ಜಗಳೂರು: ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಸಮಾಜದಲ್ಲಿ ಅನಿಷ್ಠ ಪದ್ಧತಿ ಮತ್ತು ಸಾಮಾಜಿಕ ಪಿಡುಗಗಳನ್ನು ತೊಲಗಿಸಲು ಪ್ರತಿಯೊಬ್ಬರೂ ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದರು.
ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಭಾನುವಾರ ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್, ಭಾರತೀಯ ಜನಕಲಾ ಸಮಿತಿ, ಭಾರತೀಯ ಮಹಿಳಾ ಒಕ್ಕೂಟಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆಗಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಿಯವರೆಗೂ ವರದಕ್ಷಿಣೆ, ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗಗಳು ಜೀವಂತವಾಗಿರುತ್ತವೋ ಅಲ್ಲಿಯವರೆಗೂ ಸಮಾಜದಲ್ಲಿ ಮಹಿಳೆಯರ ಮೇಲೆ ಶೋಷಣೆ, ದೌರ್ಜನ್ಯ, ನಡೆಯುತ್ತವೆ. ಹೀಗಾಗಿ ಪ್ರತಿಯೊಬ್ಬರೂ ಇವುಗಳ ನಿರ್ಮೂಲನೆಗೆ ಮುಂದಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿ ರಾಜ್ಯದ 30 ಜಿಲ್ಲೆಯಲ್ಲಿ ಪ್ರಗತಿ ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆಯಿದೆ. ಅಂದರೆ 1000 ಗಂಡು ಮಕ್ಕಳಿಗೆ 942 ಮಂದಿ ಹೆಣ್ಣು ಮಕ್ಕಳಿದ್ದಾರೆ ಮಾಹಿತಿ ತಿಳಿದಿದೆ.
ಈ ಅನುಪಾತ ಮುಂದುವರಿದರೆ ಹೆಣ್ಣಿಗಾಗಿ ಸಮಾಜದಲ್ಲಿ ಸಮರಗಳು ನಡೆದರೂ ಅಚ್ಚರಿ ಇಲ್ಲ ಎಂದು ಆತಂಕವ್ಯಕ್ತಪಡಿಸಿದರು. ದೇಶದಲ್ಲಿ ಅರಣ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಇದು ಹೀಗೆ ಮುಂದುವರಿದರೆ ಸಮಾಜಕ್ಕೆ ಉಳಿಗಾಲವಿಲ್ಲ.
ಬಾಲ್ಯವಿವಾಹದ ಬಗ್ಗೆ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತ ಜಾಗೃತಿ ಮೂಡಿಸಬೇಕಾಗಿತ್ತು. ಅಂತಹ ಕೆಲಸವನ್ನು ಸಂಘಟನೆಯವರು ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ, ಶಾಸಕ ಎಚ್.ಪಿ. ರಾಜೇಶ್, ಎಐಎಸ್‌ಎಫ್ ಜಿಲ್ಲಾಧ್ಯಕ್ಷ ಮಾದೇಹಳ್ಳಿ ಮಂಜಪ್ಪ, ಎಐಎಸ್‌ಎಫ್ ರಾಜ್ಯಾಧ್ಯಕ್ಷೆ ಕೆ. ಜ್ಯೋತಿ, ದಾವಣಗೆರೆ ನಗರಪಾಲಿಕೆ ಸದಸ್ಯ ಎಚ್.ಜಿ. ಉಮೇಶ್, ತಹಶೀಲ್ದಾರ್ ಶ್ರೀಧರಮೂರ್ತಿ ಮಾತನಾಡಿದರು.
ಶಿಶುಭಿವೃದ್ಧಿ ಯೋಜನಾಧಿಕಾರಿ ಭಾರತಿ ಬಣಕಾರ್, ಪ್ರಗತಿಪರ ಸಂಘಟನೆ ಮುಖಂಡ ಮಹ್ಮದ್ ಭಾಷಾ, ನರಸಿಂಹಯ್ಯ, ದಲಿತ ಮುಖಂಡ ಜಿ.ಎಚ್. ಶಂಭುಲಿಂಗಪ್ಪ ಇತರರು ಇದ್ದರು.