ಮೂಡಬಿದಿರೆ: ಆಧುನಿಕ ವೈದ್ಯಕೀಯ ಪದ್ಧತಿಗೆ ಸವಾಲಾಗಿ ಪರಿಣಮಿಸಿರುವ ಹಲವಾರು ರೋಗಗಳಿಗೆ ಪಂಚಕರ್ಮ ಚಿಕಿತ್ಸೆಯ ಮೂಲಕ ರೋಗಿಯನ್ನು ಗುಣಪಡಿಸಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಪ್ರಸಿದ್ಧ ಪಂಚಕರ್ಮ ತಜ್ಞ, ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲ ಯದ ಪ್ರೊ| ಡಾ| ಎ.ಎಸ್. ಪ್ರಶಾಂತ್ ಹೇಳಿದರು.
ಸೋಮವಾರ ವಿದ್ಯಾಗಿರಿಯಲ್ಲಿ ಕೇಂದ್ರ ಸರಕಾರದ ಆಯುಷ್ ಇಲಾಖೆ, ರಾಷ್ಟ್ರೀಯ ಆಯುರ್ವೇದ ಪರಿಷತ್ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪಂಚಕರ್ಮ ವಿಭಾಗದ ವತಿಯಿಂದ ಆರು ದಿನಗಳ ಕಾಲ ನಡೆಯುವ ಪಂಚಕರ್ಮ ವೈದ್ಯರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಹೊಸ ಸಂಶೋಧನೆಗಳು ಹಾಗೂ ರೋಗಿಗೆ ಚಿಕಿತ್ಸೆ ಯನ್ನು ಪರಿಣಾಮಕಾರಿಯಾಗಿ ನೀಡಲು ಸಹಾಯಕಾರಿ ಯಾಗುವ ತಾಂತ್ರಿಕತೆಯನ್ನು ಅರಿತುಕೊಳ್ಳಲು ಇಂತಹ ವಿಚಾರಸಂಕಿರಣ ಸಹಕಾರಿ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಆಳ್ವಾಸ್‌ನಲ್ಲಿ ಆಯುರ್ವೇದ, ಪಂಚಕರ್ಮ ಚಿಕಿತ್ಸೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.
ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ| ಪ್ರವೀಣ್ ವೇದಿಕೆಯಲ್ಲಿದ್ದರು. ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ವಿನಯಚಂದ್ರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ| ಲೀಮಾ ಮೋಳ್ ಮ್ಯಾಥ್ಯೂ ಕಾರ್ಯಕ್ರಮ ನಿರ್ವಹಿಸಿದರು. ಡಾ| ಕೆ.ಎನ್. ರಾಜಶೇಖರ್ ವಂದಿಸಿದರು.