ಹೆಸರು ಅಪ್ಪಟ ದೇಶಿ; ಹುಡುಗಿ ಮಾತ್ರ ವಿದೇಶಿ. ಇದು ಪಲ್ಲವಿ ಶಾರದಾ ಕತೆ.
ಬಾಲಿವುಡ್‌ಗೆ ಬಂದು ಏಳು ವರ್ಷವಾಗಿದ್ದರೂ ಇನ್ನೂ ಅಪರಿಚಿತೆಯಾಗಿಯೇ ಉಳಿದಿದ್ದಾಳೆ. ಹೆಸರು ನೋಡಿದಾಗ ಯಾರಾದರೂ ಎಲ್ಲೋ ತಮಿಳುನಾಡು ಅಥವಾ ಕರ್ನಾಟಕದಿಂದ ಬಂದವಳೆಂದು ಭಾವಿಸಬಹುದು. ಆದರೆ ಪಲ್ಲವಿ ಶಾರದಾ ಆಸ್ಟ್ರೇಲಿಯದವಳು. ಹುಟ್ಟಿದ್ದು , ಬೆಳೆದದ್ದು ಓದಿದ್ದು ಎಲ್ಲ ಆಸ್ಟ್ರೇಲಿಯದ ಪರ್ತ್‌ನಲ್ಲಿ. ಯಾವ ಮೋಹನ ಮುರಳಿ ಕರೆಯಿತೋ ನಿನ್ನ ದೂರದ ತೀರಕೆ ಎಂಬಂತೆ ಅಗಾಧ ಪ್ರತಿಭಾವಂತೆಯಾಗಿದ್ದ ಪಲ್ಲವಿಯನ್ನು ಅದ್ಯಾವುದೋ ಮಾಯೆ ಬಾಲಿವುಡ್‌ಗೆ ಕರೆತಂದಿದೆ.
ಪಲ್ಲವಿಯ ತಂದೆ ಮತ್ತು ತಾಯಿ ಇಬ್ಬರೂ ಪಿಎಚ್‌ಡಿ ಪದವೀಧರರು. ಹೆತ್ತವರ ಶೈಕ್ಷಣಿಕ ಪ್ರತಿಭೆ ಪಲ್ಲವಿಗೆ ಬಳುವಳಿಯಾಗಿ ಬಂದಿತ್ತು. ಹೆತ್ತವರು ದಿಲ್ಲಿಯಿಂದ ಆಸ್ಟ್ರೇಲಿಯಕ್ಕೆ ವಲಸೆ ಹೋಗಿ ನೆಲೆಸಿದ ಕಾರಣ ಪಲ್ಲವಿ ಎನ್‌ಆರ್‌ಐ ಆದಳು. ಹೀಗೆ ಪ್ರೈಮರಿಯಿಂದಲೇ ಪಲ್ಲವಿ ಕ್ಲಾಸಿಗೆ ಫಸ್ಟ್. ಹೀಗಾಗಿ ಎಲ್‌ಎಲ್‌ಬಿ, ಮಾಸ್ ಮೀಡಿಯಾ, ಡಿಪ್ಲೊಮ ಇನ್ ಮೋಡರ್ನ್ ಲ್ಯಾಂಗ್ವೇಜ್ ಪದವಿ ಹೀಗೆ ಒಂದಷ್ಟು ಪದವಿಗಳನ್ನು ಅನಾಯಾಸವಾಗಿ ಗಳಿಸಿದಳು. ಬಾಲ್ಯದಿಂದಲೇ ಪಲ್ಲವಿಗೆ ಭಾರತ ಮತ್ತು ಭಾರತೀಯತೆಯತ್ತ ವಿಶೇಷ ಒಲವು. ಹೀಗಾಗಿ ಬಾಲ್ಯದಲ್ಲಿ ಭರತನಾಟ್ಯ ಕಲಿತು ನೈಪುಣ್ಯ ಸಾಧಿಸಿದಳು.
ಓದುವುದು ಮುಗಿದ ಬಳಿಕ ನಾಟಕ, ನೃತ್ಯ ಎಂದು ಅಲೆದಾಡಿದರೂ ಯಾವುದರಲ್ಲೂ ತೃಪ್ತಿ ಸಿಗಲಿಲ್ಲ. ಕೊಂಚ ಸಮಯ ಕಚೇರಿಯಲ್ಲಿ ಕುಳಿತು ನೌಕರಿ ಮಾಡಿದಳು. ಇದೂ ಬೋರಾದಾಗ ನೇರವಾಗಿ ಮುಂಬಯಿಗೆ ವಿಮಾನ ಏರಿದಳು. ಹೀಗೆ ಬಂದವಳಿಗೆ ಮೊದಲು ಸಿಕ್ಕಿದ್ದು ಮೈ ನೇಮ್ ಈಸ್ ಖಾನ್‌ನಲ್ಲಿ ಒಂದು ಚಿಕ್ಕ ಪಾತ್ರ. ಅದೇ ವರ್ಷ ದಸ್ ತೊಲ ಮತ್ತು ವಾಕ್‌ವೆà ಎಂಬೆರಡು ಚಿತ್ರಗಳಲ್ಲೂ ನಟಿಸಿದಳು. ಲವ್ ಬ್ರೇಕ್‌ಅಪ್ ಜಿಂದಗಿ, ಹಿರೋಯಿನ್, ಸೇವ್ ಯುವರ್ ಲೆಗ್ಸ್, ಬೇಶರಮ್, ಹವಾಯಿಜಾದ, ಲಯನ್ ಎಂದು ಅನಂತರ ಅನೇಕ ಚಿತ್ರಗಳಲ್ಲಿ ನಟಿಸಿದರೂ ಗುರುತಿಸುವಂತಹ ಪಾತ್ರಗಳು ಸಿಗಲಿಲ್ಲ. ಬೇಶರಮ್‌ನಲ್ಲಿ ಗಮನ ಸೆಳೆದರೂ ಚಿತ್ರ ಸೋತ ಕಾರಣ ವಿಶೇಷ ಲಾಭವಾಗಲಿಲ್ಲ. ಕತೆ ಭಿನ್ನವಾಗಿರಬೇಕು, ಪಾತ್ರ ಚಿಕ್ಕದಾದರೂ ಪರವಾಗಿಲ್ಲ ಅಭಿನಯಕ್ಕೆ ಅವಕಾಶ ಇರಬೇಕು ಎಂದೆಲ್ಲ ದೊಡ್ಡ ದೊಡ್ಡ ಕನಸುಗಳು ಇದ್ದ ಕಾರಣ ಪಲ್ಲವಿ ಆರಂಭದಲ್ಲಿಯೇ ಎಡವಿದಳು. ಚಿಕ್ಕಪುಟ್ಟ ಪಾತ್ರಗಳನ್ನು ಒಪ್ಪಿಕೊಂಡ ಕಾರಣ ಅವುಗಳಿಗೆ ಬ್ರಾಂಡ್ ಆದಳು. ಇದೀಗ ತಪ್ಪು ಅರಿವಾಗಿರುವ ಪಲ್ಲವಿ ಗುರುತಿಸುವಂತಹ ಪಾತ್ರವಾದರೆ ಮಾತ್ರ ನಟಿಸುತ್ತೇನೆ ಎನ್ನುತ್ತಿದ್ದಾಳೆ.
ಹಾಗೆಂದು ಇಷ್ಟರತನಕ ಆಯ್ದುಕೊಂಡ ಪಾತ್ರಗಳ ಬಗ್ಗೆ ಅವಳಿಗೆ ವಿಷಾದವಿಲ್ಲ. ನನಗೆ ನನ್ನ ಕನಸು ಮುಖ್ಯ. ಉಳಿದವರು ಏನೆನ್ನುತ್ತಾರೆ ಎನ್ನುವುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವುದು ಅವಳ ಖಚಿತ ನಿಲುವು. ಇದೀಗ ವಿದ್ಯಾಬಾಲನ್ ಮುಖ್ಯ ಭೂಮಿಕೆಯಲ್ಲಿರುವ ಬೇಗಮ್ ಜಾನ್‌ನಲ್ಲಿ ಪಲ್ಲವಿಗೂ ಮಹತ್ವದ ಪಾತ್ರವಿದೆ. ಎಪ್ರಿಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಅನಂತರವಾದರೂ ನನ್ನ ಪ್ರತಿಭೆ ಬಾಲಿವುಡ್‌ನವರ ಕಣ್ಣಿಗೆ ಬಿದ್ದೀತು ಎಂಬ ನಿರೀಕ್ಷೆಯಲ್ಲಿದ್ದಾಳೆ ಪಲ್ಲವಿ.