Advertisement

ಒಗ್ಗಟ್ಟಿನಿಂದ ಹೋರಾಡಿದರೆ ಮೀಸಲಾತಿ ಸಾಧ್ಯ  

07:58 PM Feb 08, 2021 | Team Udayavani |

ಕಾರಟಗಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಈಗಾಗಲೇ ನಿರ್ಣಾಯಕ ಘಟ್ಟ ತಲುಪಿದ್ದು, ಸರ್ಕಾರ 2ಎ ಮೀಸಲಾತಿ ನೀಡಬೇಕಾದರೆ ಸಮುದಾಯದವರೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಸುಂಕದ ಹೇಳಿದರು.

Advertisement

ಪಟ್ಟಣದ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಒತ್ತಾಯಿಸಿ ತಾಲೂಕು ಪಂಚಮಸಾಲಿ ಸಮುದಾಯದಿಂದ ರವಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಮುದಾಯಕ್ಕೆ ಮೀಸಲಾತಿ ಪಡೆಯಲು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಒಂದಾಗಿದ್ದಾರೆ. ಈ ಮೂಲಕ ನಮ್ಮಲ್ಲಿ ಭಿನ್ನಭಿಪ್ರಾಯಗಳಿಲ್ಲ ಎಂಬ ಸಂದೇಶ ಸಾರಿದ್ದಾರೆ. ನಾವೆಲ್ಲರೂ ಅವರಿಗೆ ಕೈ ಜೋಡಿಸುವ ಮೂಲಕ ಹೋರಾಟಕ್ಕೆ ಬಲ ತುಂಬಬೇಕಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಾತಿ ಕೇಳುತ್ತಿದ್ದೇವೆ. ಈವರೆಗೆ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದೇವೆ. ಸರ್ಕಾರ ಸಮುದಾಯದ ತಾಳ್ಮೆ ಪರೀಕ್ಷಿಸಬಾರದು.

ಸಮುದಾಯದ ಶಾಸಕರು ಹಾಗೂ ಸಂಸದರು ಮೀಸಲಾತಿ ವಿಚಾರದಲ್ಲಿ ಯಾವ ಮುಲಾಜಿಗೂ ಬಗ್ಗದೆ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಮಾಡಬೇಕು. ಜನಪ್ರತಿನಿ ಧಿಗಳು, ಸಮುದಾಯದ ಮುಖಂಡರು ಒಗ್ಗಟ್ಟಿನ ಹೋರಾಟ ಮಾಡಿದರೆ ಜಯ ಖಂಡಿತ ದೊರೆಯುತ್ತದೆ ಎಂದರು.

ನಂತರ ಉಪನ್ಯಾಸ ಶಿವಾನಂದ ಮೇಟಿ ಮಾತನಾಡಿ, ಮೀಸಲಾತಿ ಪಡೆಯುವುದರಿಂದ ಮುಂದಿನ ಪೀಳಿಗೆಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅನುಕೂಲವಾಗುತ್ತದೆ ಹಾಗಾಗಿ ಸಮಾಜ ಬಾಂಧವರು ಸಮಾಜದ ಸ್ವಾಮಿಗಳ ಜೊತೆಯಲ್ಲಿ ಕೈಜೋಡಿಸಿ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗಿದೆ. ಹೀಗಾಗಿ ಸಮಾಜ  ಬಾಂಧವರು ಸಮಾವೇಶದಲ್ಲಿ ಹೆಚ್ಚಿನ  ಸಂಖ್ಯೆಯಲ್ಲಿ ಪಾಲ್ಗೊಂಡು ಶಾಂತಿಯುತವಾಗಿ ಹೋರಾಟ ಮಾಡುವ ಮೂಲಕ ಮೀಸಲಾತಿ ಪಡೆದುಕೊಳ್ಳೊಣ ಎಂದರು.

ಸಮುದಾಯದ ಮುಖಂಡರಾದ ವಿರೂಪಾಕ್ಷಪ್ಪ ಕಟಾಂಬ್ಲಿ, ಕರಿಬಸಪ್ಪ ಶೀಲವಂತರ, ಗುರುಸಿದ್ದಪ್ಪ ಯರಕಲ್‌, ಅಮರೇಶ ಕುಳಗಿ, ಶರಣೇಗೌಡ ಬೂದಗುಂಪಾ, ಪರನಗೌಡ ಸೇರಿದಂತೆ ಇತರರು ಮಾತನಾಡಿ, ಸರಕಾರ ಸಮದಾಯದ ತಾಳ್ಮೆ, ಸಹನೆ ಪರೀಕ್ಷಿಸುವ ಕೆಲಸ ಮಾಡಬಾರದು. ಸರಕಾರದ ಮೇಲೆ ಭರವಸೆ ಇಟ್ಟು ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಇದು ಇಂದು ನಿನ್ನೆಯ ಬೇಡಿಕೆಯಲ್ಲ, ಬಹುದಿಗಳ ಬೇಡಿಕೆಯಾಗಿದ್ದು ಸರಕಾರಗಳು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ ಬಂದಿವೆ. ಈಗ ಅವೆಲ್ಲವನ್ನು ಬಿಟ್ಟು ಈ ಕೂಡಲೇ ಸರಕಾರ ಪಂಚಮಸಾಲ ಸಮಾಜಕ್ಕೆ 2ಎ ಮೀಸಲಾಯಿತಿ ನೀಡಬೇಕು. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಮುಂದಿನ ದಿನ ಹೋರಾಟ ಉಗ್ರ ಸ್ವರೂಪ ತಾಳಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಇದನ್ನೂ ಓದಿ :ಕಸಾಪ ಜನಪರ ಮಾಡುವೆ: ಜೋಶಿ

ಸಮಾಜದ ಮುಖಂಡರಾದ ಗುಂಡಪ್ಪ ಕುಳಗಿ, ಬಸವರಾಜಪ್ಪ ಚಳ್ಳೂರು, ಚಂದ್ರಶೇಖರ  ಪೊಲೀಸಪಾಟೀಲ್‌, ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ನಾಗಪ್ಪ ಎಲ್‌ವಿಟಿ, ಎಚ್‌. ಈಶಪ್ಪ, ಆನಂದಪ್ಪ ಅಬ್ಬಿಗೇರಿ, ರವಿಕುಮಾರ ಗುಂಡೂರು, ನಾಗರಾಜ ಬರಗೂರು, ಸಿದ್ಧನಗೌಡ ಕತ್ತಿ, ವೀರಣ್ಣ ಗೋನಾಳ, ಬಜಾರ ಲಿಂಗಪ್ಪ ಸೇರಿದಂತೆ ತಾಲೂಕಿನ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next