Advertisement

ಪಂಚಮಸಾಲಿ, ಒಕ್ಕಲಿಗ ಮೀಸಲಾತಿ ಓಟಕ್ಕೆ  ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ

09:47 PM Jan 12, 2023 | Team Udayavani |

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸಿ ಮೀಸಲಾತಿ ನೀಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಗುರುವಾರ ಹೈಕೋರ್ಟ್‌ ಆದೇಶಿಸಿದೆ.

Advertisement

ಪಂಚಮಸಾಲಿ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸಬಾರದು ಎಂದು ಕೋರಿ ಬೆಂಗಳೂರು ನಿವಾಸಿ ಡಿ.ಜಿ. ರಾಘವೇಂದ್ರ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರ ವಿಚಾರಣೆಗೆ ಪಟ್ಟಿಯಾಗಿತ್ತು.

ಆದರೆ ದಿನದ ಕಲಾಪದ ಸಮಯ ಮುಗಿದದ್ದರಿಂದ ಅರ್ಜಿ ವಿಚಾರಣೆಗೆ ಬರಲಿಲ್ಲ. ಮುಖ್ಯ ನ್ಯಾಯಮೂರ್ತಿಯವರು ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದಾಗ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್‌ ವಿಷಯ ಪ್ರಸ್ತಾವಿಸಿದರು. ಅರ್ಜಿಯ ವಿಚಾರಣೆಗೆ ಸಮಯದ ಅಭಾವವಿದ್ದ ಕಾರಣಕ್ಕೆ ಪ್ರಕರಣದಲ್ಲಿ ಉಭಯ ಪಕ್ಷಗಾರರು ಮುಂದಿನ ಆದೇಶದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಜ. 30ಕ್ಕೆ ಮುಂದೂಡಿತು.

ಸದ್ಯಕ್ಕೆ ಹಿನ್ನಡೆ
ಮೀಸಲಾತಿ ಪ್ರಕರಣದಲ್ಲಿ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿರುವುದರಿಂದ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಲು ಹೊಸ ಪ್ರವರ್ಗಗಳನ್ನು ಸೃಷ್ಟಿಸಿದ ಸರಕಾರ ನಡೆಗೆ ತಾತ್ಕಾಲಿಕ ತಡೆ ಬಿದ್ದಿದೆ. ಇದರಿಂದಾಗಿ ಮೀಸಲು ಹೋರಾಟಗಾರರು ಮತ್ತು ರಾಜ್ಯ ಸರಕಾರಕ್ಕೆ ಸದ್ಯ ಹಿನ್ನಡೆ ಉಂಟಾಗಿದೆ. ಹೈಕೋರ್ಟ್‌ನ ಮಧ್ಯಾಂತರ ಆದೇಶದಿಂದ ಮೀಸಲಾತಿ ವಿವಾದಕ್ಕೆ ಹೊಸ ತಿರುವು ಸಿಕ್ಕಂತಾಗಿದ್ದು, ಹೊಸದಾಗಿ ಸೃಷ್ಟಿಸಲಾಗಿರುವ 2ಸಿ ಮತ್ತು 2ಡಿ ಪ್ರವರ್ಗಗಳ ವಿಚಾರದಲ್ಲಿ ಸರಕಾರ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳದಂತೆ ಕಟ್ಟಿಹಾಕಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next