Advertisement

ಪಂಚಾಯಿತಿಗಳ ನಿರ್ವಹಣೆಗೆ “ಪಂಚತಂತ್ರ 2.0′

10:46 PM Oct 08, 2019 | Lakshmi GovindaRaju |

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಮತ್ತು ಆರ್ಥಿಕ ನಿರ್ವಹಣೆ, ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಗೆ ಸದ್ಯದಲ್ಲೇ “ಪಂಚತಂತ್ರ 2.0′ ವ್ಯವಸ್ಥೆ ಜಾರಿಗೆ ಬರಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಸದ್ಯ ಬಳಸಲಾಗುತ್ತಿರುವ “ಪಂಚತಂತ್ರ’ ತಂತ್ರಾಂಶ ಅಭಿವೃದ್ಧಿಪಡಿಸಿ ಇಲ್ಲಿಗೆ 10 ವರ್ಷಗಳಾಗಿವೆ. ಈಗ ಬದಲಾದ ವ್ಯವಸ್ಥೆ ಮತ್ತು ತಂತ್ರಜ್ಞಾನಕ್ಕೆ ತಕ್ಕಂತೆ ಇಲಾಖೆಯ ಅಗತ್ಯತೆಗಳಿಗೆ ಅನುಗುಣವಾಗಿ ಪಂಚತಂತ್ರದ ಎರಡನೇ ಆವತರಣಿಕೆ “ಪಂಚತಂತ್ರ 2.0” ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

Advertisement

ಗ್ರಾಮ ಪಂಚಾಯಿತಿಗಳ ಲೆಕ್ಕ ಪತ್ರ ನಿರ್ವಹಣೆಗಾಗಿ ಎನ್‌ಐಸಿ ಅಭಿವೃದ್ಧಿ ಪಡಿಸಿದ್ದ ಪಂಚತಂತ್ರ ತಂತ್ರಾಂಶ 2011ರಲ್ಲಿ ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಅನುಷ್ಠಾನ ಮಾಡಲಾಗಿತ್ತು. ಈಗ ಹಳೆಯ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಸಂಬಂಧ ಕಳೆದ ತಿಂಗಳು ನಡೆದ ಇಲಾಖೆಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಗಾಂಧಿ ಸಾಕ್ಷಿ ಕಾಯಕ, ಇ-ಸ್ವತ್ತು, ನರೇಗಾ, ಸ್ವತ್ಛ ಭಾರತ್‌ ಮಿಷನ್‌-ಗ್ರಾಮೀಣ, ಬಾಪೂಜಿ ಸೇವಾ ಕೇಂದ್ರ ಮತ್ತು ಇತರ ಇಲಾಖೆಗಳ ಸುಮಾರು 15ರಿಂದ 20 ತಂತ್ರಾಂಶಗಳನ್ನು ಬಳಸಲಾಗುತ್ತಿದ್ದು, ಒಂದೊಂದು ತಂತ್ರಾಂಶಕ್ಕೆ ಒಂದೊಂದು ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಬಳಸಲಾಗುತ್ತಿದೆ. ಆದ್ದರಿಂದ ಈ ಎಲ್ಲ ತಂತ್ರಾಂಶಗಳನ್ನು ಸಂಯೋಜನೆ ಮಾಡಿ ಪಂಚತಂತ್ರ 2.0 ಮೂಲಕ “ಸಿಂಗಲ್‌ ಸೈನ್‌ ಆನ್‌’ (ಎಸ್‌ಎಸ್‌ಒ) ಪದ್ಧತಿ ಅಳವಡಿಸಿಕೊಳ್ಳಲಾಗುತ್ತಿದೆ.

ಪಂಚತಂತ್ರ 2.0 ಜಾರಿಗೆ ಬಂದಲ್ಲಿ ಪಂಚಾಯಿತಿಗಳ ಸಮಗ್ರ ಆಡಳಿತ ಮತ್ತು ಆರ್ಥಿಕ ನಿರ್ವಹಣೆ, ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಗೆ ಹೊಸ ಕಾಯಕಲ್ಪ ಸಿಗಲಿದ್ದು, ಅದಕ್ಕಾಗಿ ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಾಂಶ ವಿನ್ಯಾಸಗೊಳಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆ, ವಾರ್ಡ್‌ ಸಭೆ, ಸ್ಥಾಯಿ ಸಮಿತಿ ಸಭೆ, ಪಂಚಾಯಿತಿ ಉಪಸಮಿತಿ ಸಭೆ, ಜಮಾಬಂದಿ, ಕೆಡಿಪಿ ಸಭೆಗಳಿಗೆ ಹಾಜರಾಗುವ ಸದಸ್ಯರ ಹಾಜರಾತಿಯನ್ನು ಇ-ಸೈನ್‌ ಮೂಲಕ ಸೆರೆ ಹಿಡಿಯವಂತೆ, ಸಭಾ ಸೂಚನಾ ಪತ್ರ, ಸಭೆಯ ನಡಾವಳಿ ಮತ್ತು ತೀರ್ಮಾನಗಳನ್ನು ಪಂಚತಂತ್ರ 2.0 ಮೂಲಕ ಅಳವಡಿಸಿ ಸಭೆಗಳನ್ನು ಸ್ವಯಂಚಾಲಿತ ಮಾಡುವ ಅವಶ್ಯಕತೆಯಿದೆ.

Advertisement

ಅದೇ ರೀತಿ ಪಂಚತಂತ್ರ 2.0 ಮೂಲಕ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರು, ಅಧಿಕಾರಿಗಳ “ಪ್ರೊಫೈಲ್‌’ (ವ್ಯಕ್ತಿ ಪರಿಚಯ)ಸೆರೆಹಿಡಿಯುವುದು, ನೌಕರರ ಎಚ್‌ಆರ್‌ಎಂಎಸ್‌ ಪದ್ದತಿಯನ್ನು ಅಭಿವೃದ್ಧಿಗೊಳಿಸುವುದು ಪಿಡಿಒಗಳ ಕೆಜಿಐಡಿ ಸಂಖ್ಯೆಗಳನ್ನು ಸಂಯೋಜಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.

ಅಲ್ಲದೇ ಪಂಚಾಯಿತಿಗಳಲ್ಲಿ ತೆರಿಗೆ ನಿರ್ಧರಣೆ, ಸಂಗ್ರಹಣೆ, ಪರಿಷ್ಕರಣೆ, ಆಸ್ತಿಗಳ ಮೌಲ್ಯಮಾಪನಕ್ಕಾಗಿ “ಆಸ್ತಿ ತೆರಿಗೆ ಕ್ಯಾಲ್ಕುಲೆಟರ್‌’, ಕಾಮಗಾರಿಗಳ ಹಣ ಪಾವತಿ, ಫ‌ಲಾನುಭವಿಗಳ ಅನುದಾನ, ನೌಕರರ ವೇತನ, ಚುನಾಯಿತ ಪ್ರತಿನಿಧಿಗಳ ಗೌರವಧ ಆನ್‌ಲೈನ್‌ ಮೂಲಲ ಪಾವತಿಗೆ ಪಂಚತಂತ್ರ 2.0 ಮೂಲಕ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು ಎಂಬುದು ಇಲಾಖೆಯ ಚಿಂತನೆಯಾಗಿದೆ.

ಪಂಚತಂತ್ರ 2.0 ಉದ್ದೇಶಗಳು
-ಈಗಿರುವ ಎಲ್ಲ ತಂತ್ರಾಂಶಗಳ ಬಳಕೆಗಾಗಿ “ಸಿಂಗಲ್‌ ಸೈನ್‌ ಆನ್‌’ (ಏಕಗವಾಕ್ಷಿ) ವ್ಯವಸ್ಥೆ ಅಭಿವೃದ್ಧಿಪಡಿಸುವುದು. ಗ್ರಾಮ ಪಂಚಾಯಿತಿಗಳ ಲೆಕ್ಕಪತ್ರ ನಿರ್ವಹಣೆಯೊಂದಿಗೆ ಆಡಳಿತ ಸುಧಾರಣೆಗೆ ಅನುಕೂಲ. ಡಿಜಿಟಲ್‌ ಸಹಿ ಸರ್ಟಿಫಿಕೇಟ್‌ ಬದಲಿದೆ. ಇ-ಸೈನ್‌ ಬಳಕೆ.

-ಯೋಜನೆಗಳ ಮೇಲ್ವಿಚಾರಣೆಗೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ “ಡ್ಯಾಶ್‌ಬೋರ್ಡ್‌’ ವಿನ್ಯಾಸಗೊಳಿಸುವುದು. ಪಂಚಾಯಿತಿಗಳ ಎಲ್ಲ ಬ್ಯಾಂಕ್‌ ಖಾತೆಗಳನ್ನು ಮೇಲ್ದರ್ಜೆಗೇರಿಸಿ “ಖಜಾನೆ 2.0′ ತಂತ್ರಾಂಶದೊಂದಿಗೆ ಸಂಯೋಜನೆ ಮಾಡುವುದು ಪಂಚತಂತ್ರ 2.0 ಪ್ರಮುಖ ಉದ್ದೇಶಗಳಾಗಿವೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next