ಹೊಸ ವರ್ಷ ಬಂದಿದೆ. ಕನ್ನಡ ಚಿತ್ರರಂಗ ಮತ್ತೆ ನಿರೀಕ್ಷೆಯ ಕಂಗಳೊಂದಿಗೆ ಎದುರು ನೋಡುತ್ತಿದೆ. ಈ ಬಾರಿ ಎಂದಿಗಿಂತಲೂ ಕುತೂಹಲ ಹೆಚ್ಚಿದೆ. ಅದಕ್ಕೆ ಕಾರಣ ಬಿಡುಗಡೆಗೆ ಸಿದ್ಧವಾಗಿರುವ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು!
ಹೌದು, ಹೊಸ ವರ್ಷದ ಆರಂಭದಲ್ಲೇ ಕನ್ನಡ ಚಿತ್ರರಂಗದಿಂದ ಸಾಕಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಯಶ್ ನಟನೆಯ “ಕೆಜಿಎಫ್-2′, ಸುದೀಪ್ ನಾಯಕರಾಗಿರುವ “ವಿಕ್ರಾಂತ್ ರೋಣ’, ಉಪೇಂದ್ರ ಅವರ “ಕಬ್ಜ’, ರಕ್ಷಿತ್ ಶೆಟ್ಟಿ ಅವರ “777 ಚಾರ್ಲಿ’ ಮೊದಲ ಹಂತವಾಗಿ ಬಿಡುಗಡೆಯಾದರೆ, ಆ ನಂತರ ಸಾಕಷ್ಟು ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿವೆ. ಅದರಲ್ಲಿ ದರ್ಶನ್ ಅವರ “ಕ್ರಾಂತಿ’ಯೂ ಸೇರಿದೆ. ಜೊತೆಗೆ “ಏಕ್ ಲವ್ ಯಾ’, “ಮಾರ್ಟಿನ್’ ಸೇರಿದಂತೆ ಅನೇಕ ಸಿನಿಮಾಗಳು ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಮದುವೆ ವಯಸ್ಸು ಹೆಚ್ಚಳ; ಸಂಸದೀಯ ಸಮಿತಿಯಲ್ಲಿ ಓರ್ವ ಸಂಸದೆಗೆ ಸ್ಥಾನ!
ಯಶ್ ನಟನೆಯ “ಕೆಜಿಎಫ್-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಚಾಲ್ತಿಗೆ ಬಂತು. ಆ ನಂತರ ಅನೇಕ ಸ್ಟಾರ್‌ಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದವು. ಈ ಮೂಲಕ ಕನ್ನಡ ಚಿತ್ರಗಳ ಗುಣಮಟ್ಟ, ಇಲ್ಲಿನ ಕಲಾವಿದರ ಸಾಮರ್ಥ್ಯ ಬೇರೆ ಭಾಷೆಗಳಿಗೂ ಪರಿಚಯವಾಗುವಂತಾಯಿತು. ಇದೇ ಕಾರಣದಿಂದ ಈಗ ಕನ್ನಡ ಸಿನಿಮಾಗಳಿಗೆ ಪರಭಾಷೆಗಳಲ್ಲೂ ಮಾರುಕಟ್ಟೆ ಇದೆ. ಬೇರೆ ಬೇರೆ ಭಾಷೆಯ ವಿತರಕರು ಕೂಡಾ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದೆ ಬರುತ್ತಿದ್ದಾರೆ. ಈಗ ಹೊಸ ವರ್ಷದಲ್ಲಿ ಕನ್ನಡದಿಂದ ಅನೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ನಿರೀಕ್ಷೆ ಗರಿಗೆದರಿದೆ.
ಪರರಾಜ್ಯಗಳಲ್ಲೂ ಪ್ರಚಾರದ ಅಗತ್ಯ: ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಪರಭಾಷಾ ಚಿತ್ರಗಳು ಕರ್ನಾಟಕವನ್ನು ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರನ್ನು ಹೆಚ್ಚೇ ಟಾಗೇìಟ್ ಮಾಡಿವೆ. ಅದರ ಪರಿಣಾಮವಾಗಿ ಸಿನಿಮಾಗಳ ಪ್ರಮೋಶನ್ ಜೋರಾಗಿಯೇ ನಡೆಯುತ್ತಿದೆ. ನಮ್ಮ ಕನ್ನಡ ಸಿನಿಮಾ ತಂಡಗಳು ಕೂಡಾ ಪರಭಾಷೆಯಲ್ಲಿ, ಪರರಾಜ್ಯಗಳಲ್ಲಿ ಹೆಚ್ಚೆಚ್ಚು ಸಿನಿಮಾ ಪ್ರಮೋಶನ್ ಮಾಡಿ, ಅಲ್ಲಿನ ಪ್ರೇಕ್ಷಕರಿಗೆ ಹತ್ತಿರವಾದಾಗ ಮಾತ್ರ ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಲುಪಲು ಸಾಧ್ಯ. ಆದರೆ, ಕನ್ನಡದ ಕೆಲವು ತಂಡಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನೊಂದಿಗೆ ಸಿನಿಮಾ ಆರಂಭಿಸಿದರೂ ಅದನ್ನು ಸೂಕ್ತ ರೀತಿಯಲ್ಲಿ ಪ್ರಚಾರ ಮಾಡುವಲ್ಲಿ ಎಡವುತ್ತಿವೆ. ಹೀಗಾದಾಗ ನಮ್ಮ ಶ್ರಮ ಕೂಡಾ ವ್ಯರ್ಥವಾಗುತ್ತದೆ. ಆದರೆ, ಪರಭಾಷೆಯ ಸ್ಟಾರ್ ಸಿನಿಮಾಗಳು ಕೂಡಾ ಈಗ ಕರ್ನಾಟಕವನ್ನು ದೊಡ್ಡ ಮಟ್ಟದಲ್ಲಿ ಟಾರ್ಗೆಟ್ ಮಾಡಿರುವುದರಿಂದ ಕನ್ನಡ ಚಿತ್ರರಂಗ ಎಚ್ಚೆತ್ತುಕೊಳ್ಳ ಬೇಕಿದೆ