Advertisement

ಪಳ್ಳಿ: ರಸ್ತೆ ಬದಿಯಲ್ಲೇ ನಡೆಯುವ ವಾರದ ಸಂತೆ

10:48 PM Jul 20, 2019 | Sriram |

ಪಳ್ಳಿ: ಇಲ್ಲಿ ನಡೆಯುವ ವಾರದ ಸಂತೆಗೆ ಸೂಕ್ತ ಮಾರುಕಟ್ಟೆ ಪ್ರಾಂಗಣವಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಪಳ್ಳಿ ಪಂಚಾಯತ್‌ ಬಳಿಯ ಪ್ರಾಂಗಣದಲ್ಲಿ ಸಂತೆ ನಡೆಯುತ್ತಿದ್ದು ಇಲ್ಲಿ ಜಾಗ ಸಾಲುತ್ತಿಲ್ಲ. ಇದರಿಂದ ಸಂತೆ ರಸ್ತೆ ಬದಿಗೂ ವಿಸ್ತರಿಸುವುದರಿಂದ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೂ ಸಮಸ್ಯೆ ತಂದಿದೆ.

Advertisement

2 ವರ್ಷಗಳ ಹಿಂದೆ ಸ್ಥಳೀಯರ ಬೇಡಿಕೆಯಂತೆ ಸಂತೆ ಪ್ರಾರಂಭಗೊಂಡಿದ್ದು, ಪ್ರತಿ ಬುಧವಾರ ನಡೆಯುತ್ತದೆ. ಸೂಕ್ತ ಮಾರುಕಟ್ಟೆ ಕಟ್ಟಡ ಇಲ್ಲದ್ದರಿಂದ ವ್ಯಾಪಾರಸ್ಥರು ಟಾರ್ಪಾಲ್‌ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಮಳೆಗಾಲದ ವೇಳೆ ಮಳೆಗೆ ತರಕಾರಿ ಹಾಗೂ ದಿನಸಿ ಸಾಮಗ್ರಿ ಒದ್ದೆಯಾಗಿ ವ್ಯಾಪಾರಸ್ಥರಿಗೆ ನಷ್ಟ ಉಂಟಾಗುತ್ತಿದೆ. ಅಲ್ಲದೆ ಮಳೆ ನೀರು ಮಾರುಕಟ್ಟೆಯ ಒಳಗೆ ಹರಿಯುವುದರಿಂದ ಪ್ರಾಂಗಣವು ಕೆಸರಿನಿಂದ ರಾಡಿಯಾಗಿ ಗ್ರಾಹಕರು ಬರಲೂ ತೊಂದರೆಯಾಗುತ್ತಿದೆ. ಪಳ್ಳಿ ವಾರದ ಸಂತೆಗೆ ಸುತ್ತಲಿನ ದಾದಬೆಟ್ಟು, ನಿಂಜೂರು, ಪಳ್ಳಿ, ಕುಂಟಾಡಿ, ರಂಗನಪಲ್ಕೆ ನಾಲ್ಕುಬೀದಿ ಗಳಿಂದ ಜನರು ಆಗಮಿಸುತ್ತಿದ್ದು, ದಿನೇ ದಿನೇ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ.

ಪಳ್ಳಿ ಪಂಚಾಯತ್‌ ಪ್ರಾಂಗಣದಲ್ಲಿದ್ದ ಹಳೆಯ ಅಂಗಡಿ ಕೋಣೆಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿ ಆ ಕಟ್ಟಡದಲ್ಲಿಯೇ ವಿಶಾಲ ಮಾರುಕಟ್ಟೆ ಹಾಗೂ ಅಂಗಡಿ ಕೋಣೆಗಳನ್ನು ನಿರ್ಮಿಸಿದಲ್ಲಿ ಪಂಚಾಯತ್‌ಗೆ ಆದಾಯವೂ ಹೆಚ್ಚುವುದರ ಜತೆ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಎಂಬುದು ಸ್ಥಳೀಯರ ಅಭಿಪ್ರಾಯ.

ಪ್ರಸ್ತಾವನೆ ಸಲ್ಲಿಕೆ
ಮಾರುಕಟ್ಟೆ ನಿರ್ಮಾಣ ಮಾಡುವುದರಿಂದ ಸ್ಥಳೀಯ ರೈತರು ಬೆಳೆದ ತರಕಾರಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುಕೂಲವಾಗುತ್ತದೆ. ಸ್ಥಳೀಯಾಡಳಿತದ ವತಿಯಿಂದ ಎ.ಪಿ.ಎಂ.ಸಿ ಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಮಂಜೂರಾದ ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
-ರಾಘವೇಂದ್ರ ಪ್ರಭು, ಪಿಡಿಒ ಪಳ್ಳಿ ಗ್ರಾ.ಪಂ.

ಆದಷ್ಟು ಬೇಗ ನಿರ್ಮಾಣಗೊಳ್ಳಲಿ
ಅಭಿವೃದ್ಧಿಗೊಳ್ಳುತ್ತಿರುವ ಪಳ್ಳಿ ಪೇಟೆಗೆ ಮಾರುಕಟ್ಟೆಯ ಪ್ರಾಂಗಣದ ಆವಶ್ಯಕತೆ ಇದ್ದು, ಆದಷ್ಟು ಬೇಗ ನಿರ್ಮಾಣಗೊಂಡಲ್ಲಿ ಸ್ಥಳೀಯರಿಗೆ ಉಪಯೋಗವಾಗುವುದು.
-ಗಣೇಶ್‌ ಕೈರಬೆಟ್ಟು,ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next