Advertisement

ಸುವರ್ಣ ಮಹೋತ್ಸವ ಕರಪತ್ರ ಬಿಡುಗಡೆ

06:50 PM Mar 05, 2021 | Adarsha |

ಸಾಗರ: ಸಂಸ್ಥೆಯೊಂದರ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ, ವಜ್ರೋತ್ಸವ, ಶತಮಾನೋತ್ಸವದಂತಹ ಕಾರ್ಯ ಕ್ರಮಗಳಲ್ಲಿ ನಾವು ಹೆಚ್ಚು ಆಸಕ್ತಿ, ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇಂತಹ ಮಹತ್ವದ ಮೈಲಿಗಲ್ಲುಗಳ ಕಾರ್ಯಕ್ರಮಗಳು ನಮ್ಮ ಕಾಲದಲ್ಲಿ ಘಟಿಸುವುದನ್ನು ತಪ್ಪಿಸಿಕೊಳ್ಳಬಾರದು. ಕಾಲಾನುಕ್ರಮದಲ್ಲಿ ಬರುವ ಇಂತಹ ಸಂದರ್ಭಗಳು ಸಿಕ್ಕುವುದೇ ಅಪರೂಪಎಂಬುದನ್ನು  ನೆನಪಿನಲ್ಲಿಡಬೇಕಾಗುತ್ತದೆ ಎಂದು ಇಕ್ಕೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್‌.ಟಿ. ರತ್ನಾಕರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಎಡಜಿಗಳೇಮನೆಯ  ಇಕ್ಕೇರಿ ಪ್ರೌಢಶಾಲೆಯಲ್ಲಿ ಮೇ 15 ಹಾಗೂ 16ರಂದು ಸುವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ಬುಧವಾರ ಶಾಲಾವರಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮಾಲೋಚನಾ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಸ್ಥೆ 2015ರಲ್ಲಿಯೇ 50 ವರ್ಷಗಳನ್ನು ಪೂರೈಸಿ “ಸುವರ್ಣ ಸಂಭ್ರಮ’ ಕಂಡಿತ್ತು.ಯಾವುದೇ ಲಾಭಾಕಾಂಕ್ಷೆಯಿಲ್ಲದೆ, ಜಾತಿ ಅಂತಸ್ತುಗಳ ತಾರತಮ್ಯವಿಲ್ಲದೆ ಈ ಭಾಗದ ಮಕ್ಕಳಿಗೆ ಮಹತ್ವದ ಪ್ರೌಢಶಾಲಾ ಹಂತದ ಶಿಕ್ಷಣ ಪೂರೈಸುವಲ್ಲಿ ದುಡಿದ ಆಡಳಿತ ಮಂಡಳಿಯ ಮಹನೀಯರು, ಗುರುಗಳಾಗಿ ಅಕ್ಷರ, ಜ್ಞಾನ ನೀಡಿದ ಪ್ರಾತಃಸ್ಮರಣೀಯರು, ಸಹಾಯ ಹಸ್ತ ಚಾಚಿದ ದಾನಿಗಳು ಹಾಗೂ ಸಾಧಕರನ್ನು ಸ್ಮರಿಸಲು “ಸುವರ್ಣ ಸಮಾರಂಭ’ಕ್ಕಿಂತ ಮತ್ತೂಂದು ಅವಕಾಶ ನಮಗೆ ಸುಲಭದಲ್ಲಿ ಸಿಗುವುದಿಲ್ಲ ಎಂದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆ.ಆರ್‌.ವೆಂಕಟೇಶ್‌ ವಾಟೆಹಕ್ಲು ಮಾತನಾಡಿ, ಗ್ರಾಮೀಣ ಶಿಕ್ಷಣ ವ್ಯವಸ್ಥೆಗಳು ಸವಾಲುಗಳನ್ನು ಎದುರಿಸುವ ಪರಿಸ್ಥಿತಿಗೆ ಇಕ್ಕೇರಿ ಪ್ರೌಢಶಾಲೆ ಹೊರತಲ್ಲ. ಇದನ್ನೂ ಸವಾಲಾಗಿ ಸ್ವೀಕರಿಸಿರುವ ವಿದ್ಯಾಸಂಸ್ಥೆ ಸಂಸ್ಥೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಈಗಾಗಲೇ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಉಚಿತವಾದ ವಿದ್ಯಾರ್ಥಿ ನಿಲಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಇದರ ಲೋಕಾರ್ಪಣೆ ಕೂಡ ಸುವರ್ಣ ಸಮಾರಂಭದ ಸಂದರ್ಭದಲ್ಲಿ ನಡೆಯ ಲಿದೆ. ಸ್ಥಳೀಯ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ಒದಗಿಸುವ ಚಿಂತನೆಯ ಪ್ರಾಥಮಿಕ ಶಾಲೆಯನ್ನು ಕೂಡ ಆರಂಭಿಸಲಾಗಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ರಜನೀಶ್‌ ಸಿ., ಸಂಸ್ಥೆಯ ಸಹ ಕಾರ್ಯದರ್ಶಿ ಜೆ.ಡಿ. ರಾಮಚಂದ್ರ, ಗ್ರಾಪಂ ಸದಸ್ಯ ರವಿ, ಪ್ರವೀಣ್‌ ಸೆಟ್ಟಿಸರ, ಸುಧಾಕರ ಕರ್ಕಿಕೊಪ್ಪ, ವೆಂಕಟೇಶ್‌ ಖಂಡಿಕಾ, ಉಮೇಶ್‌ ಬೆಂಕಟವಳ್ಳಿ, ಮನು ಬಾಳೆಹಳ್ಳಿ ಇತರರು ಪಾಲ್ಗೊಂಡಿದ್ದರು. ಎಸ್‌.ಜಿ. ಶ್ರೀಕಾಂತ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next