Advertisement

Panambur : ಕೂಳೂರು ಹಳೆ ಸೇತುವೆಗೆ ಆಕ್ಸಿಜನ್‌!

02:43 PM Aug 18, 2024 | Team Udayavani |

ಪಣಂಬೂರು:  ಎಪ್ಪತ್ತೂಂದು ವರ್ಷಗಳ ಹಿಂದೆ ನಿರ್ಮಾಣವಾದ  ಕೂಳೂರು ಕಮಾನು ಸೇತುವೆಯ ಆಯುಷ್ಯ ಮುಗಿದಿದ್ದರೂ ಈಗ ತಾತ್ಕಾಲಿಕ ತಾಂತ್ರಿಕ ದುರಸ್ತಿ ನೆಪದಲ್ಲಿ  ಆಕ್ಸಿಜನ್‌ ನೀಡಲು ಹೆದ್ದಾರಿ ಇಲಾಖೆ ಇದೀಗ ಎರಡನೇ ಬಾರಿ ಮುಂದಾಗಿದೆ.

Advertisement

2020ರಲ್ಲಿ  ಕೂಳೂರು ಹಳೇ ಸೇತು ವೆಯನ್ನು 38 ಲಕ್ಷ ರೂ.ವೆಚ್ಚದಲ್ಲಿ  ದುರಸ್ತಿ ಗೊಳಿಸಲಾಗಿತ್ತು. ಸೇತುವೆಯ ಅಡಿ ಭಾಗದಲ್ಲಿ ಒಂದಿಷ್ಟು ಪ್ಲಾಸ್ಟರಿಂಗ್‌, ಪೈಂಟಿಂಗ್‌ ಮತ್ತಿತರ ಕೆಲಸ ಮಾಡಿ ಮುಗಿಸಿ ಮತ್ತೆ ಲಘು ವಾಹನ, ಘನ ವಾಹನ ಎರಡನ್ನೂ ಓಡಿಸಲು ಅನುಮತಿ ನೀಡಲಾಗಿತ್ತು. ಈ ಬಾರಿ ಮತ್ತೆ ದುರಸ್ತಿಗೆ ಬೇಡಿಕೆ ಮಂಡಿಸಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಆ.19ರಿಂದ 21ರವರೆಗೆ ಘನ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸುವಂತೆ ಮನವಿ ಮಾಡಿದೆ. ಕಳೆದ ಬಾರಿ 38 ಲಕ್ಷ ರೂ. ಖರ್ಚಾಗಿದೆ, ಈ ಬಾರಿ ಎಷ್ಟು ಎನ್ನುವ ಪ್ರಶ್ನೆ ಎದುರಾಗಿದೆ.

ಹಳೆ ಸೇತುವೆಯಲ್ಲಿ ಓಡಾಟ ಅಪಾಯಕಾರಿ ಎಂದು 5 ವರ್ಷಗಳ ಹಿಂದೆಯೇ ಜಿಲ್ಲಾಡಳಿತಕ್ಕೆ  ತಜ್ಞರ ತಂಡ ವರದಿ ನೀಡಿದ ಬಳಿಕ ಘನ ವಾಹನಗಳ ಓಡಾಟ ಸ್ಥಗಿತಗೊಳಿಸಲಾಗಿತ್ತು. ಆದರೆ ಸ್ಥಳೀಯ ಕೈಗಾರಿಕಾ ಪ್ರದೇಶದ ಸಾವಿರಾರು ಟ್ಯಾಂಕರ್‌, ಕಂಟೈನರ್‌ ವಾಹನಗಳು ಸುತ್ತು ಬಳಸಿ ಓಡಾಟ ನಡೆಸಬೇಕಾದ ಪ್ರಮೇಯ ಬಂದಿತ್ತು. ಇದು ಸರಕು ಸಾಗಾಟ ದುಬಾರಿ, ವಿಳಂಬವಾಗುತ್ತಿದ್ದರಿಂದ ಸೇತುವೆ ದುರಸ್ತಿ ಮಾಡಿ ಅನುಮತಿ ನೀಡಲಾಗಿತ್ತು.

ಹೇಗಿದೆ ಕೂಳೂರು ಸೇತುವೆ ಸ್ಥಿತಿ?

ದಿನದಲ್ಲಿ ಸ್ಥಳೀಯ ಕೈಗಾರಿಕಾ ಪ್ರದೇಶ ಹಾಗೂ ಕೇರಳ, ಗೋವಾ ನಡುವೆ ಸರಾಸರಿ 7 ಸಾವಿರ ವಾಹನ ಓಡಾಟ ನಡೆಸುತ್ತಿವೆ. ಸೇತುವೆ ಮೇಲೆ ಕೆಲವೊಮ್ಮೆ ಮೂರ್ನಾಲ್ಕು ಕಂಟೇನರ್‌ಗಳು ಏಕಕಾಲದಲ್ಲಿ ಓಡಾಡುತ್ತವೆ.  ಇಷ್ಟ ವಾಹನದ ಭಾರವನ್ನು ತಾಳಿಕೊಳ್ಳಲು ಈ ಸೇತುವೆ ಶಕ್ತಿಯುತವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿದೆ.
ಸೇತುವೆಯ ಅಡಿ ಭಾಗದಲ್ಲಿ ಕಬ್ಬಿಣದ ರಾಡುಗಳು ಎದ್ದು ಕಂಡರೆ, ಕಮಾನು ಬಳಿ ತಡೆಗೋಡೆಗಳು ನೇತಾಡುತ್ತಿವೆ.

Advertisement

ಸಂಚಾರ ನಿರ್ಬಂಧ ಹೇಗೆ?

ಆ. 19ರಿಂದ 21ರ ವರೆಗೆ ಘನ ವಾಹನಗಳನ್ನು ರಾತ್ರಿ 10ರಿಂದ ಬೆಳಗ್ಗೆ 6 ಗಂಟೆ ಮತ್ತು ಮಧ್ಯಾಹ್ನ 11ರಿಂದ 3 ಗಂಟೆವರೆಗೆ ಮಾತ್ರ ಬಿಡಲಾಗುತ್ತದೆ.

ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶವಿದೆಯಾದರೂ ಅದು ಬಸ್‌ ಮತ್ತಿತರ ವಾಹನಗಳಿಗೆ ಸೀಮಿತವಾಗಲಿದೆ. ಉಳಿದ ವಾಹನಗಳು ಈ ಹೊತ್ತಿನಲ್ಲಿ ಪರ್ಯಾಯ ಮಾರ್ಗದಲ್ಲಿ ಸಾಗುವಂತೆ ಸೂಚಿಸಲಾಗಿದೆ.

ಆಗಸ್ಟ್‌ 25ರಿಂದ ಸೆ. 25ರವರೆಗೆ ಮತ್ತೂಂದು ಸುತ್ತಿನ ಸಂಚಾರ ನಿರ್ಬಂಧವೂ ಜಾರಿಗೆ ಬರಲಿದೆ. ಆಗ ಕಾಮಗಾರಿಗಳು ನಡೆಯಲಿವೆ.

ಹೊಸ ಸೇತುವೆ ಮತ್ತಷ್ಟು ವಿಳಂಬ?

ಹಳೆ ಸೇತುವೆಯ ಬದಲಿಗೆ ಹೊಸ ಆರು ಪಥದ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿ ಐದು ವರ್ಷವಾದರೂ ಕಾಮಗಾರಿ ಮಾತ್ರ ನಾಲ್ಕೈದು ಫಿಲ್ಲರ್‌ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next