Advertisement

ಪಲಿಮಾರು ಶ್ರೀಗೆ ಪುತ್ತೂರ ‘ಪೌರ ಸಮ್ಮಾನ’

10:39 AM Dec 24, 2017 | |

ಪುತ್ತೂರು:ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶನಿವಾರ ಸಂಜೆ ಶ್ರೀ ನಟರಾಜ ವೇದಿಕೆಯಲ್ಲಿ ‘ಪೌರ ಸಮ್ಮಾನ’ ನಡೆಯಿತು.

Advertisement

ಸಮ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಈಶ್ವರ ದೇವರು ವಿರಕ್ತ. ಆದರೆ ಎಷ್ಟು ಐಶ್ವರ್ಯವನ್ನೂ ನೀಡಬಲ್ಲ. ಮುತ್ತಿನ ಊರಿನ ಭಕ್ತರಿಂದ ಸಮರ್ಪಣೆಯಾದ ಸಮ್ಮಾನ ಅತ್ಯಂತ ಖುಷಿ ನೀಡಿದೆ ಎಂದರು. ಮಲ್ಲಿಗೆ ಪೇಟ ಸಮರ್ಪಣೆ ಪುತ್ತೂರಿನ ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತುಳಸಿ ಸಮರ್ಪಣೆಗೆ ವಿನಂತಿ
ಪರ್ಯಾಯ ಅವಧಿಯಲ್ಲಿ ಕೈಗೊಂಡಿರುವ ಹಲವು ಯೋಜನೆಗಳಿಗೆ ಪುತ್ತೂರಿನ ಜನತೆಯ ಸಹಕಾರ ಯಾಚಿಸಿದ ಶ್ರೀಗಳು, ಅತ್ಯಂತ ಪವಿತ್ರ ಹಾಗೂ ಆರೋಗ್ಯ ಪೂರ್ಣವಾದ ತುಳಸಿಯನ್ನು ಮನೆ ಮನೆಗಳಲ್ಲಿ ಬೆಳೆಯಬೇಕು. ಉಡುಪಿ ಕ್ಷೇತ್ರದಲ್ಲಿ ಶ್ರೀಕೃಷ್ಣನ ಪಾದಗಳಿಗೆ ಲಕ್ಷ ತುಳಸಿ ಅರ್ಚನೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ತುಳಸಿ ಬ್ಯಾಂಕ್‌ ಆರಂಭಿಸುವ ಯೋಜನೆ ಇದೆ. ಮುತ್ತಿನ ಊರು ಪುತ್ತೂರಿನಿಂದ ಭಕ್ತರು ತುಳಸಿಯನ್ನು ಸಮರ್ಪಿಸಬೇಕು ಎಂದು ವಿನಂತಿಸಿದರು. ಪರ್ಯಾಯ ಅವಧಿಯ ಸಹಸ್ರಕೋಟಿ ರಾಮ ನಾಮ ಯೋಜನೆ, ಅಖಂಡನಾಮ ಸಂಕೀರ್ತನೆ, ಚಿನ್ನರ ಸಂತರ್ಪಣೆ, ಶ್ರೀ ಕೃಷ್ಣ ಚಿನ್ನದ ಛಾವಣಿ ಅಳವಡಿಕೆಗೆ ಸಹಕಾರ ನೀಡುವಂತೆ ಭಕ್ತರಲ್ಲಿ ವಿನಂತಿಸಿದರು.

ಸನಾತನ ಸಂಸ್ಕೃತಿ ತಿಳಿಸಿ
ಅಭಿನಂದನ ನುಡಿಗಳನ್ನಾಡಿದ ಡಾ| ಶ್ರೀಶ ಕುಮಾರ್‌ ಮಾತನಾಡಿ, ಸನಾತನ ಸಂಸ್ಕೃತಿಯನ್ನು ಜನರ ಬಳಿಗೆ ತಲುಪಿಸಲು ಮಠದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಬಿಸಿಯೂಟದಂತಹ ಮಹತ್ವದ ಪರಿಕಲ್ಪನೆಯನ್ನು ಮೊದಲು ಆರಂಭಿಸಿದವರು ಪಲಿಮಾರು ಶ್ರೀಗಳು ಎಂದರು.

ಧರ್ಮ ರಕ್ಷೆಗಾಗಿ
ಸಮ್ಮಾನ ಪ್ರದಾನ ಮಾಡಿದ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಮಾತನಾಡಿ, ಧರ್ಮ ರಕ್ಷೆಯಾದರೆ ಸಮಾಜದ ಉಳಿವು ಎಂದು ತಿಳಿಸಬೇಕಾದರೆ ಗುರುಗಳು ಲೌಕಿಕದ ವಿಚಾರವನ್ನೂ ಅರಿತುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಪರಿವರ್ತನೆ ತರಲು ಯತಿವರ್ಯರು ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

Advertisement

ಪ್ರೊ| ವತ್ಸಲಾ ರಾಜ್ಞೆ ಅಭಿನಂದನಾ ಪತ್ರ ವಾಚಿಸಿದರು. ಪೌರ ಸಮ್ಮಾನ ಸಮಿತಿಯ ಅಧ್ಯಕ್ಷ ಬಲರಾಮ ಆಚಾರ್ಯ ದಂಪತಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಎನ್‌.ಕೆ. ಜಗನ್ನಿವಾಸ್‌ ರಾವ್‌, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಪಾಲ್ಗೊಂಡರು. ಅಭಿನಂದನ ಸಮಿತಿ ಕೋಶಾಧಿಕಾರಿ ಯು. ಪೂವಪ್ಪ ಉಪಸ್ಥಿತರಿದ್ದರು.

ಪೌರ ಸಮ್ಮಾನ ಸಮಿತಿ ಸಂಚಾಲಕ ಯು. ಲೋಕೇಶ್‌ ಹೆಗ್ಡೆ ಸ್ವಾಗತಿಸಿ, ಸಹ ಸಂಚಾಲಕ ವೇ| ಮೂ| ಹರೀಶ್‌ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯ ವಂದಿಸಿದರು. ಉಪಾಧ್ಯಕ್ಷ ರಾಜೇಶ್‌ ಬನ್ನೂರು ನಿರ್ವಹಿಸಿದರು. ಪೌರ ಸಮ್ಮಾನಕ್ಕೆ ಶ್ರೀಗಳನ್ನು ಪ್ರಧಾನ ಅಂಚೆ ಕಚೇರಿ ಬಳಿ ಯಿಂದ ಬ್ಯಾಂಡ್‌, ವಾದ್ಯ ಮೇಳಗಳು ಹಾಗೂ ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಶ್ರೀಗಳಿಗೆ ಹಾರಾರ್ಪಣೆ ಮಾಡಲಾಯಿತು.

ಮಾರ್ಗದರ್ಶನ ಬೇಕು
ಅಧ್ಯಕ್ಷತೆ ವಹಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಮಾತನಾಡಿ, ಶ್ರೀಗಳ ಪೌರ ಸಮ್ಮಾನದ ಅವಕಾಶ ನನ್ನ ಜೀವನದ ಮಹಾಭಾಗ್ಯ ಎಂದು ಹೇಳಿದರು. ರಾಜಕೀಯದವರೂ ತಪ್ಪಿ ನಡೆದರೆ ಎತ್ತಿ ತೋರಿಸಿ ಒಳ್ಳೆಯ ಕೆಲಸಕ್ಕೆ ಮಾರ್ಗದರ್ಶನವನ್ನು ನೀಡಬೇಕು ಎಂದು ವಿನಂತಿಸಿದ ಅವರು, ಸಮಾಜಕ್ಕೆ, ದೇಶಕ್ಕೆ ಕೊಡುಗೆಗಳನ್ನು ರೂಪಿಸುವ ಮಾರ್ಗದರ್ಶನ ಯತಿವರ್ಯರಿಂದ ಅತಿ ಅಗತ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next