ಗೌರಿಬಿದನೂರು: ಬೇಸಿಗೆ ಕಾಲದ ಅಪರೂಪದ ಅತಿಥಿಯಾಗಿರುವ ತಾಟಿನಿಂಗು (ತಾಳೆಹಣ್ಣು) ಈಗ ಎಲ್ಲಿಲ್ಲದ ಬೇಡಿಕೆ. ಶಾಲಾ, ಕಾಲೇಜು, ಸಾರ್ವಜನಿಕ ಬಸ್ ನಿಲ್ದಾಣ, ಚಿತ್ರಮಂದಿರ ಸೇರಿದಂತೆ ನಗರದ ಪ್ರದೇಶದಲ್ಲಿ, ಜನನಿಬಿಡ ರಸ್ತೆಗಳಲ್ಲಿ ಎತ್ತ ಕಣ್ಣಾಯಿಸಿ ನೋಡಿದರೂ ಈಗ ತಾಟಿ ಲಿಂಗು ಹಣ್ಣುಗಳದ್ದೇ ದರ್ಶನ.
ಬಿಸಿಲಿನ ತಾಪಕ್ಕೆ ತತ್ತರ: ತಮಿಳು ನಾಡು ಮೂಲದ ತಾಟಿನಿಂಗು ಎಳೆ ನೀರು ಜಾತಿಯದ್ದು ಬೇಸಿಗೆ ಬಂದರೆ ಸಾಕು ಗೌರಿಬಿದನೂರಿಗೆ ಖಾಯಂ ಅತಿಥಿ. ಸದ್ಯ ನಗರದಾದ್ಯಂತ ತಾಟಿನಿಂಗು ಭರ್ಜರಿ ಮಾರಾಟ ನಡೆಯುತ್ತಿದ್ದು, ಬಿಸಿಲಿನ ಪ್ರತಾಪಕ್ಕೆ ತತ್ತರಿಸುತ್ತಿರುವ ನಾಗರಿಕರು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಈಗ ತಾಟಿಲಿಂಗು ಹಣ್ಣುಗಳ ಮೊರೆ ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ: ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ತಾಟಿಲಿಂಗು ಹಣ್ಣಿಗೆ ಬಯಲುಸೀಮೆ ಜಿಲ್ಲೆಗಳಲ್ಲಿ ಹೆಚ್ಚು ಬೇಡಿಕೆ. ಬೇಸಿಗೆಯಲ್ಲಿ ಮಾತ್ರ ಜಿಲ್ಲೆಗೆ ಪ್ರವೇಶ ಮಾಡುವ ಈ ಹಣ್ಣು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬಲು ಅಚ್ಚುಮೆಚ್ಚು. ಸದ್ಯ ಜಿಲ್ಲಾ ಕೇಂದ್ರದ ಜನನಿಬಿಡ ರಸ್ತೆಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ಹಣ್ಣುಗಳ ಮಾರಾಟ ಭರದಿಂದ ಸಾಗಿದೆ.
ಎಳೆನೀರಿಗಿಂತ ಬೆಲೆ ಕಡಿಮೆ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಎಳನೀರು 25 ರಿಂದ 30 ರೂ. ದಾಟಿದೆ. ಇಂತಹ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅದರಲ್ಲೂ ಎಳನೀರುಗಿಂತ ಸುಲಭವಾಗಿ ತಾಟಿಲಿಂಗು ಬಡವರ ಕೈಗೆಟುಕುತ್ತಿದೆ. ಹಣ್ಣು ಸೇವಿಸಿದರೆ ದೇಹ ದಲ್ಲಿ ಉಷ್ಣಾಂಶ ಕಡಿಮೆ ಆಗುತ್ತದೆ, ಬಿಸಿಲಿನ ಸಂದರ್ಭ ದಲ್ಲಿ ಸೇವಿಸಿದರೆ ತಂಪು ನೀಡುತ್ತದೆ ಎನ್ನುತ್ತಾರೆ ನಗರದ ನಿವಾಸಿ ಮಲ್ಲೇನಹಳ್ಳಿ ಶ್ರೀನಿವಾಸ್. ತಾಟಿಲಿಂಗು ಹಣ್ಣುಗಳ ಸೇವನೆಯಿಂದ ಬೇಸಿಗೆ ಯಲ್ಲಿ ಮನುಷ್ಯನ ದೇಹಕ್ಕೆ ತಂಪು ಕೊಡುತ್ತದೆ. ಇದು ನಮ್ಮ ಜಿಲ್ಲೆಯೊಳಗೆ ಎಲ್ಲೂ ಬೆಳೆಯುವುದಿಲ್ಲ. ಬೇಸಿಗೆ ಅವಧಿಯಲ್ಲಿ ಮಾತ್ರ ನೆರೆಯ ಕೇರಳ, ತಮಿಳುನಾಡಿ ನಿಂದ ಬರುತ್ತವೆ. ನಾವು ಪ್ರತಿ ವರ್ಷ ಬೇಸಿಗೆಯಲ್ಲಿ ತಾಟಿಲಿಂಗು ಹಣ್ಣುಗಳನ್ನು ಸೇವಿಸುತ್ತೇವೆ ಎನ್ನುತ್ತಾರೆ ನಗರದ ನಿವಾಸಿ ಪ್ರಕಾಶ್ ಹೇಳುತ್ತಾರೆ.
ಕೈಗೆಟುಕುವ ಬೆಲೆ: ಬೇಸಿಗೆಯಲ್ಲಿ ತಾಟಿಲಿಂಗು ಹಣ್ಣು ಸೇವಿಸುವರ ಸಂಖ್ಯೆ ಹೆಚ್ಚಾದರೂ ಅದರ ಬೆಲೆ ಮಾತ್ರ ಸಾಮಾನ್ಯರ ಪಾಲಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. 10 ರಿಂದ 15 ರೂ.ಗೆ ಸುಭವಾಗಿ ಮಾರಾಟವಾಗುತ್ತಿವೆ. ಉತ್ತಮ ಗುಣಮಟ್ಟದ ಹಣ್ಣು 15 ರಿಂದ 20 ರೂ. ವರೆಗೂ ಮಾರಾಟಗೊಳ್ಳುತ್ತಿವೆ. ತಮಿಳುನಾಡಿನಿಂದ ಬಂದಿರುವ ವ್ಯಾಪಾರಸ್ಥರು ಹಣ್ಣುಗಳನ್ನು ತರಿಸಿಕೊಂಡು ತಳ್ಳುವ ಬಂಡಿಯಲ್ಲಿ ದಿನವಿಡೀ ನಗರ ಪ್ರದೇಶಗಳಲ್ಲಿ ಸುತ್ತಾಡಿ ಮಾರಾಟ ಮಾಡುವ ದೃಶ್ಯಗಳು ಕಂಡು ಬರುತ್ತಿವೆ.
ಪ್ರತಿ ವರ್ಷ ನಾವು ಬೇಸಿಗೆಯಲ್ಲಿ ತಾಟಿನಿಂಗು ಹಣ್ಣುಗಳನ್ನು ತಮಿಳು ನಾಡಿನಿಂದ ಇಲ್ಲಿಗೆ ತಂದು ಮಾರಾಟ ಮಾಡುತ್ತೇವೆ. ಈ ಭಾಗದಲ್ಲಿ ತಾಟಿನಿಂಗು ಹಣ್ಣು ಇಷ್ಟಪಡುವರ ಸಂಖ್ಯೆ ಹೆಚ್ಚಾಗಿದೆ. ದರ ಕೂಡ ಕಡಿಮೆ, ಒಂದು ಹಣ್ಣು 10 ರೂ.ಗೆ ಮಾರಾಟ ಮಾಡುತ್ತೇವೆ.
●ಧರ್ಮೇಶ್, ವ್ಯಾಪಾರಿ
-ವಿ.ಡಿ.ಗಣೇಶ್