ಪಣಜಿ: ಬೆಳಗಾವಿಯ ಶಿಕ್ಷಣ ಸಂಸ್ಥೆಯೊಂದರ ಒಂಬತ್ತು ವಿದ್ಯಾರ್ಥಿಗಳು ಚಾರಣಕ್ಕೆಂದು ಕಣಕುಂಬಿ ಕಾಡಿನಲ್ಲಿ ದಾರಿ ತಪ್ಪಿದ್ದು ಗೋವಾ ಮತ್ತು ಕರ್ನಾಟಕ ಅರಣ್ಯಾಧಿಕಾರಿಗಳು ಎಂಟು ಗಂಟೆಗಳ ಜಂಟಿ ಶೋಧ ಕಾರ್ಯಾಚರಣೆಯ ನಂತರ ಎಲ್ಲ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಕ್ಕಿರುವ ಮಾಹಿತಿ ಪ್ರಕಾರ ಬೆಳಗಾವಿಯ ಶಿಕ್ಷಣ ಸಂಸ್ಥೆಯೊಂದರ ಒಂಬತ್ತು ವಿದ್ಯಾರ್ಥಿಗಳು ಡಿ.29ರಂದು ದ್ವಿಚಕ್ರವಾಹನದಲ್ಲಿ ಸವಾರಿಗೆ ತೆರಳಿದ್ದರು. ಕರ್ನಾಟಕ-ಗೋವಾ ಗಡಿಭಾಗದ ಪರ್ವಾಡ ಗ್ರಾಮದ ಬಳಿಯ ದಟ್ಟ ಕಾಡಿನಲ್ಲಿ ಜವಾನಿ ಜಲಪಾತಕ್ಕೆ ಹೊರಟಿದ್ದಾರೆ. ವಿದ್ಯಾರ್ಥಿಗಳು ದ್ವಿಚಕ್ರವಾಹನದಲ್ಲಿ ಮೂರು ಕಿಲೋಮೀಟರ್ ದೂರದ ಅರಣ್ಯಕ್ಕೆ ತೆರಳಿದರು. ಆ ನಂತರ ಮರದ ಕೆಳಗೆ ಮೋಟಾರ್ ಸೈಕಲ್ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರೂ ವಾಪಸ್ ಬರುವಾಗ ದಾರಿ ತಪ್ಪಿದ್ದಾರೆ. ರಸ್ತೆ ತಪ್ಪಿದೆ ಎಂದು ಅರಿವಾದ ಕೂಡಲೇ ಕಾಲೇಜು ಗೆಳೆಯರಿಗೆ ರಾತ್ರಿ ವೇಳೆ ಸಂದೇಶ ಕಳುಹಿಸಿ ಸಹಾಯ ಕೋರಿ ಕಾಡಿನಲ್ಲಿ ದಾರಿ ತಪ್ಪಿರುವುದಾಗಿ ತಿಳಿಸಿದರು. ಕೂಡಲೇ ಸ್ನೇಹಿತರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಎಸಿಎಫ್ ಸಂತೋಷ್ ಚವ್ಹಾಣ್ ನೇತೃತ್ವದ ತಂಡವು ಡಿಸೆಂಬರ್ 29 ರ ರಾತ್ರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಜೊತೆಗೆ ಗೋವಾ ಅರಣ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕೊನೆಗೂ ಎಂಟು ಗಂಟೆಗಳ ಹುಡುಕಾಟದ ಬಳಿಕ ಗೋವಾದ ಅರಣ್ಯದಲ್ಲಿ ವಿದ್ಯಾರ್ಥಿಗಳೆಲ್ಲ ಪತ್ತೆಯಾಗಿದ್ದಾರೆ.
ಬಂಡೆಯೊಂದರ ಬಳಿ ಆಶ್ರಯ ಪಡೆದಿದ್ದರು. ಅರಣ್ಯಾಧಿಕಾರಿಗಳು ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಕರೆತಂದಿದ್ದು, ಹಿರಿಯರಿಗೆ ಹಸ್ತಾಂತರಿಸುವ ಮುನ್ನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಒಂಬತ್ತು ವಿದ್ಯಾರ್ಥಿಗಳ ವಿರುದ್ಧ ಗೋವಾ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದು, ಬಾಲಕರ ಬಗ್ಗೆ ಅವರ ಪೋಷಕರು ಹಾಗೂ ಕಾಲೇಜು ಪ್ರಾಂಶುಪಾಲರಿಗೆ ಮಾಹಿತಿ ನೀಡಲಾಗಿದೆ.
ಆರ್‍ಎಫ್‍ಒ ಶಿವಕುಮಾರ್, ರಾಕೇಶ್ ಅರ್ಜುನ್‍ವಾಡ್ ಮತ್ತು ನಾಗರಾಜ್ ಬಾಳೆಹೊಸೂರು, ಡಿಆರ್‍ಎಫ್‍ಒ ವಿನಾಯಕ್ ಪಾಟೀಲ್, ಗೋವಾ ಡಿಎಫ್‍ಒ ಆನಂದ್ ಸೇರಿದಂತೆ ಕರ್ನಾಟಕ ಮತ್ತು ಗೋವಾದ ಅರಣ್ಯ ಸಿಬ್ಬಂದಿ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Mangaluru: ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅಧಿಕಾರ ಸ್ವೀಕಾರ