Advertisement

Palar blast ಅಪರಾಧಿ ಜ್ಞಾನಪ್ರಕಾಶ್ ನಿಧನ: ವೀರಪ್ಪನ್‌ಗೆ ಸಹಕರಿಸಿದ್ದ

03:50 PM Dec 23, 2023 | Team Udayavani |

ಹನೂರು (ಚಾಮರಾಜನಗರ): ಪಾಲಾರ್ ಬಾಂಬ್ ಸ್ಫೋಟದಲ್ಲಿ ನರಹಂತಕ ವೀರಪ್ಪನ್‌ಗೆ ಸಹಕರಿಸಿದ ಕಾರಣ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ತಾಲೂಕಿನ ಸಂದನಪಾಳ್ಯ ಗ್ರಾಮದ ಜ್ಞಾನಪ್ರಕಾಶ್ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ.

Advertisement

70 ವರ್ಷದ ಜ್ಞಾನಪ್ರಕಾಶ್‌ಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ನರಹಂತಕ ಕಾಡುಗಳ್ಳ ವೀರಪ್ಪನ್, ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ತೆರಳುವ ಪಾಲಾರ್ ಸೇತುವೆಗೆ 1993ರ ಏಪ್ರಿಲ್ 9ರಂದು ಬಾಂಬ್ ಸಿಡಿಸಿ 22 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ವೀರಪ್ಪನ್‌ಗೆ ಜ್ಞಾನಪ್ರಕಾಶ್, ಸೈಮನ್, ಮಾದಯ್ಯ, ಬಿಲವೇಂದ್ರನ್ ಕೈಜೋಡಿಸಿದ್ದರು.

ಈ ಹಿನ್ನೆಲೆಯಲ್ಲಿ ಮೈಸೂರಿನ ಟಾಡಾ (ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ತಡೆ ಕಾಯ್ದೆ) ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಗಲ್ಲು ಶಿಕ್ಷೆಯನ್ನು 2014ರಲ್ಲಿ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಆದೇಶಿಸಿತ್ತು.

ಜ್ಞಾನಪ್ರಕಾಶ್ ಬೆಳಗಾವಿಯ ಹಿಂಡಲಗಾ ಮತ್ತು ಮೈಸೂರು ಜೈಲಿನಲ್ಲಿ 29 ವರ್ಷಗಳ ಶಿಕ್ಷೆ ಅನುಭವಿಸಿದ್ದ. ಮೂರು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಗೆ ತುತ್ತಾಗಿದ್ದ ಆತನಿಗೆ ಸುಪ್ರೀಂ ಕೋರ್ಟ್ 2022ರ ನವೆಂಬರ್‌ನಲ್ಲಿ ಜಾಮೀನು ನೀಡಿತ್ತು. ಕಾರಾಗೃಹದಿಂದ ಬಿಡುಗಡೆಯಾಗಿ, ಸ್ವಗ್ರಾಮ ಸಂದನಪಾಳ್ಯದಲ್ಲಿ ಜ್ಞಾನಪ್ರಕಾಶ್ ವಾಸವಿದ್ದ. ಶುಕ್ರವಾರ ರಾತ್ರಿ, ಅನಾರೋಗ್ಯದಿಂದ ನಿಧನನಾಗಿದ್ದಾನೆ. ಶನಿವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next