Advertisement

ಪಾಂಬೂರು ಮಾನಸ ಪುನರ್ವಸತಿ ಕೇಂದ್ರ:  ರಜತ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ

03:54 PM Dec 15, 2021 | Team Udayavani |

ಶಿರ್ವ: ಬಂಟಕಲ್ಲು ಸಮೀಪದ ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ ವರ್ಷದ ಕಾರ್ಯಕ್ರಮಗಳಿಗೆ ಡಿ. 15 ರಂದು ಮಾನಸ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

Advertisement

ರಜತ ಮಹೋತ್ಸವ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶದ ಆಧ್ಯಾತ್ಮಿಕ ನಿರ್ದೇಶಕ ವಂ| ಜೆ.ಬಿ. ಸಲ್ದಾನಾ ಆಶೀರ್ವಚನ ನೀಡಿ, ಸಮಾಜದ ಪರಿಧಿಯಲ್ಲಿ ಜೀವಿಸುವ ವಿಶೇಷ ಚೇತನ ಮಕ್ಕಳ ಸೇವೆ ದೇವರ ಸೇವೆಯಿದ್ದಂತೆ. ಅವರ ಬಗ್ಗೆ ಕಾಳಜಿ ವಹಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನದ ಕುರುಹು ಮಾನಸ ಪುನರ್ವಸತಿ ಕೇಂದ್ರದಲ್ಲಿ ದೊರೆಯುತ್ತದೆ. ವಿಶೇಷ ಪ್ರತಿಭೆಗಳಿರುವ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ವ್ಯಕ್ತಿತ್ವ ರೂಪಿಸಿ ಅವರ ಸರ್ವತೋಮುಖ ಬೆಳವಣಿಗೆಯಲ್ಲಿ ಕಪ್ಪು ಚುಕ್ಕೆಯಿಲ್ಲದೆ ವಿಶೇಷ ಗಮನಹರಿಸಿಕೊಂಡು ಬಂದಿರುವ ಸಂಸ್ಥೆಯ ಸಮಾಜಮುಖೀ ಸೇವೆಗೆ ದೇವರ ಅನುಗ್ರಹವಿರಲಿ ಎಂದು ಹೇಳಿದರು.

ರಜತ ಮಹೋತ್ಸವ ವರ್ಷದ ಲೋಗೋ ಬಿಡುಗಡೆ ಮಾಡಿದ ಆಧ್ಯಾತ್ಮಿಕ ನಿರ್ದೇಶಕ ವಂ| ಫರ್ಡಿನಾಂಡ್‌ ಗೋನ್ಸಾಲ್ವೀಸ್‌ ಮಾತನಾಡಿ ಮಾನಸ ಸಂಸ್ಥೆಯಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಸಮಾಜದ ಎಲ್ಲಾ ಸಮುದಾಯದ ಜನರಿಗೆ ಅವಕಾಶ ನೀಡಿ ವಿಶೇಷ ಮಕ್ಕಳ ಶಿಕ್ಷಣ, ಆರೈಕೆ, ಸೇವೆ ಮಾಡಲಾಗುತ್ತಿದ್ದು, ದೇವರು ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವಂತಾಗಲಿ ಎಂದರು.

ಸಾಹಿತ್ಯಕ್ಕೆ ಲಭಿಸಿದ ನಗದು ಪುರಸ್ಕಾರವನ್ನು ಸೋಲಾರ್‌ದೀಪ ಅಳವಡಿಸಲು ಮಾನಸ ಸಂಸ್ಥೆಗೆ ದೇಣಿಗೆಯಾಗಿ ನೀಡಿ 3 ಸೋಲಾರ್‌ ದೀಪವನ್ನು ಉದ್ಘಾಟಿಸಿದ ಸಾಹಿತಿ ಮಿತಾಶಾ ರಿಯಾ ರೊಡ್ರಿಗಸ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಎಲ್ರಾಯ್‌ ಕಿರಣ್‌ ಕ್ರಾಸ್ತಾ ರಜತ ಮಹೋತ್ಸವ ಕಾರ್ಯಕ್ರಮಗಳ ಮಾಹಿತಿ ನೀಡಿದರು.

Advertisement

ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ನ ಅಧ್ಯಕ್ಷ ಸ್ಟಾನಿ ಲೋಬೋ, ಕೆಥೋಲಿಕ್‌ ಸಭಾ ಉಡುಪಿ ಪ್ರದೇಶ್‌ನ ಅಧ್ಯಕ್ಷೆ ಮೇರಿ ಡಿಸೋಜಾ,ಮಾನಸ ಸಂಸ್ಥೆಯ ಕಾರ್ಯದರ್ಶಿ ಜೋಸೆಫ್‌ ನೊರೊನ್ಹಾ, ವೇದಿಕೆಯಲ್ಲಿದ್ದರು. ಡಾ|ಜೆರಾಲ್ಡ್‌ ಪಿಂಟೊ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಕೆಥೋಲಿಕ್‌ ಸಭಾ ಉಡುಪಿ ಮತ್ತು ಮಂಗಳೂರು ಪ್ರದೇಶ್‌ನ ಪದಾಧಿಕಾರಿಗಳು, ಶಾಲೆಯ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ಹೆತ್ತವರು,ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮೆನೇಜಸ್‌ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next