Advertisement

ಗಂಗಾವತಿ: ಪಂಪಾಸರೋವರ ಜೀರ್ಣೋದ್ಧಾರ; ಜಯಲಕ್ಷ್ಮೀ ಮೂರ್ತಿ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ

08:42 PM May 26, 2022 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಪಂಪಾಸರೋವರ ಜೀರ್ಣೋದ್ಧಾರ ನೆಪದಲ್ಲಿ ಜಯಲಕ್ಷ್ಮೀ  ಗರ್ಭಗುಡಿಯನ್ನು ಸಂಪೂರ್ಣವಾಗಿ ಕಿತ್ತು ಹಾಕಿ ಜಯಲಕ್ಷ್ಮೀ  ದೇವತೆಯ ಮೂರ್ತಿ ಪ್ರತಿಷ್ಠಾಪಿಸಿದ ಗರ್ಭಗುಡಿಯ ಪಾಣಿ ಬಟ್ಲು ಕಿತ್ತು ದೇವತೆಯ ಮೂರ್ತಿಯನ್ನು ಈಶ್ವರನ ಗುಡಿಯಲ್ಲಿಡಲಾಗಿದ್ದು ಕೂಡಲೇ ಪುರಾತತ್ವ ಪ್ರಾಚ್ಯವಸ್ತು ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಿಷ್ಕಿಂದಾ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಪಂಪಾಸರೋವರವೂ ಒಂದಾಗಿದ್ದು ಇಲ್ಲಿ ವಿಶಾಲವಾದ ಸರೋವರ ಮತ್ತು ಮತ್ತೊಂದು ಚಿಕ್ಕ ಸರೋವರವಿದ್ದು  ದೇಶದ ನಾಲ್ಕು ಪ್ರಮುಖ ಸರೋವರಗಳಲ್ಲಿ ಪಂಪಾಸರೋವರವೂ ಒಂದಾಗಿದೆ. ಉತ್ತರ ಭಾರತೀಯರು ಚಾರ್ ಧಾಮ್ ಯಾತ್ರೆಯ ಸಂದರ್ಭದಲ್ಲಿ ಪಂಪಾಸರೋವರಮತ್ತು ಕಿಷ್ಕಿಂಧಾ ಅಂಜನಾದ್ರಿ ಕ್ಕೆ ಕಡ್ಡಾಯವಾಗಿ ಆಗಮಿಸುವುದು ಸಂಪ್ರದಾಯವಾಗಿದೆ.

ವಿಜಯನಗರ ಸಾಮಾಜ್ಯ ಸ್ಥಾಪನೆ ಸಂದರ್ಭದಲ್ಲಿ ಹಕ್ಕರಾಯ ಮತ್ತು ಬುಕ್ಕರಾಯರಿಗೆ ವಿದ್ಯಾರಣ್ಯ ಗುರುಗಳ ತಪ್ಪಸ್ಸಿನ ಫಲವಾಗಿ ಹೊನ್ನನ ಮಳೆಯಾಗಿ ಸಾಮ್ರಾಜ್ಯ ಸ್ಥಾಪನೆಗೆ ಸಂಪತ್ತನ್ನು ಕ್ರೋಢಿಕರಿಸಿ ಕೊಟ್ಟಿರುವ ಕುರಿತು ಇತಿಹಾಸದಲ್ಲಿಮ ಉಲ್ಲೇಖಿತವಾಗಿದ್ದು ಆ ಸಂದರ್ಭದಲ್ಲಿಯೇ ಪಂಪಾಸರೋವರದಲ್ಲಿ ಜಯಲಕ್ಷ್ಮೀ  ದೇಗುಲ ಸ್ಥಾಪಿತವಾಗಿರುವ ಕುರಿತು ಇತಿಹಾಸ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನೂ ಸ್ಕಂಧ ಪುರಾಣದಲ್ಲಿ ಇದನ್ನು ಶೈವ ಕ್ಷೇತ್ರವೆಂದೂ ದಕ್ಷಬ್ರಹ್ಮನ ಯಜ್ಞಕ್ಕೆ ಆಹ್ವಾನವಿಲ್ಲದೇ ಆಗಮಿಸಿದ ಪಾರ್ವತಿಗೆ ತಂದೆ ಮಾಡಿದ ಅವಮಾನದಿಂದ ಮನನೊಂದು ಪಾರ್ವತಿ ಯಜ್ಞಕುಂಡದಲ್ಲಿ ಬಿದ್ದು ಸಾವನ್ನಪ್ಪಿದ ನಂತರ ಪರಮೇಶ್ವರ ಪಂಪಾಸರೋವರಕ್ಕೆ ಆಗಮಿಸಿ ತಪ್ಪಸ್ಸು ಮಾಡಿದ ಪ್ರಸ್ತಾಪವಿದೆ. ಇಷ್ಟೆಲ್ಲ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಪಂಪಾಸರೋವರದ ಜಯಲಕ್ಷ್ಮೀ  ದೇಗುಲದ ಗರ್ಭಗುಡಿ ದೇವತೆಯ ಮೂರ್ತಿ ತೆಗೆದು ಪಾಣಿ ಬಟ್ಲು ಬದಿಗೆ ಸರಿಸಿರುವುದು ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎಂದು ಸ್ಥಳೀಯರು ಮತ್ತು ಆನೆಗೊಂದಿ ರಾಜಮನೆತನದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪಂಪಾಸರೋವರ ಮತ್ತು ಇಲ್ಲಿಯ ಸುತ್ತಲಿನ ದೇವಾಲಯಗಳನ್ನು ಸ್ವಯ ಇಚ್ಛೆಯಿಂದ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಈಗಾಗಲೇ ಪಂಪಾಸರೋವರದ ನೀರನ್ನು ಹೊರಗೆ ತೆಗೆದು ಸುತ್ತಲು ಟೈಲ್ಸ್ ಮಾದರಿಯ ಹಳೆಯ ಶೈಲಿಯಂತೆ ಆಕರ್ಷಣೀಯವಾಗಿ ಜೋಡಣೆ ಮಾಡಲಾಗಿದೆ.  ಬಿದ್ದ ಕೆಲ ಮಂಟಪಗಳನ್ನು ಪುನರಜೋಡಣೆ ಮಾಡಲಾಗಿದೆ. ಜಯಲಕ್ಷ್ಮೀ  ಗರ್ಭಗುಡಿಯನ್ನು ಹೊರಭಾಗದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡದೇ ಜಯಲಕ್ಷ್ಮೀ  ದೇವತೆಯ ಮೂರ್ತಿ ಸಮೇತ ಜಯಲಕ್ಷ್ಮೀ  ಮೂರ್ತಿ ಸ್ಥಾಪನೆಯ  ಪಾಣಿಬಟ್ಲು ಶ್ರೀಚಕ್ರ ಮೇಲೆ ಜ ಜಯಲಕ್ಷ್ಮೀ  ಮೂರ್ತಿ ಸ್ಥಾಪಿಸಲಾಗಿತ್ತು.

ವಿಜಯನಗರದ ರಾಜಗುರುಗಳಾದ ವಿದ್ಯಾರಣ್ಯರ ಕಾಲದಲ್ಲಿ ಸ್ಥಾಪಿತವಾದ ಬಹುತೇಕ ಐತಿಹಾಸಿಕ ದೇವಾಲಯಗಳ ಗರ್ಭಗುಡಿಯಲ್ಲಿ ಶ್ರೀಚಕ್ರದ  ಇರುವ ಶಿಲೆಯ ಮೇಲೆ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಪಂಪಾಸರೋವರದ ಜಯಲಕ್ಷ್ಮೀ  ದೇಗುಲದ ಗರ್ಭಗುಡಿಯಲ್ಲಿಯೂ ಶ್ರೀಚಕ್ರದ ಶಿಲೆ ಮತ್ತು ಜಯಲಕ್ಷ್ಮೀ ಮೂರ್ತಿಯನ್ನು ಈಶ್ವರನ ಗುಡಿಯಲ್ಲಿರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಪಂಪಾಸರೋವರದ ಜಯಲಕ್ಷ್ಮಿ  ದೇವಾಲಯ  ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಿದ್ದು ಎನ್ನಲಾಗುತ್ತಿದೆ. ಇದನ್ನು ಜೀರ್ಣೋದ್ಧಾರ ನೆಪದಲ್ಲಿ ವಿದ್ಯಾರಣ್ಯರಿಂದ ಶ್ರೀಚಕ್ರ ಶಿಲೆಯ ಮೇಲಿನ ಜಯಲಕ್ಷ್ಮಿ ದೇವತೆ ಮೂರ್ತಿಯನ್ನು ಕಿತ್ತಿರುವುದು ಸರಿಯಲ್ಲ. ಪುರಾತತ್ವ ಇಲಾಖೆಯವರು ಈ ಭಾಗದ ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದು ಜಯಲಕ್ಷ್ಮೀ ದೇಗುಲ ಕಿತ್ತು ಹಾಕಿದರೂ ಹೇಳುವವರಿಲ್ಲ ಕೇಳುವವರಿಲ್ಲ. ಪಂಪಾಸರೋವರವನ್ನು ಜೀರ್ಣೋದ್ಧಾರ ಮಾಡುತ್ತಿರುವುದು ಶ್ಲಾಘನೀಯವಾಗಿದ್ದರೂ ಜಯಲಕ್ಷ್ಮಿ  ದೇಗುಲ ಕಿತ್ತು ಹಾಕಿದ್ದು ಸರಿಯಲ್ಲ. ಶ್ರೀಚಕ್ರ ಶಿಲೆಯನ್ನು ತೆಗೆಯುವ ಸಂದರ್ಭದಲ್ಲಿ ಜಖಂ ಗೊಂಡಿದ್ದು  ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.  _ಹೆಸರೇಳಲಿಚ್ಛಿಸದ ರಾಜವಂಶಸ್ಥರು ಹಾಗೂ ಸ್ಥಳೀಯರು.

ಮೈಸೂರಿನಲ್ಲಿರುವ ರಾಜ್ಯ ಪುರಾತತ್ವ ಇಲಾಖೆ ಕಮೀಷನರ್ ಅವರಿಂದ ಸಚಿವ ಬಿ.ಶ್ರೀರಾಮುಲು ಅವರು ಪಂಪಾಸರೋವರ ಜೀರ್ಣೋದ್ಧಾರ ಮಾಡಲು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಷರತ್ತಿನ ಅನ್ವಯ  ಪರವಾನಿಗೆ ಪಡೆದಿದ್ದಾರೆ. ಜಯಲಕ್ಷ್ಮೀ ದೇಗುಲದ ಗರ್ಭ ಗುಡಿ ಕಿತ್ತು ಶ್ರೀಚಕ್ರ ಹಾಗೂ ದೇವತೆ ಮೂರ್ತಿ ಬೇರೆಡೆ ಇಟ್ಟಿರುವುದರ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಇದನ್ನು ಪರಿಶೀಲನೆ ಮಾಡಲು ಇಲಾಖೆಯ ಅಭಿಯಂತರರನ್ನು ನೇಮಕ ಮಾಡಲಾಗಿದೆ. -ಪ್ರಲ್ಹಾದ್ ಉಪನಿರ್ದೇಶಕರು ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಕಮಲಾಪೂರ.

ಪುರಾತತ್ವ ಇಲಾಖೆ ಪರವಾನಿಗೆ ಮೇರೆಗೆ ಪಂಪಾಸರೋವರದ ಜೀರ್ಣೋದ್ಧಾರ ವನ್ನು ಖಾಸಗಿಯವರು ಮಾಡುತ್ತಿದ್ದಾರೆ. ಜಯಲಕ್ಷ್ಮಿ  ದೇಗುಲದ ಗರ್ಭಗುಡಿಯ ಶ್ರೀಚಕ್ರ ಹಾಗೂ ದೇವರ ಮೂರ್ತಿ ತೆಗೆದು ಪಕ್ಕದ ಕೋಣೆಯಲ್ಲಿಟ್ಟಿರುವುದು ಮಾಹಿತಿ ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ.  -ಚಂದ್ರಶೇಖರ ಮಸಾಳೆ ಅಭಿಯಂತರರು ಪ್ರಾಚ್ಯವಸ್ತು ಇಲಾಖೆ

 

-ವಿಶೇಷ ವರದಿ: ಕೆ ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next