Advertisement

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

06:27 PM Oct 06, 2024 | Team Udayavani |

ಪಣಜಿ: ಗೋವಾದ ಕಡಲ ಗಡಿಗೆ ಅಕ್ರಮವಾಗಿ ನುಗ್ಗಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಮೀನುಗಾರಿಕಾ ಬೋಟ್ ಗಳನ್ನು ಗೋವಾ ರಾಜ್ಯ ಮೀನುಗಾರಿಕೆ ಇಲಾಖೆ ವಶಪಡಿಸಿಕೊಂಡಿದೆ.

Advertisement

ಶನಿವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಕರಾವಳಿ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ಪಾಲ್ಗೊಂಡಿದ್ದರು. ವಶಪಡಿಸಿಕೊಂಡ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಿ ಬೋಟ್ ಮಾಲೀಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮೀನುಗಾರಿಕೆ ಅಧಿಕಾರಿಗಳೊಂದಿಗೆ ಸಚಿವ ಚರ್ಚೆ:
ಕಳೆದ ಕೆಲ ದಿನಗಳಿಂದ ಮಲ್ಪೆಯಿಂದ ಮೀನುಗಾರಿಕಾ ಬೋಟ್ ಗಳು ಗೋವಾ ಕಡಲ ಗಡಿ ಪ್ರವೇಶಿಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ ಎಂದು ಸ್ಥಳೀಯ ಮೀನುಗಾರರು ದೂರು ನೀಡಿದ್ದರು. ಆ ಬೋಟ್ ನಲ್ಲಿದ್ದ ಮೀನುಗಾರರು ಸ್ಥಳೀಯರಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ಇದಾದ ಬಳಿಕ ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್  ಕರ್ನಾಟಕದ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಯೂ ನಡೆಸಿದ್ದರು.

ಆದರೆ, ಮಲ್ಪೆಯಿಂದ ಬರುತ್ತಿದ್ದ ಮೀನುಗಾರಿಕಾ ಬೋಟ್ ಗಳು ಗೋವಾ ಪ್ರದೇಶ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದವು ಎಂಬ ಆರೋಪವಿದೆ. ಇದಾದ ಬಳಿಕ ಇಂತಹ ಘಟನೆಗಳ ತಡೆಯಲು ಗೋವಾದ ಮೀನುಗಾರಿಕೆ ಇಲಾಖೆ ವಿಶೇಷ ಕಾರ್ಯಪಡೆ ನೇಮಿಸಿತ್ತು. ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್  ಅಂತಹ ಬೋಟ್ ಗಳ ವಿರುದ್ಧ ಕಠಿನ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು.

ಮತ್ತೆರಡು ಬೋಟ್‌ಗಳು ಪರಾರಿ: 
ಶನಿವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಕರ್ನಾಟಕದ ಮಲ್ಪೆ ಮೀನುಗಾರಿಕಾ ಬೋಟ್‌ಗಳ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದು, ಕಾರ್ಯಾಚರಣೆ ವೇಳೆ ಇನ್ನೆರಡು ಬೋಟ್‌ಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದೆ ಎಂದು ಗೋವಾ ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ. ವಶಪಡಿಸಿಕೊಂಡ ಮೀನುಗಾರಿಕಾ ಬೋಟ್‌ಗಳ ಪಣಜಿ ಜೆಟ್ಟಿಗೆ ತರಲಾಗಿದೆ. ಅಕ್ರಮ ಒಳ ನುಸುಳುವಿಕೆಯ ವಿರುದ್ಧ ಇದೇ ರೀತಿ ಕ್ರಮ ಮುಂದುವರಿಯಲಿದೆ ಎಂದು ಸಚಿವ ಹಳರ್ಣಕರ್ ಮಾಹಿತಿ ನೀಡಿದ್ದಾರೆ.

Advertisement

ದಂಡದ ಮೊತ್ತ ಹೆಚ್ಚಿಸಲು ಪ್ರಸ್ತಾವನೆ
ಮೀನುಗಾರಿಕಾ ಇಲಾಖೆಯ ಅಧೀಕ್ಷಕ ಚಂದ್ರೇಶ ಹಳದನಕರ ಮಾತನಾಡಿ, ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನೀಡಿದ ಆದೇಶದಂತೆ ಇಲಾಖಾ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಅದರಂತೆ ಈ ಕ್ರಮ ಕೈಗೊಂಡಿದ್ದೇವೆ. ವಶಪಡಿಸಿಕೊಂಡ ಮೀನುಗಾರಿಕಾ ಬೋಟ್ ಗಳ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ದಂಡದ ಮೊತ್ತ ರೂ. 10 ಲಕ್ಷಕ್ಕೆ ಹೆಚ್ಚಿಸಲು ಇಲಾಖೆ ಪ್ರಕ್ರಿಯೆ ಆರಂಭಿಸಿದೆ. ಕಾನೂನು ಬದಲಾದರೆ ಈ ಮೊತ್ತವನ್ನು ಹೆಚ್ಚಿಸಲಾಗುವುದು ಎಂಬ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next