Advertisement

ಸತ್ಯಾಗ್ರಹಕ್ಕೆ ಪಂಚಮಸಾಲಿ ಮುಖಂಡರ ಬೆಂಬಲ

05:34 PM Jun 20, 2022 | Team Udayavani |

ಬ್ಯಾಡಗಿ: ಪಟ್ಟಣದ ಮುಖ್ಯ ರಸ್ತೆ ಅಗಲೀಕರಣಕ್ಕೆ (ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136) ಆಗ್ರಹಿಸಿ, ರಸ್ತೆ ಅಗಲೀಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ, ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅನಿರ್‌ ಕಾರ್ಯದರ್ಶಿ ಹಾಗೂ ನಿವೃತ್ತ ಎಂಜಿನಿಯರ್‌ ಸಿ.ಆರ್‌.ಬಳ್ಳಾರಿ ಬೆಂಬಲ ವ್ಯಕ್ತಪಡಿಸಿದರು.

Advertisement

ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ ನಾಲ್ಕನೇ ದಿನವಾದ ಭಾನುವಾರ ಧರಣಿ ಸ್ಥಳಕ್ಕೆ ತೆರಳಿದ ಸಿ.ಆರ್‌.ಬಳ್ಳಾರಿ ಸೇರಿದಂತೆ ಸಮಾಜದ ಕಾರ್ಯಕರ್ತರು ಹಾಗೂ ಮುಖಂಡರು, ರಸ್ತೆ ಅಗಲೀಕರಣ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿದರು.

ರಸ್ತೆಗಳೇ ಜೀವಾಳ: ಈ ವೇಳೆ ಮಾತನಾಡಿದ ಅವರು, ನಗರಗಳ ಅಭಿವೃದ್ಧಿಗೆ ರಸ್ತೆಗಳೇ ಜೀವಾಳವಾಗಿವೆ. ಮೆಣಸಿನಕಾಯಿ ಮಾರುಕಟ್ಟೆ ಮೊದಲಿನಂತಿಲ್ಲ. ವರ್ಷಕ್ಕೆ ಸುಮಾರು ದ್ವಿಚಕ್ರ ಸೇರಿದಂತೆ ಸುಮಾರು 6.25 ಲಕ್ಷ ಲಘು ಮತ್ತು ಭಾರೀ ವಾಹನಗಳು ಮುಖ್ಯ ರಸ್ತೆ ಮೂಲಕ ಮಾರುಕಟ್ಟೆ ಪ್ರವೇಶಿಸುತ್ತವೆ. ಹೀಗಾಗಿ, ವಾಹನಗಳ ಓಡಾಟದ ಒತ್ತಡ ತಪ್ಪಿಸುವ ಉದ್ದೇಶದಿಂದ ಮುಖ್ಯ ರಸ್ತೆ ಅಗಲೀಕರಣವಾಗಲೇಬೇಕು ಎಂದರು.

60 ಟನ್‌ ರಸ್ತೆಗಳು ಬೇಕು: ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಕೇವಲ 25 ಟನ್‌ ಸಾಮರ್ಥ್ಯ ಹೊಂದಿದೆ. ಇನ್ನುಳಿದ ರಸ್ತೆಗಳು ಪುರಸಭೆಯಿಂದ ನಿರ್ಮಿಸಿದ್ದು 5 ರಿಂದ 12 ಟನ್‌ ಸಾಮರ್ಥ್ಯದ ರಸ್ತೆಗಳಾಗಿವೆ. ಅದರಲ್ಲಿ ವಾಣಿಜ್ಯ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಲೋಕೋಪಯೋಗಿ ಇಲಾಖೆ ಕೇವಲ ಅಗಲೀಕರಣ ಒಂದೇ ಉದ್ದೇಶವನ್ನಿಟ್ಟುಕೊಂಡು ಮೇಲ್ದರ್ಜೆಗೇರಿಸುವುದಿಲ್ಲ. ಬದಲಾಗಿ ಸುರಕ್ಷತೆ ದೃಷ್ಟಿಯಿಂದ 60 ಟನ್‌ ಸಾಮರ್ಥ್ಯದ ರಸ್ತೆ ಸೇರಿದಂತೆ, ವಾಹನಗಳ ದಟ್ಟಣೆ ಮತ್ತು ಅನಗತ್ಯ ತಿರುವುಗಳನ್ನು ಕಡಿಮೆ ಮಾಡುವುದು ಹೀಗೆ ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ಅಗಲೀಕರಣ ಮಾಡುತ್ತದೆ ಎಂದರು.

ಸ್ವಯಂಪ್ರೇರಣೆಯಿಂದ ಬಿಟ್ಟು ಕೊಡಿ: ಮುಖ್ಯರಸ್ತೆಯಲ್ಲಿ ವಾಸಿಸುವವರು ಸ್ವಯಂಪ್ರೇರಣೆಯಿಂದ ಅಗಲೀಕರಣಕ್ಕೆ ಸಹಕರಿಸಿದಲ್ಲಿ ಅವರ ಬೇಡಿಕೆಗಳನ್ನು ಪರಿಗಣಿಸಲು ಸಹ ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಒಮ್ಮತದ(ಕನ್ಸೆಂಟ್‌ ಅಕ್ವಿಸಿಶನ್‌) ಸ್ವಾ ಧೀನಕ್ಕೆ ಸಿದ್ಧರಾದಲ್ಲಿ ಎಲ್ಲರಿಗೂ ಅವಶ್ಯವಿರುವಂತಹ ಮುಖ್ಯರಸ್ತೆ ನಿಮ್ಮದಾಗುತ್ತದೆ. ಇಲ್ಲದೇ ಹೋದಲ್ಲಿ ಖಂಡಿತವಾಗಿಯೂ ರಾಜ್ಯ ಹೆದ್ದಾರಿ ನಿಯಮಗಳ ಕಟ್ಟುನಿಟ್ಟಿನ ನಿಯಮ ಪಾಲನೆಯಾಗಲಿವೆ ಎಂದು ಎಚ್ಚರಿಸಿದರು.

Advertisement

ಈ ವೇಳೆ ಅಗಲೀಕರಣ ಹೋರಾಟ ಸಮಿತಿಯ ಸುರೇಶ ಛಲವಾದಿ, ಗಂಗಣ್ಣ ಎಲಿ, ಪಾಂಡು ಸುತಾರ, ಮಹೇಶ ಉಜನಿ, ಮಂಜು ಪೂಜಾರ, ಮಂಜುನಾಥ ಬಾಳೀಕಾಯಿ, ಸೋಮಯ್ಯ ಕರ್ನೂಲ, ಮಂಜುನಾಥ ಬೋವಿ, ಬಸವರಾಜ ಹಾವನೂರ, ವಿಜಯ ಮಾಳಗಿ, ಮೋಹನ ಬಿನ್ನಾಳ ಇನ್ನಿತರರು ಉಪಸ್ಥಿತರಿದ್ದರು.

ಬ್ಯಾಡಗಿ ಪಟ್ಟಣಕ್ಕೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೂ ಮುಖ್ಯ ರಸ್ತೆ ಅಗಲೀಕರಣಕ್ಕೂ ಸಂಬಂಧವಿರದ ವಿಚಾರ. ಬೈಪಾಸ್‌ ನಿರ್ಮಾಣದ ಉದ್ದೇಶ, ಬೇರೆ ಊರಿನಿಂದ ಬರುವ ವಾಹನಗಳು ನಗರದಲ್ಲಿ ಪ್ರವೇಶಿಸಿದಂತೆ ದಟ್ಟಣೆ ತಡೆಯುವ ಉದ್ದೇಶದಿಂದ ನಿರ್ಮಿಸಲಾಗುತ್ತದೆ. ಮೆಣಸಿನಕಾಯಿ ಮಾರುಕಟ್ಟೆ ಒಳಭಾಗದಲ್ಲಿ ಇರುವುದರಿಂದ ವಾಹನಗಳು ಪಟ್ಟಣ ಪ್ರವೇಶಿಸಲೇಬೇಕಾಗುತ್ತದೆ. ಇನ್ನಾದರೂ ಬೈಪಾಸ್‌ ವಿಚಾರ ಕೈಬಿಟ್ಟು ಅಗಲೀಕರಣಕ್ಕೆ ಅವಕಾಶ ನೀಡಬೇಕು. -ಸಿ.ಆರ್‌.ಬಳ್ಳಾರಿ, ನಿವೃತ್ತ ಎಂಜಿನಿಯರ್‌

ತಹಶೀಲ್ದಾರ್‌ ಭೇಟಿ

ಮುಖ್ಯರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಹಮ್ಮಿಕೊಂಡ ಧರಣಿ ಸ್ಥಳಕ್ಕೆ ಮೂರು ದಿನ ಕಳೆದ ನಂತರ ಭಾನುವಾರ ತಹಶೀಲ್ದಾರ್‌ ತಿಪ್ಪೇಸ್ವಾಮಿ ಅವರು ಸಿಪಿಐ ಬಸವರಾಜಪ್ಪ ಅವರೊಂದಿಗೆ ಭೇಟಿ ನೀಡಿದರು. ಈ ವೇಳೆ ಪ್ರತಿಭಟನಾಕಾರರ ಜೊತೆಗೆ ಕೆಲ ಹೊತ್ತು ಮಾತನಾಡಿದ ಅವರು, ನಾನು ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ನನಗೇನೂ ಗೊತ್ತಿಲ್ಲ. ರಸ್ತೆ ಅಗಲೀಕರಣ ವಿಚಾರ ಹೈಕೋರ್ಟ್‌ನಲ್ಲಿದೆ ಎಂದು ಹೇಳಿ ನಿರ್ಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next