Advertisement

Udupi ಬೀದಿಗಳಲ್ಲಿ ತಾಳೆ ಬೊಂಡ ವ್ಯಾಪಾರ ಜೋರು

02:51 PM Dec 13, 2024 | Team Udayavani |

ಉಡುಪಿ: ಇದೀಗ ಮಳೆಗಾಲ ಮುಗಿದು ಬೆಳಗ್ಗೆ ಚಳಿಯ ವಾತಾವರಣ ಹಾಗೂ ಮಧ್ಯಾಹ್ನದ ಅನಂತರದಲ್ಲಿ ಬೇಸಗೆಯ ಅನುಭವ ಸಿಗುತ್ತಿರುವ ಉಡುಪಿ ಬೀದಿಗಳಲ್ಲಿ ತಾಳೆಬೊಂಡ (ಹಣೆಬೊಂಡ/ಹಣೆಗಣ್ಣು) ಮಾರಾಟ ಶುರುವಾಗಿದೆ.

Advertisement

ಬೇಸಗೆಯಲ್ಲಿ ಕರಾವಳಿಯಲ್ಲಿ ತಂಪುಪಾನೀಯಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಹೊರ ಜಿಲ್ಲೆ, ಹೊರ ರಾಜ್ಯ ದಿಂದಲೂ ಎಳನೀರು ಪೂರೈಕೆಯಾಗುತ್ತದೆ. ಬೇಸಗೆಗೆ ತಕ್ಕುದಾದ ಕೆಲವು ಹಣ್ಣುಗಳ ಮಾರಾಟವೂ ನಡೆಯು ತ್ತದೆ. ಇದೀಗ ಮಳೆಗಾಲ ಹಾಗೂ ಬೇಸಗ ಕಾಲದ ಮಧ್ಯದಲ್ಲಿ ತಾಳೆಬೊಂಡದ ವ್ಯಾಪಾರ ಜೋರಾಗಿದೆ.

ಒಂದೇ ದಿನ ಇಡಲು ಸಾಧ್ಯ
ತಾಳೆ ಬೊಂಡವನ್ನು ಮರದಿಂದ ತೆಗೆದ ಒಂದು ಅಥವಾ ಎರಡು ದಿನದಲ್ಲಿ ಮಾರಾಟ ಮಾಡಬೇಕು. ಇಲ್ಲವಾದರೆ ತಾಳೆಬೊಂಡದ ಒಳಗೆ ಕಣ್ಣು ಗಟ್ಟಿಯಾಗಿ ಬಿಡುತ್ತದೆ. ಒಮ್ಮೆ ಗಟ್ಟಿಯಾದರೆ ಅದು ತಿನ್ನಲು ಅಷ್ಟು ಹಿತವಾಗುವುದಿಲ್ಲ. ಎಳತು ಇದ್ದಾಗಲೇ ತಿನ್ನಬೇಕು. ಹೀಗಾಗಿ ಅಗತ್ಯಕ್ಕಿಂತ ಹೆಚ್ಚು ಕೊಯ್ದುತಂದು ಮಾರಾಟ ಮಾಡಲು ಭಯವಾಗುತ್ತದೆ. ವಾರದಿಂದ ವ್ಯಾಪಾರ ಚುರುಕುಗೊಂಡಿದೆ ಎನ್ನುತ್ತಾರೆ ತಾಳೆಬೊಂಡದ ವ್ಯಾಪಾರಿ ಕಿರಣ್‌.

ಎಲ್ಲೆಲ್ಲಿ ?
ಪ್ರಮುಖವಾಗಿ ಉಡುಪಿ ನಗರದ ಸಿಟಿ ಬಸ್‌, ಸರ್ವೀಸ್‌ ಬಸ್‌ ನಿಲ್ದಾಣ, ಬನ್ನಂಜೆ-ಬ್ರಹ್ಮಗಿರಿ ರಸ್ತೆಯ ಬಿಸಿಎಂ ಹಾಸ್ಟೆಲ್‌ ಎದುರು, ಶ್ರೀ ಕೃಷ್ಣಮಠಕ್ಕೆ ಸಾಗುವ ಅಕ್ಕಪಕ್ಕದ ರಸ್ತೆಗಳಲ್ಲಿ, ಉಡುಪಿ-ಮಣಿಪಾಲ ರಸ್ತೆಯ ಲಕ್ಷ್ಮೀಂದ್ರ ನಗರ, ಮಣಿಪಾಲದ ಆರ್‌ಎಸ್‌ಬಿ ವೃತ್ತದ ಸಮೀಪ ಹೀಗೆ ಹಲವು ಕಡೆಗಳಲ್ಲಿ ತಾಳೆ ಬೊಂಡ ಮಾರಾಟ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೂ ಮಾರಾಟ ನಡೆಯುತ್ತಿದೆ.

10-15 ಕಡೆ ಮಾರಾಟ
ನಗರದ ಸುತ್ತಮುತ್ತ 10ರಿಂದ 15 ವ್ಯಾಪಾರಿಗಳು ತಾಳೆಬೊಂಡ ಮಾರಾಟ ಮಾಡುತ್ತಿದ್ದಾರೆ. ಇವರಲ್ಲಿ ಸ್ಥಳೀಯರೂ ಇದ್ದಾರೆ ಹಾಗೂ ಇಲ್ಲಿಯೇ ವಾಸ್ತವ್ಯವಿರುವ ಹೊರ ಜಿಲ್ಲೆಯ ವ್ಯಾಪಾರಿಗಳೂ ಇದ್ದಾರೆ. ಒಂದು ತಾಳೆಬೊಂಡದಲ್ಲಿ ಗರಿಷ್ಠ ಮೂರು, ಕನಿಷ್ಠ 1 ಕಣ್ಣು ಇರುತ್ತದೆ. ಒಂದು ಕಣ್ಣಿಗೆ 10 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ. ಕನಿಷ್ಠ ಮೂರು ಕಣ್ಣು ಖರೀದಿಸಬೇಕು.

Advertisement

ಬೇಡಿಕೆ ಚೆನ್ನಾಗಿದೆ
ಎರ್ಮಾಳಿನಿಂದ ತಾಳೆಬೊಂಡ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿದ್ದೇವೆ. ಸದ್ಯ ಬೇಡಿಕೆ ಚೆನ್ನಾಗಿದೆ. ನಾನು, ಮಗ ಹಾಗೂ ಹೆಂಡತಿ ಮೂವರು ಇದೇ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮದು ಮೂಲ ದಾವಣಗೆರೆ. ಈ ಋತುವಿನಲ್ಲಿ ಉಡುಪಿಗೆ ಬರುತ್ತೇವೆ. ಮುಗಿದ ಮೇಲೆ ಊರಿಗೆ ಹೋಗಿ ಕೃಷಿ ಮಾಡುತ್ತೇವೆ.
-ನಾಗ ನಾಯ್ಕ, ತಾಳೆಬೊಂಡ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next