ಪಣಜಿ: ಲೋಕಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಜನರ ಹಿತಾಸಕ್ತಿ ಮಾತ್ರ ನೋಡಿದ್ದಾರೆ.
ದಕ್ಷಿಣ ಗೋವಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಲ್ಲವಿ ಧೆಂಪೆ ಅವರಿಗೆ ಜನ ಸಾಮಾನ್ಯರ ಜೀವನಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಅವರಿಗೆ ಭಾರಿ ಮತಗಳ ಮೂಲಕ ಮತ ನೀಡುವಂತೆ ಗೋವಾ ಮುಖ್ಯಮಂತ್ರಿ ಡಾ|ಪ್ರಮೋದ್ ಸಾವಂತ್ ಮನವಿ ಮಾಡಿದರು.
ಪಂಚವಾಡಿ-ಶಿರೋಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಧೆಂಪೆ ಪರ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಅಗತ್ಯಗಳನ್ನು ಪೂರೈಸಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೋದಿಯನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಬಿಜೆಪಿ ಗೋವಾದ ಎರಡೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ದಕ್ಷಿಣ ಗೋವಾ ಲೋಕಸಭಾ ಅಭ್ಯರ್ಥಿ ಪಲ್ಲವಿ ಧೆಂಪೆ, ಮಾಜಿ ಸಂಸದ ನರೇಂದ್ರ ಸಾವೈಕರ್, ಜಿಪಂ ಸದಸ್ಯ ನಾರಾಯಣ ಕಾಮತ್, ಪಂಚವಾಡಿ ಸರಪಂಚ್, ಲೀನಾ ಫೆನಾಂìಡಿಸ್, ಶಿರೋಡ ಪಂಚಾಯತ ಅಧ್ಯಕ್ಷೆ ಪಲ್ಲವಿ ಶಿರೋಡ್ಕರ್, ಪಂಚ ಸದಸ್ಯ ಕ್ರಿಸ್ಟೇವ್ ಡಿಕೋಸ್ತಾ, ಶಿರೋಡ ಬಿಜೆಪಿ ಮಂಡಲ ಅಧ್ಯಕ್ಷ ಸೂರಜ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಅವಧೂತ್ ನಾಯ್ಕ, ಜಿಪಂ ಅಧ್ಯಕ್ಷೆ ಸುವರ್ಣಾ ತೆಂಡೂಲ್ಕರ್, ಭಾರತಿ ಶಿರೋಡ್ಕರ್, ಡಾ| ಗೌರಿ ಶಿರೋಡ್ಕರ್, ಸುಮತಿ ನಾಯ್ಕ, ಪ್ರದೀಪ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.