“ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರದ ಮೂಲಕ ಪಂಚರಂಗಿ ಆಡಿಯೋ ಶುರು ಮಾಡಿರುವ ಯೋಗರಾಜ್ ಭಟ್, ಈಗ ಆ ಸಂಸ್ಥೆಯಿಂದ ಇನ್ನೊಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ “ಕಟ್ಟುಕಥೆ’. ರಾಜ್ ಪ್ರವೀಣ್ ಅವರು ನಿರ್ದೇಶಿಸಿರುವ ಈ ಚಿತ್ರದ ಹಾಡುಗಳಿಗೆ ವಿಕ್ರಮ್ ಸುಬ್ರಹ್ಮಣ್ಯ ಸಂಗೀತ ನೀಡಿದ್ದು, ಇತ್ತೀಚೆಗೆ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.
ವಿಶೇಷವೆಂದರೆ, ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಯೋಗರಾಜ್ ಭಟ್ಟರೇ ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರ ಜೊತೆಗೆ ಸೂರಿ ಸಹ ಇದ್ದರು. ಮೊದಲು ಟ್ರೇಲರ್ ಮತ್ತು ಹಾಡುಗಳನ್ನು ತೋರಿಸಲಾಯಿತು. ಯೋಗರಾಜ್ ಭಟ್ ಮತ್ತು ಸೂರಿ ಇಬ್ಬರೂ ಕರೆಸಿದ್ದು ಮತ್ತು ಇಬ್ಬರಿಗೂ ಚಿತ್ರದ ಬಗ್ಗೆ ಹೇಳಿದ್ದು, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಮಾಸ್ತಿ ಮಂಜು ಅಂತೆ.
“ನನಗೆ ಈ ಸಿನಿಮಾ ಬಗ್ಗೆ ಮಾಸ್ತಿ ಹೇಳಿದ. ಅವನು ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾನೆ. ಅವನೇ ಈ ತಂಡವನ್ನು ಪರಿಚಯಿಸಿದ. ಈ ಚಿತ್ರದ ನಿರ್ಮಾಪಕರಿ ಸ್ವೀಟ್ ಅಂಗಡಿ ಓನರ್ ಅಂತೆ. ಸ್ವೀಟ್ ಅಂಗಡಿ ಅಂದರೆ, ಧಾರವಾಡ ನೆನಪಾಗುತ್ತೆ. ಅಲ್ಲಿ ಪ್ರತಿ ದಿನ ವಾಲಿ ಬಾಲ್ ಆಡಿ, ಪೆಟ್ಟಿಗೆ ಅಂಗಡಿಯಲ್ಲಿ 60 ಪೈಸೆಗೆ ಬೂಂದಿ ಲಾಡು ತಿಂದು, ಒಂದು ಸ್ಟೀಲ್ ಜಗ್‌ನಲ್ಲಿ ನೀರು ಕುಡಿದರೆ ತೃಪ್ತಿ ಆಗುತಿತ್ತು.
ಬೂಂದಿ ಲಾಡು ಸ್ವಾದ ಇನ್ನೂ ಹಾಗೇ ಇದೆ. ನಾವು ಸಿನಿಮಾ ನೋಡಿಕೊಂಡು ಚೆನ್ನಾಗಿದ್ವಿ. ಸಿನಿಮಾ ನೋಡುತ್ತಿದ್ದವರು, ಮಾಡಿದಾಗ ತೀರ್ಪು ಕೊಡೋದು ಕಷ್ಟ. ಆದರೂ ಒಳ್ಳೆಯ ಸಿನಿಮಾ ಬಂದಾಗ ಜನ ಸ್ವೀಕರಿಸುತ್ತಾರೆ. ಈ ಚಿತ್ರವನ್ನೂ ಸ್ವೀಕರಿಸಿ, ಇವರಿಗೆ ಯಶಸ್ಸು ಸಿಗಲಿ’ ಎಂದು ಯೋಗರಾಜ್ ಭಟ್ ಹಾರೈಸಿದರು. ಸೂರಿ ಸಹ ಸಿಹಿಯಿಂದಲೇ ಮಾತು ಶುರು ಮಾಡಿದರು. “ನಿರ್ದೇಶಕರ ಚಡಪಡಿಕೆ ನೋಡಿದೆ. “ದುನಿಯಾ’ ಚಿತ್ರದ ಟೀಸರ್‌ನ ಗೋಡೆಯ ಮೇಲೆ ತೋರಿಸಿದಾಗ ನನಗೂ ಇದೇ ತರಹ ಚಡಪಡಿಕೆ ಇತ್ತು.
ಯಾರಿಗೆ ಚಡಪಡಿಕೆ ಇರುತ್ತದೋ ಅವರು ಚೆನ್ನಾಗಿ ಮಾಡಿರುತ್ತಾರೆ. ಹಾಡುಗಳು ಇಷ್ಟ ಆಯಿತು. ಆದರೆ, ನನಗೆ ಸಂದೇಶ ಇಷ್ಟವಾಗಲಿಲ್ಲ. ಚಿತ್ರದ ಹೆಸರು ಚೆನ್ನಾಗಿದೆ. ಈ ಚಿತ್ರ ಜನರಿಗೆ ತಲುಪಲಿ. ಒಂದು ಕಾಲದಲ್ಲಿ ನಮ್ಮ ಚಿತ್ರಗಳನ್ನು ಪಕ್ಕದ ಊರಿನವರು ನೋಡುತ್ತಿದ್ದರು. ನಮ್ಮಲ್ಲಿ ತುಂಬಾ ಪ್ರತಿಭೆ ಇದೆ. ಬನ್ನಿ ಚಿತ್ರರಂಗವನ್ನು ಇನ್ನಷ್ಟು ಸಮೃದ್ಧಿ ಮಾಡೋಣ’ ಎಂದು ಹೇಳಿದರು. ಚಿತ್ರದಲ್ಲಿ ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ ಮುಂತಾದವರು ನಟಿಸಿದ್ದಾರೆ.