Advertisement

Pampa Sarovar: ಐತಿಹಾಸಿಕ ಪಂಪಾ ಸರೋವರಕ್ಕೆ ಬೇಕಿದೆ ಮೂಲಸೌಕರ್ಯ

02:04 PM Sep 05, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ದೇಶ ವಿದೇಶದಲ್ಲಿ ಖ್ಯಾತಿ ಪಡೆದಿರುವ ಐತಿಹಾಸಿಕ ಪಂಪಾ ಸರೋವರಕ್ಕೆ ನಿತ್ಯ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಭಕ್ತರು ನಿಡುಸುಯ್ಯುವಂತಾಗಿದೆ. ಹೆಸರಿಗೆ ಮಾತ್ರ ಸರ್ಕಾರದ ಸುಪರ್ದಿಯಲ್ಲಿದೆ.

Advertisement

ಉತ್ತರ ಭಾರತದಿಂದ ಪ್ರತಿ ದಿನ 50ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರವಾಸಿಗರು ಚಾರಧಾಮ್‌ ಯಾತ್ರೆ ವೇಳೆ ಇಲ್ಲಿಗೆ ಬಂದು ಶ್ರೀ ಆಂಜನೇಯ, ಋಷಿ ಮುಖ ಪರ್ವತದಲ್ಲಿ ವಾಲೀ, ಸುಗ್ರೀವ್‌, ಪಂಪಾ ಸರೋವರದ ವಿಜಯಲಕ್ಷ್ಮಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಕುಡಿವ ನೀರು, ಶೌಚಾಲಯ ಹಾಗೂ ಸ್ನಾನಗೃಹ ಮತ್ತು ಅಡುಗೆ ಕೋಣೆಯಿಲ್ಲದೇ ಪ್ರವಾಸಿಗರು ಪರದಾಡುತ್ತಾರೆ.

ಪಂಪಾ ಸರೋವರ ರಾಮಾಯಣ, ಮಹಾಭಾರತ ಕಾವ್ಯಗಳಲ್ಲಿ ಉಲ್ಲೇಖಿತವಾದ ಸರೋವರವಾಗಿದೆ. ಇಲ್ಲಿನ ನೀರನ್ನು ಸೇವಿಸಿದರೆ ಪಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ಹರಿಯಾಣ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಂದ ಪ್ರತಿ ನಿತ್ಯ ಪ್ರವಾಸಿಗರು ಬರುತ್ತಾರೆ.

ಭಕ್ತರಿಗೆ ಪಂಪಾ ಸರೋವರ ದೇವಾಲಯ ಕಮೀಟಿಯವರು ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಈ ಹಿಂದೆ ನಿರ್ಮಿಸಿದ್ದ ಶೌಚಾಲಯ ಸಣ್ಣದ್ದಾಗಿದ್ದು ನಿರ್ವಹಣೆ ಇಲ್ಲದೇ ಹಾಳಾಗಿದೆ. ನೀರಿನ ಟ್ಯಾಂಕ್‌ ನಿರ್ಮಿಸಿದ್ದರೂ ಕುಡಿಯುವ ನೀರಿಲ್ಲ. ಪಂಪಾ ಸರೋವರದ ಹೂಳು ಎತ್ತಿ ಬಯಲು ಪ್ರದೇಶದಲ್ಲಿ ಹಾಕಿರುವುದರಿಂದ ಗಿಡ  ಗಂಟಿ ಬೆಳೆದು ಬಯಲು ಬಹಿರ್ದೆಸೆಗೆ
ಬಳಕೆಯಾಗುತ್ತಿದೆ. ಮಳೆ ಬಂದರೆ ನಿಲ್ಲಲು ಜಾಗವಿಲ್ಲದೆ ಗಿಡದ ಬುಡದಲ್ಲಿ ಅಥವಾ ಗುಡ್ಡದ ಕಲ್ಲಿನ ಕೆಳಗೆ ನಿಲ್ಲಬೇಕಾಗಿದೆ. ಅಡುಗೆ ಸಿದ್ಧತೆ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ದೇವಾಲಯ ಕಮೀಟಿ, ತಾಲೂಕು ಆಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವಿಫಲವಾಗಿವೆ.

Advertisement

ಸುತ್ತಲಿನ ಐತಿಹಾಸಿಕ ಸ್ಥಳ ತೋರಿಸಲು ನೂರಾರು ಪ್ರವಾಸಿ ಗೈಡ್‌ಗಳು, ಆಟೋ ಚಾಲಕರು ಇದ್ದಾರೆ. ಆದರೆ ಇವರಿಗೂ ಸೂಕ್ತ
ಸವಲತ್ತು ಕಲ್ಪಿಸಿಲ್ಲ. ವಿಜಯನಗರದ ಮೂಲ ರಾಜಧಾನಿ ಆನೆಗೊಂದಿ, ನವ ವೃಂದಾವನಗಡ್ಡಿ, ಚಂಚಲಕೋಟಿ, ವಾಲೀ ಕಿಲ್ಲಾ ಆದಿಶಕ್ತಿ ದೇಗುಲ, ಶ್ರೀಕೃಷ್ಣ ದೇವರಾಯನ ಸಮಾಧಿ, ಕಿಷ್ಕಿಂಧಾ ಅಂಜನಾದ್ರಿ, ಪಂಪಾಪತಿ ಬಂಡೆ ಮೇಲಿನ ಪುರಾತನ ಕಾಲದ ಪಂಪಾಪತಿ ಬೃಹತ್‌ ಲಿಂಗ, ಹನುಮನಹಳ್ಳಿ ಹತ್ತಿರದ ಋಷಿ ಮುಖ ಪರ್ವತ ಸುಗ್ರೀವನ ಗುಹೆ, ವಾಲೀ ಭಂಡಾರ, ಜಂಗ್ಲಿ ರಂಗಾಪೂರ ಪ್ರಕೃತಿ ಸೌಂದರ್ಯದ ಬೆಟ್ಟಗುಡ್ಡ, ಗುಹಾಂತರ ಚಿತ್ರ, ಹಿರೇಬೆಣಕಲ್‌ ಮೋರ್ಯರ ಬೆಟ್ಟದ ಶಿಲಾಯುಗದ ಮನೆ,
ವಿರೂಪಾಪೂರಗಡ್ಡಿಯ ಸೂರ್ಯನಾರಾಯಣ ದೇವಾಲಯ, ರಾಮನ ಬೀಳು, ಶಿಲಾರೋಹಣದ ಪರ್ವತ ಬಂಡೆಗಳ ಸ್ಥಳ, ಸಾಣಾಪೂರ ವಾಟರ್‌ ಫಾಲ್ಸ್‌, ಸಾಣಾಪೂರ ಬಾಲಾಂಜನೇಯನ ಬೆಟ್ಟಕ್ಕೂ ಪ್ರವಾಸೋದ್ಯಮ ಇಲಾಖೆ ನಾಮಫಲಕ ಹಾಕಿಲ್ಲ. ಇದರಿಂದ ಪ್ರವಾಸಿಗರು ಮಾಹಿತಿ ಕೊರತೆಯಿಂದ ಸಮಸ್ಯೆ ಎದುರಿಸುವಂತಾಗಿದೆ.

ಮೂಲಸೌಕರ್ಯ ಕಲ್ಪಿಸಲು ಜನಪ್ರತಿನಿಧಿ ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಕರಾವಳಿ ಸೇರಿದಂತೆ ಮೈಸೂರು ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿ ಮಾದರಿಯಲ್ಲಿ ಸರಕಾರ ಆನೆಗೊಂದಿ-ಕಿಷ್ಕಿಂಧಾ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮುಂದಾಗಬೇಕು.
ಮಂಜುನಾಥ ಕಂದಾರಿ, ಆಟೊ ಚಾಲಕ

ದೇಶದ ನಾಲ್ಕು ಪವಿತ್ರ ಚಾರಧಾಮ್‌ದಲ್ಲಿ ಪಂಪಾ ಸರೋವರ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರವೂ ಒಂದಾಗಿದೆ. ಇಲ್ಲಿ ಕುಡಿವ ನೀರು, ಶೌಚಾಲಯ ಹಾಗೂ ಅಡುಗೆ ಮಾಡಿಕೊಳ್ಳಲು ನೆರಳಿಲ್ಲ. ಬಯಲು ಬಹಿರ್ದೆಸೆಗೆ ಹೋಗಬೇಕಾಗಿದೆ. ಸರಕಾರ ಕೂಡಲೇ
ಮೂಲಸೌಕರ್ಯ ಕಲ್ಪಿಸಬೇಕು.
ರಾಮಲಾಲ್‌ ಉತ್ತರ ಪ್ರದೇಶದ ಪ್ರವಾಸಿಗ

■ ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next