ಪಣಜಿ: ಗೋವಾದ ಪಣಜಿಯ ಪ್ರಸಿದ್ಧ ಪ್ರವಾಸಿ ತಾಣ ದೋನಾಪೌಲಾದ ಹಳೆ ಜೆಟ್ಟಿಯ 49 ಮೀಟರ್ ಭಾಗ ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನವೀಕರಿಸಿದ ಜೆಟ್ಟಿಯ ಹೆಚ್ಚಿನ ಭಾಗವು ಈಗ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಮುಕ್ತವಾಗಿದೆ.
ದೊನಾಪೌಲಾ ಜೆಟ್ಟಿಯ ಮೊದಲ ಹಂತದ ನವೀಕರಣದ ನಂತರ ಹಳೆಯ ಜೆಟ್ಟಿಯ ರಚನಾತ್ಮಕ ದುರಸ್ತಿ ಮತ್ತು ಪುನರ್ನಿರ್ಮಾಣಕ್ಕೆ ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಜಿಟಿಡಿಸಿ) ನಿರ್ಧರಿಸಿದೆ. ಅಂದಾಜು 7.5 ಕೋಟಿ ರೂ. ವೆಚ್ಛದಲ್ಲಿ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯೂ ಇದೆ. ಕಾಮಗಾರಿಗೆ ಗುತ್ತಿಗೆದಾರರ ಆಯ್ಕೆಗೆ ಜಿಟಿಡಿಸಿ ಟೆಂಡರ್ ಕರೆದಿದ್ದು, ಡಿಸೆಂಬರ್‍ನಲ್ಲಿ ಟೆಂಡರ್ ತೆರೆಯಲಾಗುವುದು ಎಂಬ ಮಾಹಿತಿ ನೀಡಿದೆ.
ಹಳೆಯ ಜೆಟ್ಟಿ ಅಪಾಯಕಾರಿ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಹಳೆ ಜೆಟ್ಟಿಯ 49 ಮೀಟರ್ ಭಾಗವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಹಳೆಯ ಜೆಟ್ಟಿಯನ್ನು ಪುನರ್ ನಿರ್ಮಿಸಬೇಕು ಎಂದು ಪಿಡಬ್ಲ್ಯುಡಿ ವರದಿಯಲ್ಲಿ ಸೂಚಿಸಿತ್ತು. ಹಲವೆಡೆ ಜೆಟ್ಟಿ ರೇಲಿಂಗ್‍ಗಳು ಮುರಿದು ಬಿದ್ದಿವೆ ಅಥವಾ ನಾಪತ್ತೆಯಾಗಿದ್ದು, ತುಕ್ಕು ಹಿಡಿದಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಉಪಕರಣಗಳು ದುಸ್ಥಿತಿಯಲ್ಲಿದ್ದು, ತಂತಿಗಳು ತೆರೆದು ತುಕ್ಕು ಹಿಡಿದಿವೆ. ಇದೆಲ್ಲವೂ ಜೆಟ್ಟಿ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ: Stock Market: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 88 ಅಂಕ ಇಳಿಕೆ; ಲಾಭಗಳಿಸಿದ ಷೇರು ಯಾವುದು?