ಪಣಜಿ: ಹಜ್ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮುಂದಿನ ವರ್ಷಂತ್ಯದೊಳಗೆ ಗೋವಾದಲ್ಲಿ ಸುಸಜ್ಜಿತ ಹಜ್ ಭವನ ನಿರ್ಮಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ ಎಂದು ಗೋವಾ ಹಜ್ ಸಮಿತಿ ಅಧ್ಯಕ್ಷ ಉರ್ಫಾನ್ ಮುಲ್ಲಾ ತಿಳಿಸಿದ್ದಾರೆ.
ನೂತನ ಸಮಿತಿಯ ಮೊದಲ ಸಭೆಯು ಪಣಜಿಯಲ್ಲಿರುವ ಮುಖ್ಯಮಂತ್ರಿ ಸಾವಂತ್ ಅವರ ಅಧಿಕೃತ ನಿವಾಸದಲ್ಲಿ ನಡೆಯಿತು. ಸ್ವತಃ ಮುಖ್ಯಮಂತ್ರಿಗಳೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಡಗಾಂವ್ ನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಹಜ್ ಸಮಿತಿಗೆ ಸುಸಜ್ಜಿತ ಕಚೇರಿ ಒದಗಿಸುವ ಜೊತೆಗೆ ಅಲ್ಪಸಂಖ್ಯಾತರ ಎಲ್ಲ ಯೋಜನೆಗಳನ್ನು ಈ ಕಚೇರಿಯಿಂದಲೇ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದರು.
ಹಜ್ ಯಾತ್ರೆಗೆ ಗೋವಾದಿಂದ 200 ಯಾತ್ರಿಕರು ತೆರಳಲಿದ್ದಾರೆ. ಕೇಂದ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಗೋವಾದಿಂದ ಸೌದಿ ಅರೇಬಿಯಾಕ್ಕೆ ನೇರ ವಿಮಾನವನ್ನು ಒದಗಿಸುವ ಭರವಸೆ ನೀಡಿದ್ದಾರೆ. ಹಜ್ ಯಾತ್ರೆಗೆ ಬಜೆಟ್‍ನಲ್ಲಿ ಮೀಸಲಿಟ್ಟ 30 ಲಕ್ಷ ರೂ.ಗಳನ್ನು 1 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಉರ್ಫಾನ್ ಮುಲ್ಲಾ ತಿಳಿಸಿದ್ದಾರೆ.
ಹಜ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮುಲ್ಲಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಅಭಿನಂದಿಸಿದ್ದಾರೆ.