Advertisement

“ಪಂಚಾಯತ್‌ನ ಅಭಿವೃದ್ಧಿ ಕಾರ್ಯ ಶ್ಲಾಘನೀಯ ’

08:28 PM Oct 16, 2021 | Team Udayavani |

ಕೊಲ್ಲೂರು: ಜಡ್ಕಲ್‌ ಪ್ರಕೃತಿ ದತ್ತವಾದ ಸುಂದರ ಗ್ರಾಮ. ಹಳ್ಳಿಯ ಶಾಲೆಗಳು, ಗ್ರಾ. ಪಂ. ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ಕ್ರಮಗಳು ಗಮನಾರ್ಹವಾಗಿದೆ. ಇಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಬೇಡಿಕೆಗಳು, ಇಲಾಖಾ ಮಟ್ಟದಿಂದ ಆಗ ಬೇಕಾದ ಕೆಲಸಗಳು, ಸ್ಥಳೀಯ ಆಡಳಿತ ಹಾಗೂ ಜಿಲ್ಲಾಡಳಿತದ ಮೂಲಕ ಆಗಬೇಕಾದ ಯೋಜನೆ ಗಳನ್ನು ಒಗ್ಗೂಡಿಸಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಹೇಳಿದರು.

Advertisement

ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಬೀಸಿನಪಾರೆಯಲ್ಲಿರುವ ಶ್ರೀ ಮೂಕಾಂಬಿಕಾ ದೇಗುಲದ ಪ್ರೌಢಶಾಲೆಯ ಸಭಾಂಗಣದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’, ಜಿಲ್ಲಾ ಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಮಾತನಾಡಿ, ಜಡ್ಕಲ್‌, ಮುದೂರು ಎರಡು ಗ್ರಾಮಗಳನ್ನು ಒಳಗೊಂಡ ದೊಡ್ಡ ಪಂಚಾಯತ್‌ ಆಗಿದ್ದು ಮುದೂರು ಗ್ರಾಮ ಪಂಚಾಯತ್‌ ಕಟ್ಟಡಕ್ಕೆ ಸ್ಥಳವನ್ನು ಗುರುತಿಸಿ ಕಾದಿರಿಸುವ ಕೆಲಸ ಆಗಬೇಕು. ಜಡ್ಕಲ್‌ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸ್ಥಳವನ್ನು ಗುರುತು ಪಡಿಸಿ ಗ್ರಾ.ಪಂ. ವಶಕ್ಕೆ ನೀಡಬೇಕು, ಜಡ್ಕಲ್‌, ಮುದೂರು ಬಹು ವಿಸ್ತೃತ ಹಾಗೂ ಕುಗ್ರಾಮಗಳನ್ನು ಒಳಗೊಂಡ ಗ್ರಾಮವಾದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವಶ್ಯಕತೆ ಇದೆ. 94ಸಿ ಅರ್ಜಿ ಸಲ್ಲಿಸಿದವರು ಸಾಕಷ್ಟು ಸಂಖ್ಯೆಯಲ್ಲಿದ್ದು ಮಂಜೂರಾತಿ ನೀಡುವ ಕೆಲಸ ಆಗಬೇಕಿದೆ, ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ, ಎಸ್‌.ಆರ್‌.ಟಿ ಫೈಲ್‌ಗ‌ಳನ್ನು ಶೀಘ್ರ ಇತ್ಯರ್ಥಗೊಳಿಸುವ ಕಾರ್ಯ ಆಗಬೇಕು.

ಎಸ್‌.ಎಲ್‌.ಆರ್‌.ಎಂ. ಘಟಕ ನಿರ್ಮಾಣಕ್ಕೆ ಈ ಹಿಂದೆ ಹಾಲ್ಕಲ್‌ನಲ್ಲಿ 30 ಸೆಂಟ್ಸ್‌ ಜಾಗ ಕಾದಿರಿಸಿದ್ದು ಪಕ್ಕದಲ್ಲಿ ಪ.ಪಂಗಡದ ಕುಟುಂಬವಿದ್ದು, ಅಲ್ಲಿ ಕಸ ವಿಲೇವಾರಿ ಮಾಡಿದರೆ ಅಲ್ಲಿನವರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಎಸ್‌.ಎಲ್‌.ಆರ್‌.ಎಂ. ಘಟಕಕ್ಕೆ ಬೇರೆಡೆ ಜಾಗ ಕಾದಿರಿಸಬೇಕು ಎನ್ನುವ ಬೇಡಿಕೆ ಪಟ್ಟಿ ಸಲ್ಲಿಸಿದರು.

ಶೇ. 95 ಲಸಿಕೆ ನೀಡಿಕೆ
ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮಾತನಾಡಿ, ಜಿಲ್ಲೆಯಲ್ಲಿ ಶೇ. 95 ಪ್ರತಿಶತ ಪ್ರಥಮ ಸುತ್ತಿನ ಕೋವಿಡ್‌ ಲಸಿಕೆ ನೀಡಲಾಗಿದೆ. ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಮಟ್ಟದಲ್ಲಿ ಲಸಿಕಾಕರಣ ಆಗಿದೆ. ಎರಡನೇ ಡೋಸ್‌ ಅನ್ನು ಕೂಡ ಎಲ್ಲರಿಗೂ ಕಲ್ಪಿಸಲಾಗು ತ್ತದೆ ಎಂದರು.

Advertisement

ಇದನ್ನೂ ಓದಿ:ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

ಮೆಕ್ಕೆಗೆ ಹೊಸ ಅಂಗನವಾಡಿ ಬೇಡಿಕೆ
ಮೆಕ್ಕೆ ಪರಿಸರದಲ್ಲಿ ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಬೇಡಿಕೆ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅ ಧಿಕಾರಿಗಳು 400-800 ಜನವಸತಿ ಇದ್ದರೆ ಅಲ್ಲಿ ಅಂಗನವಾಡಿ ನೀಡಲಾಗುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಮಾತನಾಡಿ, ಎರಡು ವಾರದ ಒಳಗಡೆ ಪರಿಶೀಲಿಸಿ ಸಾಧ್ಯವಾಗುವುದಾದರೆ ಪ್ರಸ್ತಾವನೆ ಸಲ್ಲಿಸಿ, ಅಸಾಧ್ಯವಾದರೆ ಹಿಂಬರಹ ಕೊಡಿ. ಜತೆಯಲ್ಲಿ ಮಿನಿ ಅಂಗನವಾಡಿಯಾದರೂ ನೀಡಲು ಪ್ರಯತ್ನಿಸಿ ಎಂದು ಅಧಿ ಕಾರಿಗಳಿಗೆ ಸೂಚಿಸಿದರು.

ರುದ್ರಭೂಮಿಗೆ ಗಡಿ ಗುರುತು ಆಗಿಲ್ಲ
ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಶ್ಮಶಾನಕ್ಕೆ ಜಾಗ ಕಾದಿರಿಸಿದ್ದು ಇನ್ನೂ ಗಡಿ ಗುರುತು ಮಾಡಿಲ್ಲ ಎಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, 2 ವಾರದ ಒಳಗಡೆ ಗಡಿ ಗುರುತು ಮಾಡುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಪಾಳು ಬಿದ್ದ ಮುದೂರು ಆರೋಗ್ಯ ಕೇಂದ್ರಮುದೂರು ಆರೋಗ್ಯ ಕೇಂದ್ರ ಸಿಬಂದಿ ಇಲ್ಲದೇ ಪಾಳು ಬಿದ್ದಿದೆ. ಕೂಡಲೇ ಅಲ್ಲಿಗೆ ಸ್ಟಾಫ್ ನರ್ಸ್‌ ನಿಯೋಜಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಮುದೂರು ಭಾಗದಲ್ಲಿ ಲೋ ವೋಲ್ಟೇಜ್‌ ಸಮಸ್ಯೆಯಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. 7 ವರ್ಷವಾದರೂ ಹಾಲ್ಕಲ್‌ನ ಸಬ್‌ಸ್ಟೇಷನ್‌ ಇನ್ನೂ ಕಾರ್ಯಾರಂಭ ಮಾಡಿಲ್ಲ ಎಂದ ಸ್ಥಳೀಯರು ದೂರಿದರು.

ಅದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು ಸಬ್‌ ಸ್ಟೇಷನ್‌ ಕೆಲಸ ಶೇ. 90 ಮುಗಿದಿದ್ದು, ಪರಿಸರ ಸೂಕ್ಷ್ಮ ಪ್ರದೇಶದ ಸಮಸ್ಯೆ ಕಾಡುತ್ತಿದೆ. ಅರಣ್ಯ ಇಲಾಖೆಯಿಂದ ಸಮಸ್ಯೆ ಪರಿಹರಿಸಿದರೆ ಲೈನ್‌ ಅಳವಡಿಸಲು ಅನುಕೂಲವಾಗುತ್ತದೆ. ಈಗ 35-40 ಕಿ.ಮೀ. ದೂರದಿಂದ ಲೈನ್‌ ಮೂಲಕ ವಿದ್ಯುತ್‌ ಸರಬರಾಜು ಆಗುವುದರಿಂದ ಈ ಸಮಸ್ಯೆ ಆಗುತ್ತಿದೆ ಎಂದರು.

ಸೆಳ್ಕೋಡು ಶಾಲೆಗೆ ಭೇಟಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಡ್ಕಲ್‌ ಗ್ರಾ.ಪಂ.ಗೆ ಭೇಟಿ ನೀಡಿ ಗ್ರಂಥಾಲಯ, ವಿಕಲಚೇತನ ಕಾರ್ಯಾಲಯಕ್ಕೆ, ಬಳಿಕ ಸೆಳ್ಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.

ಮಕ್ಕಳೊಂದಿಗೆ ಕೆಲ ಹೊತ್ತು ಕಳೆದಅವರು ಶಾಲೆಯ ಕುಂದುಕೊರತೆಗಳನ್ನು ಮಕ್ಕಳಲ್ಲಿ ವಿಚಾರಿಸಿದರು. ವಿದ್ಯಾರ್ಥಿಗಳು ಅನ್‌ಲೈನ್ ತರಗತಿಯಿಂತ ನಿರಂತರ ತರಗತಿಯೇ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತ ಪಡಿದರು.

ಮುಖ್ಯ ಶಿಕ್ಷಕ ಭಾಸ್ಕರ್‌ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಂ.ಮುಂದಿನಮನಿ, ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ ಹಳನಾಡು, ಬಿಆರ್‌ಪಿ ಸುಧಾಕರ ದೇವಾಡಿಗ, ಸಿಆರ್‌ಪಿ ವಿಶ್ವನಾಥ ಮೇಸ್ತ, ಉಡುಪಿ ಡಿಡಿಪಿಐ ಕಚೇರಿ ವಿಷಯ ಪರಿವೀಕ್ಷಕಿ ಜಾಹ್ನವಿ, ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಶಿವಮೋನ್‌, ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ, ಉಪಾಧ್ಯಕ್ಷ ಮಹಾಬಲ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಸಚಂದ್ರನಾಯ್ಕ ಹರಕೋಡು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅಂಗವಿಕಲರ ಬಸ್‌ಪಾಸ್‌
ಖಾಸಗಿ ಬಸ್‌ಗೂ ಅನ್ವಯವಾಗಲಿ ಅಂಗವಿಕಲರಿಗೆ ಸರಕಾರಿ ಬಸ್‌ಗಳಲ್ಲಿ 100 ಕಿ.ಮೀ. ತನಕ ಬಸ್‌ಪಾಸ್‌ ನೀಡಲಾಗುತ್ತಿದ್ದು, ಈ ಭಾಗದಲ್ಲಿ ಸರಕಾರಿ ಬಸ್‌ ಸೌಲಭ್ಯ ಕಡಿಮೆ. ಹಾಗಾಗಿ ಬಸ್‌ ಪಾಸ್‌ಸೌಲಭ್ಯ ಖಾಸಗಿ ಬಸ್‌ಗಳಿಗೂ ಅನ್ವಯಗೊಳಿಸಬೇಕು. ಹಾಗೂ 100 ಕಿ.ಮೀ. ವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು.

ಸರಕಾರಿ ಶಿಕ್ಷಣ ಸಂಸ್ಥೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ರ್‍ಯಾಂಪ್‌ ಸಹಿತ ಅಂಗವಿಕಲರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ಗಳನ್ನು ಅನು ಷ್ಠಾನಿಸಬೇಕು. ಪಂಚಾಯತ್‌ಗಳಲ್ಲಿ ಅಂಗವಿಕಲರ ಅಭಿವೃದ್ಧಿಗೆ ಶೇ. 5 ಅನುದಾನವನ್ನು ಸದ್ವಿನಿಯೋಗ ಗೊಳಿಸಬೇಕು ಎಂದು ಸ್ಥಳೀಯ ರಾಜು ಪೂಜಾರಿ ಅಹವಾಲು ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಈ ಬಗ್ಗೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ವಿಷಯ ಪ್ರಸ್ತಾವಿಸಲಾಗುವುದು. ವ್ಯಾಪ್ತಿಯ ವಿಸ್ತರಣೆಯ ಬಗ್ಗೆ ಸರಕಾರ ಕ್ಕೆ ಪತ್ರ ಬರೆಯಲಾಗುವುದು ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲರ ಕಾರ್ಯಕ್ರಮ ಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಸೂಚಿಸಲಾಗುವುದು. ಶೇ. 5 ಅನುದಾನ ಪಂಚಾಯತ್‌ ನಗರ ಸಭೆಗಳಲ್ಲಿ ಸದ್ವಿನಿಯೋಗ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next