Advertisement

ಸಂಚಾರಕ್ಕೆ ಅಯೋಗ್ಯ ಭಕ್ತಕೋಡಿ-ರೆಂಜಲಾಡಿ ರಸ್ತೆ

03:45 AM Jul 02, 2017 | |

ನರಿಮೊಗರು : ಸರ್ವೆ ಗ್ರಾಮಕ್ಕೊಳಪಟ್ಟ ಭಕ್ತಕೋಡಿ-ರೆಂಜಲಾಡಿ ರಸ್ತೆಯ ಡಾಮರು ಸಂಪೂರ್ಣ ಹದಗೆಟ್ಟು ಹಲವಾರು ವರ್ಷಗಳು ಕಳೆದಿದ್ದು, ಪ್ರದೇಶದ ನಾಗರಿಕರು, ವಾಹನ ಚಾಲಕರು ಹಾಗೂ ವಿದ್ಯಾರ್ಥಿಗಳು ಅತೀವ ತೊಂದರೆ ಅನುಭವಿ ಸುತ್ತಿದ್ದಾರೆ. 
 
ಈ ರಸ್ತೆಯು ಮುಂಡೂರು ಹಾಗೂ ತಿಂಗಳಾಡಿ ಸಂಪರ್ಕ ರಸ್ತೆಯೂ ಆಗಿದ್ದು ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ಭಕ್ತ ಕೋಡಿಯಿಂದ ರೆಂಜಲಾಡಿ ಮಧ್ಯದ ಎರಡೂವರೆ ಕಿ.ಮೀ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಅದೆಷ್ಟೋ ವರ್ಷಗಳು ಕಳೆದಿವೆ. ಪರಿಣಾಮ ರಸ್ತೆಯ ಮಧ್ಯೆಯೇ ಹಲವಾರು ಹೊಂಡಗಳು ನಿರ್ಮಾಣವಾಗಿವೆ. ಈಗ ಮಳೆಗಾಲ ವಾಗಿರುವುದರಿಂದ ರಸ್ತೆಯ ಪರಿಸ್ಥಿತಿ ಯನ್ನು ಹೇಳತೀರದು. ಕೆಲವು ಕಡೆ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡು ಕೃತಕ ಕೊಳವೂ ನಿರ್ಮಾಣವಾಗಿವೆ.

Advertisement

ವಾಹನ  ಚಾಲಕರು ಈ ಹೊಂಡಮಯ ರಸ್ತೆಯಲ್ಲಿ ಸಂಚರಿಸುತ್ತಾ ಸಂಕಷ್ಟ ಅನುಭವಿ ಸುತ್ತಿದ್ದಾರೆ. ಹಲವರು ಮುಂಡೂರು ಹಾಗೂ ಸರ್ವೆ ರಸ್ತೆ ಮೂಲಕ ಸುತ್ತುಬಳಸಿ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ಬಾರಿಯ ಮಳೆಗಾಲದಲ್ಲಿ ಈ ಭಾಗದ ಜನರು ಬಹಳ ಕಷ್ಟಪಟ್ಟು ಈ ರಸ್ತೆಯಾಗಿ ಸಂಚರಿಸಿದ್ದಲ್ಲದೇ ಈ ವರ್ಷವಾದರೂ ರಸ್ತೆ ಮರುಡಾಮರು ಹಾಕಬಹುದು ಎಂಬ ಕನಸು ಕಂಡಿದ್ದರು. ಆದರೆ ಕನಸು ನನಸಾಗಲೇ ಇಲ್ಲ.

ತೊಂದರೆ
ಭಕ್ತಕೋಡಿ ಪರಿಸರದ ಜನರು ಪಡಿತರಕ್ಕಾಗಿ ಕಲ್ಪನೆಗೆ ಬರಬೇಕಾಗಿರುವುದರಿಂದ ಈ ರಸ್ತೆ ಯನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ ರೆಂಜಲಾಡಿ, ಕೂಡುರಸ್ತೆ ಮೊದಲಾದ ಕಡೆಗಳಿಂದ ಭಕ್ತಕೋಡಿಯಲ್ಲಿರುವ ಸರಕಾರಿ ಆಸ್ಪತ್ರೆಗೆ ಸಾಕಷ್ಟು ಜನರು ಬರುತ್ತಿದ್ದು ಬಹಳಷ್ಟು ತೊಂದರೆ ಅನುಭವಿಸಿತ್ತಿದ್ದಾರೆ.
 
ಇಲ್ಲಿನ ನಾಗರಿಕರು ಅನಾರೋಗ್ಯಕ್ಕೀಡಾ ದವರಿಗೆ, ಗರ್ಭಿಣಿಯರಿಗೆ ರಸ್ತೆಯ ಪರಿಸ್ಥಿತಿ  ಯಿಂದಾಗಿ ತೀವ್ರ ತೊಂದರೆಯಾಗಿದೆ. ಕಲ್ಪಣೆ ಯಲ್ಲಿ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವಿದ್ದು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಅಲ್ಲಿಗೆ ಬರುವ ವಿದ್ಯಾರ್ಥಿಗಳ ಹೆತ್ತವರು ಬಹಳ ಪ್ರಯಾಸ ಪಡುತ್ತಿದ್ದು, ಕಲ್ಪಣೆಯಲ್ಲಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು ಅಲ್ಲಿಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. 

ರೆಂಜಲಾಡಿ, ಕಲ್ಪಣೆ ಈ ಭಾಗದಿಂದ ಪುತ್ತೂರಿನ ಶಾಲಾ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದು ಭಕ್ತಕೋಡಿ, ತೌಡಿಂಜ, ಕಲ್ಲಗುಡ್ಡೆ ಮತ್ತಿತರ ಕಡೆಗಳಿಂದ ಮುಂಡೂರು ಗ್ರಾಮ ಪಂಚಾಯತ್‌ಗಾಗಲೀ, ಸಹಕಾರಿ ಬ್ಯಾಂಕ್‌ಗಾಗಲೀ ಹೋಗಬೇಕಾದರೆ ಇದೇ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ.

ಇನ್ನೂ ಈಡೇರದ ಭರವಸೆ!
ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ. ಶೆಟ್ಟಿ ಅವರು ಭಕ್ತಕೋಡಿ ರೆಂಜಲಾಡಿ ರಸ್ತೆಯನ್ನು “ಒನ್‌ ಟೈಮ್‌ ಯೋಜನೆ’ಯಲ್ಲಿ ಡಾಮರು ಹಾಕಲು ಈ ಹಿಂದೆ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ದುರಸ್ತಿಯಾಗಲಿದೆ ಎಂದು ಹಲವು ಬಾರಿ ಭರವಸೆ ನೀಡಿದ್ದರು. ಆದರೆ ಒನ್‌ಟೈಮ್‌ ಯೋಜನೆಯಲ್ಲಿ ಈ ರಸ್ತೆ ಡಾಮರು ಹಾಕುವುದಕ್ಕೆ ಯಾವುದೇ ಅನುದಾನ ಇದುವರೆಗೂ ಬಿಡುಗಡೆಗೊಳ್ಳದ ಕಾರಣ ದುರಸ್ತಿ ಮರೀಚಿಕೆಯಾಗಿಯೇ ಉಳಿಯುವಂತಾಗಿದೆ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುವರವರೂ ಈ ರಸ್ತೆಯನ್ನು ಹಿಂದೆಯೇ ವೀಕ್ಷಿಸಿದ್ದು, ದುರಸ್ತಿ ವಿಚಾರವಾಗಿ ಭರವಸೆಯನ್ನು ನೀಡಿದ್ದರು. ಪತ್ರಿಕೆಗಳಲ್ಲೂ ಹಲವು ಬಾರಿ ಈ ರಸ್ತೆ ಕುರಿತು ವರದಿ ಪ್ರಕಟಗೊಂಡಿತ್ತು. ಒಟ್ಟಿನಲ್ಲಿ ಗ್ರಾಮಸ್ಥರ ಬಹುಕಾಲದ ಬೇಡಿಕೆ ಇನ್ನಾದರೂ ಈಡೇರುತ್ತಾ ಕಾದುನೋಡಬೇಕಿದೆ. ಶಕುಂತಳಾ ಶೆಟ್ಟಿ ಅವರು ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ರೂ. 75 ಲಕ್ಷ ಅನುದಾನವನ್ನು ಸರ್ವೆ ಗ್ರಾಮಕ್ಕೆ ನೀಡಿದ್ದು, ಗ್ರಾಮದ ಹಲವು ಕಡೆ ಅಭಿವೃದ್ಧಿ ಕೆಲಸ ನಡೆದಿದೆ. ಆದರೆ ಬಹುಕಾಲದ ಬೇಡಿಕೆಯಾಗಿರುವ ಭಕ್ತಕೋಡಿ-ರೆಂಜಲಾಡಿ ರಸ್ತೆ ಮಾತ್ರ ಅಭಿವೃದ್ಧಿ ಕಾಣದಿರುವುದರಿಂದ ಇತರ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next