತರು, ಶನಿವಾರ ಆಷಾಢ ದ್ವಾದಶ ದರ್ಶನ ಪಡೆದು ತವರಿನತ್ತ ಮುಖ ಮಾಡಿದರು.
Advertisement
ಏಕಾದಶಿಗೆ ಮುನ್ನ ಕೆಲ ದಿನಗಳಿಂದಲೇ ವಾರಕರಿ ಭಕ್ತರಿಂದ ತುಂಬಿ ತುಳುಕುತ್ತಿದ್ದ ಫಂಡರಪುರ ಶ್ರೀಕ್ಷೇತ್ರ ಶುಕ್ರವಾರ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಹಂತದಲ್ಲಿ ಭಕ್ತರ ಸಂಖ್ಯೆ 11ರಿಂದ 12 ಲಕ್ಷಕ್ಕೆ ಏರಿತ್ತು. ಏಕಾದಶಿ ಉಪವಾಸ ಹಾಗೂ ಚಂದ್ರಭಾಗಾ ನದಿಯಲ್ಲಿ ಪುಣ್ಯಸ್ನಾನ, ತಮ್ಮ ಆರಾಧ್ಯ ದೈವ ಪಂಢರಿನಾಥ ವಿಠ್ಠಲನ ದರ್ಶನ ಪಡೆದು, ಮಹಾ ರಥೋತ್ಸವದ ಮೆರವಣಿಗೆ ಕಣ್ತುಂಬಿಕೊಂಡು ಹರಕೆ ತೀರಿಸಿ ಕೃತಾರ್ಥತೆ ಪಡೆದು ಶ್ರೀಕ್ಷೇತ್ರದಲ್ಲೇ ತಂಗಿದ್ದರು. ಏಕಾದಶಿ ದಿನ ಇಡಿ ರಾತ್ರಿಯೂ ಪಂಢರಪುರ ಶ್ರೀಕ್ಷೇತ್ರದ ತುಂಬೆಲ್ಲ ವಾರಕರಿ ಭಕ್ತರು ದಂಡು ದಂಡಾಗಿ ಸುತ್ತುತ್ತಿದ್ದ ಕಾರಣ ಪಂಢರಪುರ ರಾತ್ರಿ ಕೂಡ ಎದ್ದು ಕುಳಿತಿತ್ತು.
Related Articles
Advertisement
ವಾರಕರಿ ಭಕ್ತರ ಬಹು ಬೇಡಿಕೆಯ ಫಳಹಾರ ಪೂರೈಕೆಗೆ ಬೀದಿ ಬದಿಯಲ್ಲಿ ಎಲ್ಲೆಡೆ ಫಳಹಾರ ವ್ಯಾಪಾರಿ ಮಳಿಗೆಗಳು ತಲೆ ಎತ್ತಿದ್ದವು. ಬೆಂಡು, ಬೆತ್ತಾಸ, ಚುರುಮರಿ, ಬಡಂಗ ಸೇರಿದಂತೆ ವಿವಿಧ ಬಗೆಯ ಖಾದ್ಯಪ್ರಸಾದ ಖರೀದಿಯಲ್ಲಿ ತೊಡಗಿದ್ದರು.
ವಾರ-ಎರಡು ವಾರಗಳಿಂದ ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ಬಂದಿದ್ದ ವಾರಕರಿ ಭಕ್ತರು, ದ್ವಾದಶ ದಿನ ಊರಿಗೆ ಮರಳಲು ವಾಹನ ಏರಿದ್ದರು. ಕೆಲವು ದಿಂಡಿ ಯಾತ್ರಿಗಳು ತಮ್ಮೊಂದಿಗೆ ಸರಕು ಹೊತ್ತು ತಂದಿದ್ದ ವಾಹನದಲ್ಲೇ ತವರಿಗೆ ಮರಳಿದರು. ಪಂಢರಪುರ ಏಕಾದಶಿ ಜಾತ್ರೆಯ ಭಕ್ತರ ಅನುಕೂಲಕ್ಕಾಗಿ ಮಹಾರಾಷ್ಟ್ರ ಮಾತ್ರವಲ್ಲ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಿಂದ ನೂರಾರು ಬಸ್‌ಗಳು ವಿಶೇಷ ಸಾರಿಗೆ ಕಲ್ಪಿಸಿದ್ದವು. ವಾಹನ ಸೌಲಭ್ಯ ಇಲ್ಲದೇ ಕೇವಲ ಪಾದಯಾತ್ರೆಯಲ್ಲಿ ಬಂದಿದ್ದ ವಾರಕರಿಗಳು ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳು ಜಾತ್ರೆಯ ನಿಮಿತ್ತ ಓಡಿಸುತ್ತಿರುವ ಜಾತ್ರಾ ವಿಶೇಷ ಬಸ್‌ಗಳಲ್ಲಿ ತವರಿನತ್ತ ವಿಠ್ಠಲ..ವಿಠ್ಠಲ.. ಎನ್ನುತ್ತ ಪ್ರಯಾಣ ಬೆಳೆಸಲು ನೆರವಾಗಿತ್ತು.