Advertisement
ಅ.3ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿಯಿತ್ತು, ದೇವರ ದರ್ಶನ ಹಾಗೂ ಪೂಜೆಯಲ್ಲಿ ಭಾಗಿಯಾಗಿ ಅನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತುಳುನಾಡಿನಿಂದ ಹೊರನಾಡ ಮುಂಬಯಿಗೆ ಬರಿಗೈ ಯಲ್ಲಿ ಬಂದ ಎಲ್ಲರೂ ಇಂದು ತಮ್ಮ ಪರಿಶ್ರಮದಿಂದ ಬೊಗಸೆ ತುಂಬಾ ಗಳಿಸಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನಾವು ನಂಬಿರುವ ದೇವರ ಬಗ್ಗೆ ಅಚಲ ಶ್ರದ್ಧೆ ಭಕ್ತಿಯಿರುವುದರಿಂದ ದೇವರು ನಮ್ಮನ್ನು ಕಾಪಾಡಿದ್ದಾನೆ. ಜೀವನದಲ್ಲಿ ಪ್ರಾಮಾಣಿಕ ಪರಿಶ್ರಮದ ಪ್ರಯತ್ನ ಮತ್ತು ದೇವರ ಬಗ್ಗೆ ಸದಾ ನಂಬಿಕೆ ಈ ಎರಡು ಸಮನ್ವಯಗಳಿದ್ದರೆ, ಯಶಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ಬಂಗಾರದ ಗೋಪುರವನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳ ಲಾಗಿದ್ದು, ಎಂದೆಂದಿಗೂ ಶಾಶ್ವತವಾಗಲಿರುವ ಬಂಗಾರದ ಗೋಪುರ ಕಾರ್ಯಕ್ಕೆ ಭಕ್ತಾಭಿಮಾನಿಗಳು ಎಲ್ಲ ರೀತಿಯಿಂದ ಸಹಕರಿಸಬೇಕು. ಅನ್ನಬ್ರಹ್ಮ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸುಮಾರು 750 ವರ್ಷಗಳ ಹಿಂದಿನಿಂದಲೂ ಅನ್ನದಾನ ನಡೆಯುತ್ತಿರುವುದು ಇದೊಂದು ದೊಡ್ಡ ಪವಾಡವೆಂದೆ ಹೇಳಬಹುದು. ಶ್ರೀಕ್ಷೇತ್ರದ ಮುಂದಿನ ಯೋಜನೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.
Related Articles
Advertisement
ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆ ಯಲ್ಲಿ ದೇವಸ್ಥಾನಕ್ಕೆ ಕರೆತರಲಾಯಿತು. ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಶ್ರೀಗಳಿಗೆ ತುಳಸಿ ಹಾರ ಹಾಕಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಶಾಲು ಹೊದೆಸಿ, ಬಂಟರ ಸಂಘದ ವತಿಯಿಂದ ಅವರ ಬಂಗಾರದ ಯೋಜನೆಗಾಗಿ ದೇಣಿಗೆಯನ್ನಿತ್ತು ಗೌರವಿಸಲಾಯಿತು.
ಸಂಘದ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ಹೆಗ್ಡೆ, ಸುನೀತಾ ಎನ್. ಹೆಗ್ಡೆ ದಂಪತಿ ಶ್ರೀ ಮಹಾವಿಷ್ಣು ದೇವಸ್ಥಾನದ ಹೆಸರಿನಲ್ಲಿ ಬಂಗಾರದ ಕೊಡುಗೆಯನ್ನು ಸ್ವಾಮೀಜಿ ಅವರಿಗೆ ಅರ್ಪಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದವರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಭಕ್ತರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು