ಬಾಗಲಕೋಟೆ: ಹೆಸ್ಕಾಂಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕ ಪಾವತಿಯ ಹೊಣೆ ಆಯಾ ಗ್ರಾಪಂಗಳಿಗೆ ಸಂಬಂಧಿಸಿದ್ದು. ಅದು ಗ್ರಾಪಂ ಆಡಳಿತ ಮಂಡಳಿ ಜವಾಬ್ದಾರಿ ಕೂಡ. ಈ ನಿಟ್ಟಿನಲ್ಲಿ ಬಾಕಿ ಉಳಿಸಿರುವ ವಿದ್ಯುತ್ ಶುಲ್ಕ ಬಾಕಿ ಪಾವತಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಪಂ ಸಿಇಒ ಟಿ. ಭೂಬಾಲನ್ ತಿಳಿಸಿದರು.
ಉದಯವಾಣಿಯಲ್ಲಿ ಕಳೆದ 8 ದಿನಗಳಿಂದ ಹೆಸ್ಕಾಂಗೇ ವಿದ್ಯುತ್ ಶಾಕ್! ಎಂಬ ಸರಣಿ ವರದಿಗೆ ಸ್ಪಂದಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯವಸ್ಥೆಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಇದೆ. ಗ್ರಾಪಂ ವ್ಯಾಪ್ತಿಯ ವಿದ್ಯುತ್ ಬೀದಿದೀಪ, ಕುಡಿಯುವ ನೀರು ಪೂರೈಕೆಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಬಾಕಿ ಪಾವತಿಸಲು ಪ್ರತಿಯೊಂದು ಗ್ರಾಪಂಗಳಿಗೂ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯ 195 ಗ್ರಾಪಂಗಳಲ್ಲಿ ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕುರಿತು ನಿಖರ ಮಾಹಿತಿ ಇಲ್ಲ. ಆದರೆ ಬಾಕಿ ಪಾವತಿ ಮಾಡಬೇಕಿರುವುದು ಗ್ರಾಪಂಗಳ ಹೊಣೆ. ಜಿಲ್ಲೆಯ ಕೆಲವು ಗ್ರಾಪಂಗಳು ಪ್ರತಿ ತಿಂಗಳು ನಿರಂತರವಾಗಿ ವಿದ್ಯುತ್ ಶುಲ್ಕ ಬಾಕಿ ಪಾವತಿ ಮಾಡುತ್ತಿವೆ. ಆದರೆ ಕೆಲವು ಪಂಚಾಯಿತಿಗಳು ಹೆಚ್ಚಿನ ಬಾಕಿ ಉಳಿಸಿಕೊಂಡಿವೆ. ಈ ವಿಷಯದಲ್ಲಿ ಗ್ರಾಪಂ ಪಿಡಿಒಗಳೇ ಪೂರ್ಣ ಪ್ರಮಾಣದ ಹೊಣೆಗಾರರಲ್ಲ. ಆಯಾ ಗ್ರಾಪಂಗಳ ಆಡಳಿತ ಮಂಡಳಿ ಸಂಪೂರ್ಣ ಹೊಣೆಗಾರಿಕೆಯಾಗುತ್ತದೆ ಎಂದರು.
ನ.16ರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿರುವ ಗ್ರಾಪಂಗಳು, ಕೂಡಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಪಾವತಿಸಬಹುದು. ಇದು ಬರೀ ಪಿಡಿಒಗಳು ಮಾತ್ರ ಕ್ರಮ ಕೈಗೊಳ್ಳಲು ಆಗಲ್ಲ. ಗ್ರಾಪಂ ಆಡಳಿತ ಮಂಡಳಿಗಳು, ಕೂಡಲೇ ಸಭೆ ನಡೆಸಿ ವಿದ್ಯುತ್ ಶುಲ್ಕ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಗ್ರಾಪಂಗಳು ಬಾಕಿ ಪಾವತಿಸಬೇಕು. ಗೃಹ ಬಳಕೆ ಅಥವಾ ಇನ್ಯಾವುದೇ ವ್ಯವಸ್ಥೆಯಲ್ಲಿ ವಿದ್ಯುತ್ ಬಾಕಿ ಉಳಿಸಿಕೊಂಡರೆ ತಕ್ಷಣ ಕೈಗೊಂಡು, ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಗ್ರಾಪಂಗಳೇ ಕೋಟಿ ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. –
ಬಸವರಾಜ ಧರ್ಮಂತಿ, ಕರವೇ ಜಿಲ್ಲಾ ಅಧ್ಯಕ್ಷ.