Advertisement

ಪಣಂಬೂರು ಕಡಲ ಕಿನಾರೆ: ಮೀನು ಹಿಡಿಯುವ ಸ್ಪರ್ಧೆ

09:49 AM Dec 25, 2017 | Team Udayavani |

ಪಣಂಬೂರು: ಇಲ್ಲಿನ ಕಡಲ ಕಿನಾರೆಯಲ್ಲಿ ರವಿವಾರ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆಯಿತು. ದೇಶ-ವಿದೇಶಗಳ ಆ್ಯಂಗ್ಲಿಂಗ್‌ ಪ್ರಿಯರು ಬೃಹತ್‌ ಮೀನುಗಳ ನಿರೀಕ್ಷೆಯಲ್ಲಿ ಗಾಳ ಹಿಡಿದು ಬಂಡೆ ಕಲ್ಲಿನ ಮೇಲೆ ನಿಂತಿದ್ದ ದೃಶ್ಯ ಕಂಡು ಬಂತು. ಮಲೇಶ್ಯ, ಓಮಾನ್‌, ಕೇರಳ, ದ.ಕ.,ಉಡುಪಿ ಮತ್ತಿತರ ಕಡೆಗಳಿಂದ ಬಂದ 60ಕ್ಕೂ ಮಿಕ್ಕಿ ಆ್ಯಂಗ್ಲಿಂಗ್‌ ಪ್ರಿಯರು ಗಾಳ ಹಾಕಿ ಮೀನು ಹಿಡಿಯಲು ಆಗಮಿಸಿದ್ದರು. ಮುಂಜಾನೆ ಉಡುಪಿಯ ಮೊಹಮ್ಮದ್‌ ಆಸೀಫ್‌ ಗಾಳಕ್ಕೆ ಸುಮಾರು 11.76 ಕೆ.ಜಿ. ಗಾತ್ರದ ಕ್ವೀನ್‌ ಫಿಶ್‌ ಲಭಿಸಿತು.

Advertisement

ಮಲೇಶ್ಯಾದ ವಿದ್ಯಾರ್ಥಿ ಸಫೈಲ್‌ಗೆ 4 ಕೆ.ಜಿ. ಗಾತ್ರದ ರೆಡ್‌ ಸ್ನಾಪರ್‌ ಮೀನು ಲಭಿಸಿತು. ಇದಲ್ಲದೆ ಕಡ್ವಾಯಿ, ಮುರು
ಮತ್ತಿತರ ಜಾತಿಯ ಮೀನುಗಳು ಗಾಳಕ್ಕೆ ದೊರೆತವು. ನವಮಂಗಳೂರು ಬಂದರು ಬಳಿಯ ಬ್ರೇಕ್‌ ವಾಟರ್‌ ಕಲ್ಲುಗಳ ಮೇಲೆ ಗಾಳ ಹಾಕಿ ಮೀನು ಹಿಡಿಯಲು ಅನುಮತಿ ಪಡೆದವರಿಗೆ ಅವಕಾಶ ನೀಡಲಾಗಿತ್ತು. ಗಾಳ ಸ್ಟಿಕ್‌ಗೂ ಮಾರುಕಟ್ಟೆಯಲ್ಲಿ 1,500 ರಿಂದ 15ಸಾವಿರ ರೂ. ವರೆಗೆ ಬೆಲೆ ಇರುತ್ತದೆ.

ಏಳಡಿಯಿಂದ ಎಂಟಡಿಯವರೆಗೆ ಉದ್ದ ಇರುವ ಈ ಸ್ಟಿಕ್‌ಗಳಲ್ಲಿ ನಕಲಿ ಮೀನು ಸಿಕ್ಕಿಸಿ ಸಮುದ್ರದಲ್ಲಿರುವ ಮೀನನ್ನು
ಆಕರ್ಷಿಸಿ ಹಿಡಿಯಲಾಗುತ್ತದೆ. ಸ್ಪಿನ್ನಿಂಗ್‌ ನೈಲನ್‌ ದಾರಗಳು ಇದರಲ್ಲಿ ಇರುತ್ತವೆ. ಇನ್ನು ಬೇಟ್‌ ಫಿಶಿಂಗ್‌ ಮೂಲಕ ನೈಜ ಮೀನು ಸಿಕ್ಕಿಸಿ ಅದನ್ನು ತಿನ್ನಲು ಬರುವ ಮೀನುಗಳನ್ನು ಹಿಡಿಯಲಾಗುತ್ತದೆ.

ತರಾವರಿ ಮೀನುಗಳು
ಕ್ರೀಡೆಯಾಗಿ ಆಂಗ್ಲಿಂಗ್‌ ಪ್ರಸಿದ್ಧಿಗೊಳ್ಳುತ್ತಿದ್ದು, ಮುಂದಿನ ಬಾರಿ ಒಲಿಂಪಿಕ್ಸ್‌ ಗೆ ಸೇರ್ಪಡೆಯಾಗುವ ಸಾಧ್ಯತೆಗಳೂ ಇವೆ. ವೈದ್ಯರು, ಎಂಜಿನಿಯರ್‌ಗಳ ಸೇರಿದಂತೆ ವಿದ್ಯಾರ್ಥಿಗಳು ಗಾಳ ಹಾಕಿ ಮೀನು ಹಿಡಿಯುವ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಬರುತ್ತಾರೆ. ಪಣಂಬೂರು ಆಂಗ್ಲಿಂಗ್‌ ಪ್ರಿಯರಿಗೆ ಸ್ವರ್ಗ ಎಂದೇ ಹೇಳಬಹುದು. ತರಾವರಿ ಮೀನುಗಳು ಇಲ್ಲಿ ಸಿಗುತ್ತವೆ ಎಂದು ಮಂಗಳೂರು ಆ್ಯಂಗ್ಲರ್ ಕ್ಲಬ್‌ ಪ್ರತಿನಿಧಿ ಅವಿಲ್‌ ಸಂತಸ ಹಂಚಿಕೊಂಡರು.

ಮೀನು ಮತ್ತೆ ನೀರಿಗೆ..!
ಸಾಮಾನ್ಯವಾಗಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಅಂದಾಗ ಅಲ್ಲಿ ಗಾಳಕ್ಕೆ ಸಿಕ್ಕ ಮೀನನ್ನು ಹಿಡಿದವರೇ
ಕೊಂಡೊಯ್ಯುತ್ತಾರೆ. ಆದರೆ, ಪಣಂಬೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಮೀನು ಕೊಂಡೊಯ್ಯಲು ಅವಕಾಶವಿಲ್ಲ. ಗಾಳಕ್ಕೆ ಮೀನು ಸಿಕ್ಕ ತತ್‌ ಕ್ಷಣ ತೂಕ ಮಾಡಿ ಅಂದಾಜಿಸಿ ಮತ್ತೆ ನೀರಿಗೆ ಬಿಡಲಾಗುತ್ತದೆ. ಈ ಮಧ್ಯೆ ಸ್ಪರ್ಧೆಯಲ್ಲದೆ, ಗಾಳದಲ್ಲಿ ಮೀನು ಹಿಡಿಯಲು ಕೂಡ ಇಲ್ಲಿ ಅವಕಾಶ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next