Advertisement
ಪಾಲ್ತಾಡಿ ಗ್ರಾಮದ ನಾಡೋಳಿ, ಜಾಣಮೂಲೆಯಲ್ಲಿ ಹೊಳೆಯಲ್ಲಿನ ಅಣೆಕಟ್ಟಿಗೆ ಹಲಗೆ ಹಾಕಲಾಗಿದೆ. ಪ್ರಸ್ತುತ ಬೋರ್‌ವೆಲ್ 700 ಅಡಿ ಕೊರೆದರೂ ನೀರು ಸಿಗದ ಈ ಕಾಲದಲ್ಲಿ ಕಿಂಡಿ ಅಣೆಕಟ್ಟಿನ ಮೂಲಕ ನೀರಿಂಗಿಸುವ ಕಾರ್ಯವನ್ನು ರೈತರೇ ಮಾಡಿರುವುದು ಶ್ಲಾಘನೀಯ. ಈ ಕಿಂಡಿ ಅಣೆಕಟ್ಟನ್ನು ಜಲಸಂಪನ್ಮೂಲ ಇಲಾಖೆ ನಿರ್ಮಿಸಿದೆ. ಆದರೆ ಹಲಗೆಯನ್ನು ಅಳವಡಿಸಿರಲಿಲ್ಲ.
ಪಾಲ್ತಾಡಿ ಗ್ರಾಮದ ಮಂಜುನಾಥನಗರದ ನಾಡೋಳಿಯಲ್ಲಿ ಹರಿಯುವ ಗೌರಿ ಹೊಳೆಗೆ ನಿರ್ಮಿಸಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸುವ ಮೂಲಕ ಸುತ್ತಲಿನ 30ಕ್ಕೂ ಹೆಚ್ಚು ಕೃಷಿಕರ ತೋಟಗಳಿಗೆ ಯಥೇಚ್ಛ ನೀರು ಸಿಗುತ್ತಲಿದೆ. ಅಡಿಕೆ ಕೃಷಿಕರೇ ಇಲ್ಲಿ ಹೆಚ್ಚಿದ್ದಾರೆ. ಬರದಿಂದ ಕೃಷಿಯ ರಕ್ಷಣೆಯಾದಂತಾಗಿದೆ. ಬಿರುಬೇಸಗೆಯಲ್ಲೂ ತೋಟ ಒಣಗುವ ಸಮಸ್ಯೆ ಇಲ್ಲಿ ದೂರವಾದಂತಾಗಿದೆ. ಕೃಷಿಕರಿಂದಲೇ ನಿರ್ವಹಣೆ
ರಮೇಶ್ ರಾವ್ ಹಾಗೂ ಸತೀಶ್ ಬಂಬಿಲದೋಳ ನೇತೃತ್ವದಲ್ಲಿ ಕೃಷಿಕರೇ ಹಲಗೆ ಅಳವಡಿಸಿದ್ದಾರೆ. ರೋಹಿತ್ ರೈ, ಸಂಜೀವ ರೈ ಕುಂಜಾಡಿ, ಬೆಳಿಯಪ್ಪ ಗೌಡ, ಹನೀಫ್, ರಝಾಕ್, ಸೋಮಪ್ಪ ಗೌಡ ಜಾಣಮೂಲೆ, ಚಂದ್ರಶೇಖರ ಗೌಡ ಜಾಣಮೂಲೆ, ಜಿನ್ನಪ್ಪ ಪೂಜಾರಿ ಅವರು ಆರ್ಥಿಕ ಸಹಕಾರ ನೀಡಿದ್ದಾರೆ. ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಕೆಗೆ ಸುಮಾರು 16 ಸಾವಿರದಿಂದ 20 ಸಾವಿರ ರೂ. ವ್ಯಯಿಸಲಾಗಿದೆ. ಕೃಷಿಕರೇ ಕಿಂಡಿ ಅಣೆಕಟ್ಟಗಳ ನಿರ್ವಹಣೆಯನ್ನು ಮಾಡುತ್ತಲಿದ್ದಾರೆ.
Related Articles
ಹಲಗೆ ಹಾಕಿರುವ ಕಾರಣ ಅಣೆಕಟ್ಟಿನಲ್ಲಿ ಎಪ್ರಿಲ್, ಮೇ ವರೆಗೂ ನೀರು ಶೇಖರಣೆಗೊಳ್ಳುತ್ತದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಸುತ್ತಮುತ್ತಲಿನ ಕೆರೆ, ಬಾವಿಗಳಲ್ಲೂ ನೀರಿನ ಮಟ್ಟ ಏರಿಕೆ ಕಂಡುಬಂದಿದೆ. ಅಣೆಕಟ್ಟಿನಲ್ಲಿ 2 ಕಿ.ಮೀ. ಗೂ ಹೆಚ್ಚು ಉದ್ದದಲ್ಲಿ 40 ಅಡಿ ಅಗಲವಾಗಿ 9 ಅಡಿ ನೀರು ಶೇಖರಣೆಯಾಗಿದೆ. ಸುಮಾರು 10 ಅಡಿ ನೀರು ನಿಲ್ಲುವ ಸಾಮರ್ಥ್ಯ ಇಲ್ಲಿದೆ. ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ. ರಮೇಶ್ ಅವರ ವಿಶೇಷ ಮುತುವರ್ಜಿಯಿಂದ 10 ವರ್ಷಗಳ ಹಿಂದೆ ಜಲಸಂಪನ್ಮೂಲ ಇಲಾಖೆಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಅಣೆಕಟ್ಟು ನಿರ್ಮಾಣಗೊಂಡಿತ್ತು.
Advertisement
ಇಲಾಖೆ ಗಮನಹರಿಸಬೇಕುಅಣೆಕಟ್ಟಿನ ಬದಿಯಲ್ಲಿನ ಕಾಂಕ್ರೀಟ್ ಕಿತ್ತು ಹೋಗಿ ನೀರು ಸೋರಿಕೆಯಾಗುತ್ತಿತ್ತು. ಇದರ ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ನಡೆಸಬೇಕಿದೆ. ಜಲ ಸಂರಕ್ಷಣೆಯಲ್ಲಿ ಬಂಟ್ವಾಳದ ಇಡ್ಕಿದು ಗ್ರಾಮದ ಅನಂತರದ ಸ್ಥಾನವನ್ನು ಪುತ್ತೂರಿನ ಪಾಲ್ತಾಡಿ ಗ್ರಾಮ ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಹಲವೆಡೆ ಸಣ್ಣ ಸಣ್ಣ ತೊರೆಗಳಿಗೂ ಮಣ್ಣು ಹಾಗೂ ಅಡಿಕೆ ಮರದ ಹಲಗೆಯನ್ನು ಹಾಕಿ ರೈತರೇ ತಾತ್ಕಾಲಿಕ ಕಟ್ಟಗಳನ್ನು ರಚಿಸಿದ್ದಾರೆ. ಜಲಕ್ಷಾಮಕ್ಕೆ ತಡೆ
ಮುಂದೆ ತಲೆದೋರಬಹುದಾದ ಜಲಕ್ಷಾಮವನ್ನು ಕಿಂಡಿ ಅಣೆಕಟ್ಟುಗಳಿಂದ ತಡೆಯಬಹುದು. ಕೃಷಿಕರು ಈಗ ಪಂಪುಗಳಿಗೆ ಆಟೋಸ್ಟಾರ್ಟರ್ ಅಳವಡಿಸಿಕೊಂಡಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ನೀರು ವ್ಯಯವಾಗುತ್ತಿದೆ. ಇದನ್ನು ತಡೆಹಿಡಿಯಬೇಕಾಗಿದೆ. ಹೊಳೆಗಳಲ್ಲಿ ಪ್ರತೀ 2 ಕಿ.ಮೀ. ಗೆ ಒಂದರಂತೆ ಕಿಂಡಿ ಅಣೆಕಟ್ಟು ನಿರ್ಮಿಸುವುದು ಅವಶ್ಯ.
-ಬಿ.ಕೆ. ರಮೇಶ್, ನಿರ್ದೇಶಕರು
ಐ.ಸಿ.ಎ.ಆರ್., ಹೊಸದಿಲ್ಲಿ ಪ್ರವೀಣ್ ಚೆನ್ನಾವರ