Advertisement

ಘನ್ಸೋಲಿ ಮೂಕಾಂಬಿಕಾ ಮಂದಿರದಲ್ಲಿ ಪಲಿಮಾರು ಶ್ರೀ ಆಶೀರ್ವಚನ

04:31 PM Sep 26, 2017 | Team Udayavani |

ನವಿ ಮುಂಬಯಿ: ಶ್ರೀ ಕೃಷ್ಣ ಪರಮಾತ್ಮ ಸಹೋದರಿ ದುರ್ಗಾ ಮಾತೆಯನ್ನು ಭೇಟಿಯಾಗಲು ಮಥುರಾದಿಂದ ಗೋಕುಲಕ್ಕೆ ಬಂದಿದ್ದ. ಅದೇ ರೀತಿ ನಾನು ಇಂದು ಮೂಕಾಂಬಿಕ ಮಾತೆಯನ್ನು ಭೇಟಿಯಾಗಲು ಈ ನವರಾತ್ರಿ ಸಂದರ್ಭದಲ್ಲಿ ಘನ್ಸೋಲಿ ಕ್ಷೇತ್ರಕ್ಕೆ ಬಂದಿದ್ದೇನೆ. ಇಂದಿನ ಕಾಲದಲ್ಲಿ ಎಲ್ಲಿ ನೋಡಿದರೂ ಅತೀವೃಷ್ಠಿ, ಪ್ರಾಕೃತಿಕ ವಿಕೋಪ ಉಗ್ರವಾದ ನಡೆಯುತ್ತಾ ಇದೆ. ಏನೇ ಆದರೂ ನಮ್ಮ ದೇಶ ಏನೂ ಆಗಿಲ್ಲ ಎಂಬಂತಿದೆ. ಕಾರಣ ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು. ಇಂತಹ ದೇವಾಲಯಗಳಲ್ಲಿ ನಿರಂತರ ಧಾರ್ಮಿಕ ಕಾರ್ಯ, ಅನ್ನದಾನ ಇತ್ಯಾದಿ ನಡೆಯುತ್ತಾ ಇರುವುದರಿಂದಲೇ ನಾವೆಲ್ಲಾ ಸುಖೀಗಳಾಗಿದ್ದೇವೆ. ನಾವು ಏನೇ ವಸ್ತು ತಂದರೂ ಅದನ್ನು ಮೊದಲು ದೇವರಿಗೆ ಅರ್ಪಿಸುತ್ತೇವೆ. ಏಕೆಂದರೆ ನಮಗೆ ಅದನ್ನು ನೀಡಿದವರು ದೇವರೇ. ನಾವು ಮನೆಯಲ್ಲಿ ಒಬ್ಬರೇ ಪ್ರಾರ್ಥನೆ ಮಾಡುತ್ತೇವೆ. ಅದೆ ಈ ದೇವಾಲಯಗಳಲ್ಲಿ ಹತ್ತು ಮಂದಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತೇವೆ. ಇದರಿಂದ ಫಲ ಖಂಡಿತಾ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ನುಡಿದರು.

Advertisement

ಮುಂದಿಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದವರು ಮುಂಬಯಿ ಸಂಚಾರವನ್ನು ಕೈಗೊಂಡಿದ್ದು, ಸೆ. 22 ರಂದು ಶ್ರೀ ಕ್ಷೇತ್ರ ಘನ್ಸೋಲಿಯ ಶ್ರೀ ಮೂಕಾಂಬಿಕಾ ಮಂದಿರಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಳೆದ 16 ವರ್ಷಗಳಿಂದ ಮೂಕಾಂಬಿಕ ದೇವಾಲಯದಲ್ಲಿ ನಿರಂತರ ಪೂಜೆ, ಪುನಸ್ಕಾರಗಳ ಜತೆಗೆ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ದೇವಿ ಪ್ರಸನ್ನಳಾಗಿದ್ದಾಳೆ. ಇಲ್ಲಿ ಹೊಟ್ಟೆಗೆ ಅನ್ನದಾನ, ಮನಸ್ಸಿಗೆ ನೃತ್ಯ, ಭಜನೆ, ಸಂಗೀತ ಅದೇ ರೀತಿ ದೇವಿಯ ಸಾನಿಧ್ಯ ಈ ಮೂರು ಸಿಗುವ ಸ್ಥಾನ ಘನ್ಸೋಲಿ ಕ್ಷೇತ್ರವಾಗಿದೆ. ಇಲ್ಲಿ ಯಜಮಾನರು ಭಕ್ತಿಯಿಂದ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಚಕರು ಒಳ್ಳೆಯ ರೀತಿಯಿಂದ ಜಯಮಾನರೊಂದಿಗೆ ಹೊಂದಾಣಿಕೆಯಿಂದ ಪೂಜೆ, ಪುನಸ್ಕಾರ ಮಾಡುತ್ತಿರುವುದರಿಂದಲೇ ಈ ಕ್ಷೇತ್ರ ಇಷ್ಟು ಪ್ರಸಿದ್ಧಿಯನ್ನು ಪಡೆದಿದೆ. ದೇವರಿಗೆ ಚಿನ್ನ ಅಥವಾ ಇನ್ನಿತರ ಯಾವುದೇ ವಸ್ತುವಿನ ಅಗತ್ಯವಿಲ್ಲ. ದೇವರೇ ನಮಗೆ ನೀಡಿದ್ದನ್ನು ಅವರಿಗೆ ಅರ್ಪಿಸುವುದು ನಮ್ಮ ಕರ್ತವ್ಯ. ನಿಮಗೆಲ್ಲರಿಗೂ ದೇವರ ಅನುಗ್ರಹ ಸದಾಯಿರಲಿ ಎಂದರು.

ಶ್ರೀಗಳನ್ನು ದೇವಾಲಯದಲ್ಲಿ ಚೆಂಡೆ-ವಾದ್ಯದೊಂದಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಅವರು ದೇವಿಗೆ ಆರತಿ ಬೆಳಗಿಸಿದ ಆನಂತರ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು ಸ್ವಾಮೀಜಿಯವರನ್ನು ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದ ನಟನಪ್ರಿಯ ಅಕಾಡೆಮಿ ಆಫ್‌ ಡಾನ್ಸ್‌ ಆ್ಯಂಡ್‌ ಮ್ಯೂಸಿಕ್‌ನ ವೆಂಕಟೇಶ್ವರನ್‌ ಮತ್ತು ವಿದ್ಯಾ ದಂಪತಿಯನ್ನು ಶ್ರೀಗಳು ಗೌರವಿಸಿದರು. ಭಾಗವಹಿಸಿದ ಕಲಾವಿದರನ್ನು ಶ್ರೀಗಳು ಅಭಿನಂದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಓಂ ಶ್ರೀ ಕೃಷ್ಣ ಆಚಾರ್ಯ ಅವರು, ಜಗದೊಡೆಯ ಶ್ರೀ ಕೃಷ್ಣ ಅನಂತರೂಪದಲ್ಲಿರುವ ದೇವರು. ಶ್ರೀ ಕೃಷ್ಣ ಸಮುದ್ರದ ಮಧ್ಯೆ ಬಂಗಾರದ ಅರಮನೆ ನಿರ್ಮಿಸಿದವನು. ಅಂತಹ ವೈಭವದ ಅರಮನೆ ಬಿಟ್ಟು ಉಡುಪಿಗೆ ಬಂದು ನೆಲೆಸಿರುವುದು ನಮ್ಮೆಲ್ಲರ ಪುಣ್ಯ. ಇದು ನಮ್ಮ ಭಾಗ್ಯವೂ ಹೌದು. ದ್ವಾಪರ ಯುಗದಲ್ಲಿ ರುಕ್ಮಿಣಿಪೂಜೆ ಮಾಡಿದ ಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಮಧ್ವಾಚಾರ್ಯರು ಸ್ಥಾಪಿಸಿದ್ದಾರೆ. ಆ ಮೂರ್ತಿಗೆ ಅಷ್ಟಮಠದ ಸ್ವಾಮಿಗಳಿಗೆ ಮಾತ್ರ ಪೂಜೆ ಮಾಡುವ ಅವಕಾಶವನ್ನು ಮಧ್ವಾಚಾರ್ಯರು ನೀಡಿದ್ದಾರೆ. ಆ ಅಷ್ಟಮಠಗಳಲ್ಲಿ ಮೊದಲನೇ ಮಠವೇ ಪಲಿಮಾರು ಮಠ. ಮುಂದಿಯ ಪರ್ಯಾಯ ಚಕ್ರದ ಆರಂಭದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಜ. 18 ರಂದು ದ್ವಿತೀಯ ಬಾರಿಗೆ ಪರ್ಯಾಯ ಪೀಠವನ್ನು ಅಲಂಕರಿಸಲಿದ್ದಾರೆ. ಅವರ ಪರ್ಯಾಯ ಮಹೋತ್ಸವಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲು ಶ್ರೀಗಳು ಮುಂಬಯಿಗೆ ಆಗಮಿಸಿದ್ದಾರೆ. ಈ ಉತ್ಸವದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಅದರಲ್ಲಿ ಪ್ರಮುಖ ಯೋಜನೆಯೆಂದರೆ ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಛಾವಣಿಗೆ ಬಂಗಾರ ಮುಚ್ಚುವ ಬೃಹತ್‌ ಯೋಜನೆ ಇದೆ. 2500 ಚದರಡಿಯ ಚಾವಣಿಗೆ ಬಂಗಾರ ಮುಚ್ಚಲು 1 ಅಡಿಗೆ 40 ಗ್ರಾಂ ಚಿನ್ನ ಬೇಕಾಗಿದೆ. ಅದಕ್ಕೆ ಭಕ್ತರಾದ ತಾವೆಲ್ಲರು ಸಹಕಾರ ನೀಡುವ ಅಗತ್ಯವಿದೆ. ಇನ್ನೊಂದು ಯೋಜನೆ ಎರಡು ವರ್ಷಗಳ ಪ್ರತೀ ದಿನ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆ ಮಾಡುವ ಸಂಕಲ್ಪ ಮಾಡಿದ್ದಾರೆ. ಅಲ್ಲದೆ ಪ್ರತೀ ದಿನ ದಿನ, ರಾತ್ರಿ ಅಖಂಡ ಭಜನೆ ಮಾಡುವ ಯೋಜನೆಯೂ ಇದೆ. ಇಂತಹ ಹಲವಾರು ಯೋಜನೆಗಳನ್ನು ಸ್ವಾಮಿಗಳು ಎರಡು ವರ್ಷಗಳ ಅವಧಿಯಲ್ಲಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಭಕ್ತರೆಲ್ಲರ ಸಹಕಾರ, ಪ್ರೋತ್ಸಾಹ, ಸದಾಯಿರಲಿ ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ದೇವಾಲಯದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಸುಧಾಕರ್‌ ಸಿ. ಪೂಜಾರಿ, ಶ್ರೀಧರ ಬಿ. ಪೂಜಾರಿ, ತಮ್ಮಯ್ಯ ಗೌಡ, ಪ್ರಭಾಕರ ಆಳ್ವ, ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್‌, ಕುಟ್ಟಿ ಎ. ಕುಂದರ್‌, ರತ್ನಾಕರ್‌ ಪೂಜಾರಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next