Advertisement
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಸದಸ್ಯರಾದ ಬಳಿಕ ತಾವೇ ಅಧ್ಯಕ್ಷರಾಗಬೇಕೆಂದು ಹಲವರು ಕನಸು ಕಾಣುತ್ತಿದ್ದಾರೆ. ಹೀಗಾಗಿ ಆಯಾ ವಾರ್ಡ್‌ನಲ್ಲಿ ಪೆನಲ್ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ.ಪತ್ನಿ, ಸಹೋದರ, ಚಿಕ್ಕಪ್ಪನ ಮಗ, ತಾಯಿ, ಆತ್ಮೀಯ ಗೆಳೆಯರನ್ನು ಕಣಕ್ಕಿಳಿಸಿ ಅವರವರೇ ಪೆನಲ್ ಮಾಡಿಕೊಳ್ಳುವ ತಂತ್ರಗಾರಿಕೆ ನಡೆದಿದೆ.
ಮೀಸಲು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಾಗ ಒಂದೇ ಜಾತಿಯವರು ನಾಮಪತ್ರ ಸಲ್ಲಿಸದಂತೆ ಒತ್ತಡಗಳೂ
ಹೆಚ್ಚಾಗುತ್ತಿವೆ. ಆ ವಾರ್ಡ್‌ನಲ್ಲಿಯ ಜಾತಿ ಮತಗಳು ವಿಭಜನೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಬೇರೆ ಬೇರೆ ಜಾತಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಇನ್ನುಳಿದವರು ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಜಾತಿ ಮತಗಳನ್ನು ಗಟ್ಟಿಗೊಳಿಸಲು ತಂತ್ರ ಹೆಣೆಯುತ್ತಿದ್ದಾರೆ. ಆ ಜಾತಿಯವರನ್ನು ಕರೆಯಿಸಿಕೊಂಡು ಒಳಗೊಳಗೆ ಸಭೆ ನಡೆಸುತ್ತಿದ್ದಾರೆ.
Related Articles
Advertisement
ಯುವ ಪಡೆ ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಲು ಉತ್ಸುಕರಾಗಿದ್ದಾರೆ. ಕಾರ್ಮಿಕರು, ಖಾಸಗಿ ವಲಯದಲ್ಲಿದುಡಿಯುತ್ತಿರುವವರು ಹಾಗೂ ಕಾಲೇಜು ವಿದ್ಯಾರ್ಥಿಗಳು ಗ್ರಾಪಂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ನಾಮಪತ್ರ ಸಲ್ಲಿಸುವಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳ ಹಿಂದಿನಕ್ಕಿಂತಲೂ ಈ ಬಾರಿ ಯುವ ಪಡೆ ಹೆಚ್ಚಿನ ಪ್ರಮಾಣದಲ್ಲಿ ಸಜ್ಜಾಗಿದೆ. ಗೆಲ್ಲುವ ಕುದುರೆ ಹುಡುಕಾಟ: ಗೆಲ್ಲುವ ಕುದುರೆ ಹುಡುಕಾಟದಲ್ಲಿ ರಾಜಕಾರಣಿಗಳು ನಿರತರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡಿದವರು, ಕೊರೊನಾ ವೇಳೆ ಜನರಿಗೆ ಸಹಾಯ ಮಾಡಿದವರು, ಪ್ರವಾಹದ ವೇಳೆ ಸಂತ್ರಸ್ತರ ನೆರವಿಗೆ ನಿಂತವರ ವರ್ಚಸ್ಸು ನೋಡಿ ಗಾಳ ಹಾಕಲಾಗುತ್ತಿದೆ. ಆಯಾ ರಾಜಕೀಯ ನೇತಾರರು ಆಯಾ ವಾರ್ಡ್‌ಗಳಲ್ಲಿ
ಇಂತಹ ಗೆಲ್ಲುವ ಕುದುರೆ ಹುಡುಕಾಟ ಶುರು ಮಾಡಿದ್ದಾರೆ. ಕಣದಲ್ಲಿ ಯಾರಿರಬೇಕು ಎಂಬ ಲೆಕ್ಕಾಚಾರದಲ್ಲಿ ಹಿಂದಕ್ಕೆ ಸರಿಸಲು ಕಸರತ್ತುಗಳು ನಡೆದಿವೆ. ಒಂದೊಂದು ವಾರ್ಡ್‌ನಲ್ಲಿ ಮೂರು ಸ್ಥಾನಗಳಿಗೆ 12-15 ಜನ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಚುನಾವಣಾ ಕಣದಲ್ಲಿ ಹೆಚ್ಚಿಗೆ ಇದ್ದಷ್ಟು ಮತಗಳು ವಿಂಗಡಣೆ ಆಗುತ್ತವೆ. ಆಗ ಕಡಿಮೆ ಮತಗಳಲ್ಲಿಯೇ ಗೆಲುವು ದಕ್ಕಿಸಿಕೊಳ್ಳಬಹುದಾಗಿದೆ. ಜತೆಗೆ ಮೀಸಲು ಸ್ಥಾನದಲ್ಲಿ ಸ್ಪರ್ಧಿಸಿ ಸೋತವರು ಸಾಮಾನ್ಯ ಸ್ಥಾನದ ಪುರುಷ ಅಭ್ಯರ್ಥಿಗಿಂತ ಹೆಚ್ಚಿನ ಮತ ಪಡೆದಿದ್ದರೆ ಗೆಲುವು ಸಿಗಲಿದೆ. ಈ ನಿಟ್ಟಿನಲ್ಲಿ ತಂತ್ರಗಾರಿಕೆಯೂ ಹೆಚ್ಚಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯುವವರೆಗೆ ಒಂದು ಲೆಕ್ಕಾಚಾರವಾದರೆ, ನಂತರದಲ್ಲಿ ಮತ್ತೂಂದು ಲೆಕ್ಕಾಚಾರ ಶುರುವಾಗಲಿದೆ. ಸದಸ್ಯರಾಗಿದ್ದವರು ಅನುಭವಿಗಳಂತೆ ವರ್ತನೆ
ಈಗಾಗಲೇ ಗ್ರಾಪಂ ಸದಸ್ಯರಾಗಿ ಆಯ್ಕೆ ಆಗಿದ್ದವರು ಅನುಭವಿಗಳಂತೆ ತಮಗೆಲ್ಲವೂ ಗೊತ್ತು, ಯಾವ ವಾರ್ಡ್‌ನಲ್ಲಿ ಯಾರನ್ನು
ಕಣಕ್ಕಿಸುವುದು, ಯಾವ ಜಾತಿ ಮತಗಳು ಎಷ್ಟು ಸಿಗಬಹುದು ಎಂಬುದರ ಬಗ್ಗೆ ಹೊಸಬರ ಎದುರು ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈಗ ಸದಸ್ಯರಾಗಿ ಆಯ್ಕೆಯಾದವರೇ ಬಹುತೇಕ ಸ್ಪರ್ಧಿಸುತ್ತಿದ್ದಾರೆ. ಮೀಸಲು ಬಾರದ ವಾರ್ಡ್‌ಗೆ ತಮ್ಮ ಪತ್ನಿ, ಸೊಸೆ, ಸಂಬಂಧಿಕರನ್ನು ಕಣಕ್ಕಿಳಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೂ ಇದು ಪ್ರತಿಷ್ಠೆ
ರಾಜಕೀಯ ಪಕ್ಷಗಳು ಗ್ರಾಪಂ ಚುನಾವಣೆಯನ್ನು ಅಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಜಿಪಂ ಹಾಗೂ ತಾಪಂ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆಯುತ್ತಿದ್ದವು. ಆದರೆ ಈ ಸಲ ಗ್ರಾಪಂ ಚುನಾವಣೆಯನ್ನು ಆಯಾ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನೇ ಕಣಕ್ಕಿಳಿಸಿ ಪೆನಲ್ ಮಾಡಿಕೊಳ್ಳುತ್ತಿದ್ದಾರೆ. ಆಯ ಗ್ರಾಪಂಗಳಲ್ಲಿ ನಮ್ಮ ಪಕ್ಷದವರೇ ಗೆದ್ದು ಬಂದು
ಅಧಿಕಾರದ ಗದ್ದುಗೆ ಹಿಡಿಯಬೇಕೆಂಬುದು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿ ಆ ಪಕ್ಷದ ಶಾಸಕರು,. ಜಿಲ್ಲಾ, ತಾಲೂಕು ಅಧ್ಯಕ್ಷರು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಸಭೆ ನಡೆಸಿ ಆಯಾ ಗ್ರಾಪಂಗಳಿಗೆ ಮುಖಂಡರನ್ನು ನೇಮಿಸಿದ್ದಾರೆ.