Advertisement
ಸೆ. 28ರಂದು ಸಂಜೆ ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಸ್ಥೆಯ ಆಯೋಜಿಸಿದ ಶ್ರೀ ಜಗದಂಬಾ ಮಂದಿರದ 3ನೇ ನವರಾತ್ರಿ ಉತ್ಸವದ ಸಂದರ್ಭ ಮಂದಿರಕ್ಕೆ ಆಗಮಿಸಿ ಆಶೀರ್ವಚನ ನೀಡಿದ ಶ್ರೀಗಳು, ಹೆಚ್ಚುತ್ತಿರುವ ಮೊಬೈಲ್ ಹಾವಳಿಯಿಂದ ಇಂದು ಜೀವನವೇ ದುಸ್ತರವಾಗುತ್ತಿದೆ. ಮಂದಿರಕ್ಕೆ ಬರುವಾಗ ಭಕ್ತಾದಿಗಳು ಮೊಬೈಲ್‌ನಿಂದ ದೂರವಿದ್ದರೆ ಪರಮಾತ್ಮ ನಮ್ಮ ಹತ್ತಿರಕ್ಕೆ ಬರುತ್ತಾನೆ. ಮುಂಬರುವ ದಿನಗಳಲ್ಲಿ 3 ವರ್ಷಗಳ ಹಿಂದೆ ನಿರ್ಮಿತವಾದ ಜಗದಂಬೆಯ ಈಮಂದಿರ ಭಕ್ತರ ಶ್ರದ್ಧಾಕೇಂದ್ರವಾಗಿ, ಕಾರಣಿಕಕ್ಷೇತ್ರವಾಗಿ ಕಂಗೊಳಿಸುವುದಲ್ಲಿ ಯಾವುದೇ ಸಂಶಯವಿಲ್ಲ. ತನ್ನ ಎರಡನೇ ಪರ್ಯಾಯ ಉತ್ಸವವು ಜ. 18ರಂದು ಪ್ರಾರಂಭವಾಗಲಿದ್ದು, 2 ವರ್ಷಗಳ ಈ ಅವಧಿಯಲ್ಲಿ ಶ್ರೀಕೃಷ್ಣನ ದ್ವಾರಕೆಯು ಅಂದಿನ ಗತ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಉಡುಪಿಯ ಶ್ರೀಕೃಷ್ಣನ ಗೋಪುರಕ್ಕೆ ಬಂಗಾರದ ಕವಚ ತೊಡಿಸುವುದು, ರಾಷ್ಟ್ರದ ವಿವಿಧೆಡೆಗಳಿಂದ ಭಜನ ಮಂಡಳಿಗಳನ್ನು ಉಡುಪಿಗೆ ಆಹ್ವಾನಿಸಿ ನಿತ್ಯನಿರಂತರ ಶ್ರೀಕೃಷ್ಣ ಸಂಕೀರ್ತನೆ ನಡೆಸುವುದು ಮೊದಲಾದ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಸಹಕರಿಸಿ ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.ಮಂದಿರದ ಅಧ್ಯಕ್ಷ ದಿವಾಕರ ರೈ ದಂಪತಿ ಹಾಗೂ ನೂರಾರು ಭಕ್ತಾದಿಗಳು ಶ್ರೀಗಳನ್ನು ಸ್ವಾಗತಿಸಿದರು. ಮಹಿಳೆಯರು ಕಲಶದೊಂದಿಗೆ, ಪುಷ್ಪವೃಷ್ಟಿಗೈದು ಶ್ರೀಗಳನ್ನು ಸ್ವಾಗತಿಸಿದರು. ವಿವಿಧ ವಾದ್ಯಘೋಷದೊಂದಿಗೆ ಶ್ರೀಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಶ್ರೀ ಜಗದಂಬಾ ಮಂದಿರದ ಪದಾಧಿಕಾರಿಗಳಾದ ಹರೀಶ್ ಶೆಟ್ಟಿ, ದಿವಾಕರ ರೈ, ರಾಜೇಶ್ ಕೋಟ್ಯಾನ್, ನಾಗರಾಜ ಮೊಗವೀರ, ಸುರೇಶ್ ಶೆಟ್ಟಿ ಶೃಂಗೇರಿ, ಮಾಧವ ಪೂಜಾರಿ, ರವೀಂದ್ರ ವೈ. ಶೆಟ್ಟಿ, ವೇ.ಮೂ. ಗುರುಪ್ರಸಾದ್ ಭಟ್, ರಾಜಗೋಪಾಲಾಚಾರ್ಯ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ಭಕ್ತಾದಿ ಗಳನ್ನು ಶ್ರೀಗಳು ಫಲಪುಷ್ಪ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.