ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಚರ್ಚೆಯಾಗುತ್ತಿರುವ ಭಾಷಾ ವಿಚಾರ, ಸಾಹಿತಿಗಳು ಮತ್ತು ಚಿಂತಕರ ಹತ್ಯೆ, ಕನ್ನಡಪರ ಹೋರಾಟಗಳ ದಿಕ್ಕು -ದೆಸೆ ಇಂಥ ಪ್ರಸ್ತುತ ಗಂಭೀರ ವಿಷಯಗಳನ್ನು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಹೇಳಿರುವ ಚಿತ್ರ “ಪಂಪ’.
ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಹೋರಾಡುವ ಪ್ರೊ. ಪಂಚಳ್ಳಿ ಪರಶಿವಮೂರ್ತಿ (ಪಂಪ) ಎಂಬ ಪಾತ್ರದ ಮೂಲಕ ಆರಂಭವಾಗುವ ಸಿನಿಮಾದ ಕಥೆ, ನಂತರ ಭಾಷಾ ಹೋರಾಟ, ಅದರ ಹಿಂದಿನ ರಾಜಕೀಯ, ಎಜುಕೇಷನ್ ಮಾμಯಾ, ಸರ್ಕಾರದ ಧೋರಣೆ ಹೀಗೆ ಹತ್ತಾರು ವಿಷಯಗಳನ್ನು ಚರ್ಚಿಸುತ್ತಾ ಸಾಗುತ್ತದೆ. ಅಂತಿಮವಾಗಿ ಇವೆಲ್ಲದಕ್ಕೂ ಮೂಲ ಕಾರಣವೇನು? ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ಮುಂದೆ ಬಿಟ್ಟು “ಪಂಪ’ನ ಕಥೆಗೆ ತೆರೆ ಬೀಳುತ್ತದೆ.
ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಸೆಂಟಿಮೆಂಟ್ ಮತ್ತು ಎಮೋಶನಲ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ದ ಹಿರಿಯ ನಿರ್ದೇಶಕ ಎಸ್. ಮಹೇಂದರ್, ಮೊದಲ ಬಾರಿಗೆ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥೆಯನ್ನು ತೆರೆಮೇಲೆ ಹೇಳಿದ್ದಾರೆ.
ಸಾಮಾನ್ಯವಾಗಿ ಸಸ್ಪೆನ್ಸ್ ಮತ್ತು ಕ್ರೈಂ-ಥ್ರಿಲ್ಲರ್ ಸಿನಿಮಾಗಳಲ್ಲಿ ಚಿತ್ರಕಥೆ, ನಿರೂಪಣೆ ಕೊಂಚ ವೇಗವಾಗಿರುತ್ತದೆ. ಆದರೆ “ಪಂಪ’ನಲ್ಲಿ ಇಂಥದ್ದೊಂದು ವೇಗವನ್ನು ನಿರೀಕ್ಷಿಸುವಂತಿಲಲ್ಲದಿದ್ದರೂ, ಕಥಾಹಂದರ ನಿಧಾನವಾಗಿ ಮನಸ್ಸಿನೊಳಗೆ ಇಳಿಯುವಂತಿದೆ. ಸಾಮಾನ್ಯವಾಗಿ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳಲ್ಲಿ ಮೂಲ ಕ್ರೈಂ ಕಥಾವಸ್ತು ಅಥವಾ ಘಟನೆಗೆ ಕ್ಲೈಮ್ಯಾಕ್ಸ್‌ನಲ್ಲಿ ತಾರ್ಕಿಕ ಅಂತ್ಯ ಸಿಕ್ಕಿ ಸಿನಿಮಾ ಕೊನೆಯಾಗುತ್ತದೆ. ಪ್ರೇಕ್ಷಕರು ನಿರಾಳರಾಗಿ ಥಿಯೇಟರ್ ನಿಂದ ಹೊರಬರುತ್ತಾರೆ. ಆದರೆ “ಪಂಪ’ ಇದಕ್ಕೆ ಅಪವಾದವೆಂಬಂತಿದೆ! “ಪಂಪ’ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾವಾದರೂ, ಸಿದ್ಧಸೂತ್ರದಿಂದ ಹೊರತಾಗಿ ತೆರೆಮೇಲೆ ಬಂದಿದೆ. ಹೀಗಾಗಿ, ಥಿಯೇಟರ್‌ನಿಂದ ಹೊರಗೆ ಬಂದಮೇಲೂ ಒಂದಷ್ಟು ವಿಚಾರಗಳು, ನೋಡುಗರನ್ನು ಕೆಲಹೊತ್ತು ಕಾಡುತ್ತವೆ.
ಇನ್ನು “ಪಂಪ’ನ ಪಾತ್ರಧಾರಿಯಾಗಿ ಕೀರ್ತಿ ಭಾನು, ಕನ್ನಡ ಅಭಿಮಾನಿಯಾಗಿ ಸಂಗೀತಾ ಶೃಂಗೇರಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉಳಿದಂತೆ ಅರವಿಂದ ರಾವ್, ಆದಿತ್ಯ ಶೆಟ್ಟಿ, ರಾಘವ್ ನಾಯಕ್, ರವಿಭಟ್ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ, ಕಲರಿಂಗ್ ಗುಣಮಟ್ಟದಲ್ಲಿದೆ. ಪ್ರಸ್ತುತ ಚರ್ಚೆಯಲ್ಲಿರುವ ಕನ್ನಡ ವಿಚಾರ, ಪಾತ್ರ ಪೋಷಣೆ, ಕಣ್ಣಿಗೆ ಕಟ್ಟುವಂಥ ಸುಂದರ ಲೊಕೇಶನ್ಸ್, ಥಿಯೇಟರ್ ಹೊರಗೂ ಗುನುಗುವಂಥ ಒಂದೆರಡು ಹಾಡುಗಳು, ಸಂಭಾಷಣೆ ಸಿನಿಮಾಕ್ಕೆ ಪ್ಲಸ್ ಆಗಿರುವ ಪ್ರಮುಖ ಅಂಶಗಳು ಎನ್ನಬಹುದು
ಜಿ.ಎಸ್.ಕಾರ್ತಿಕ ಸುಧನ್