Advertisement
ತಮಿಳುನಾಡು ರಾಜಕಾರಣದಲ್ಲಿ ಸದ್ಯಕ್ಕೆ ಪ್ರವಾಹ ಮಳೆ ನಿಂತ ಸ್ಥಿತಿ. ಹದಿನೈದು ದಿನಗಳ “ಹೈಡ್ರಾಮಾ’ಗೆ ತೆರೆಬಿದ್ದಿದೆ. ಆದರೆ, ಈ ದಿನಗಳಲ್ಲಿ ಕೇಳಿಬಂದಿದ್ದ ಸೂಪರ್‌ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶ, ಹೊಸ ಪಕ್ಷ ಸ್ಥಾಪನೆ, ಹೋರಾಟ ನಿಂತಿಲ್ಲ ಎಂದಿರುವ ಪನ್ನೀರ್ ಸೆಲ್ವಂ ಮುಂದಿನ ನಡೆ, ಡಿಎಂಕೆ ರಣತಂತ್ರ, ಚುನಾವಣಾ ಆಯೋಗದಲ್ಲಿರುವ ಎಐಎಡಿಎಂಕೆ ಬಣ ಜಗಳ ವಿವಾದ ಇವೆಲ್ಲದ್ದಕ್ಕೂ ಕಾಲವೇ ಉತ್ತರಿಸಬೇಕಿದೆ.
Related Articles
Advertisement
ಆದರೆ, ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸಮತ ಸಂದರ್ಭ ನಡೆದ ವಿದ್ಯಮಾನಗಳನ್ನು ಗಮನಿಸಿದರೆ ಎಐಎಡಿಎಂಕೆ ಸರ್ಕಾರ ಅಥವಾ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವಧಿ ಎಷ್ಟು ದಿನ ಎಂಬ ಪ್ರಶ್ನೆ ಇದೆ. ರಾಜಕೀಯದಲ್ಲಿ ಏನಾದರೂ ಆಗಬಹುದು ಎಂಬುದು ತಮಿಳುನಾಡಿಗೂ ಅನ್ವಯವಾಗುತ್ತದೆ.
ಇನ್ನು, ಶನಿವಾರ ವಿಧಾನಸಭೆಯಿಂದ ಹರಿದ ಶರ್ಟ್‌ನಲ್ಲೇ ರಾಜಭವನಕ್ಕೆ ಹೋದ ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್ “ಪ್ರಹಸನ’ ನಿಜಕ್ಕೂ ತಲೆತಗ್ಗಿಸುವಂಥದ್ದು. ವಿಧಾನಸಭೆ ಕಲಾಪ ಎರಡು ಬಾರಿ ಮುಂದೂಡಿಕೆಯಾಗಿ ಬಟ್ಟೆ ಹರಿದರೂ ಏಟು ತಿಂದರೂ ನಾನು ಸದನ ಕರೆದಿದ್ದೇನೆ. ಸದನ ಬಿಟ್ಟುಹೋಗಿಲ್ಲ, ಸದನ ಮತ್ತು ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಸ್ಪೀಕರ್ ಧನಪಾಲ್ ಹೇಳಿದ್ದು ನಮಗೆ ಅಲ್ಲಿನ ದಯನೀಯ ಸ್ಥಿತಿ ಎಂದು ಕಂಡರೂ ಸಂಸದೀಯ ವ್ಯವಸ್ಥೆಗೆ ದೊಡ್ಡ ಪೆಟ್ಟು.
2008 ರಿಂದ 2013ರವರೆಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿದ್ದಾಗಲೂ ವಿಧಾನಸಭೆಯಲ್ಲಿ ಕೆಲವೊಂದು ಅಹಿತಕರ ಘಟನೆ ನಡೆದಿದ್ದೂ ಇದೆ. ರಾಜ್ಯದ ಸಂಸದೀಯ ವ್ಯವಸ್ಥೆಯ ಇತಿಹಾಸದಲ್ಲಿ ಅದೊಂದು ಕಪ್ಪುಚುಕ್ಕೆ. ಆದರೆ, ಶನಿವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದದ್ದು ಅಕ್ಷರಶಃ ರೌಡಿಸಂ. ಸ್ಪೀಕರ್ ಧನಪಾಲ್ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದು ಸ್ಪೀಕರ್ ಆಸನದಲ್ಲಿ ಡಿಎಂಕೆ ಶಾಸಕ ಕುಳಿತಿದ್ದು, ಸ್ಪೀಕರ್ ಟೇಬಲ್ ಪುಡಿ ಪುಡಿ ಮಾಡಿದ್ದು , ನೂಕಾಟ-ತಳ್ಳಾಟದಲ್ಲಿ ಶರ್ಟ್, ಪಂಚೆ ಹರಿದಿದ್ದು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟೇಕೆ ರಾಷ್ಟ್ರದ ಹಿರಿಯ ರಾಜಕಾರಣಿ ಸಿದ್ಧಾಂತವಾದಿ ಡಿಎಂಕೆ ನಾಯಕ ಕಲೈಂಜರ್ ಎಂ.ಕರುಣಾನಿಧಿ ಸಹ ಈ ಬೆಳವಣಿಗೆ ಬೆಂಬಲಿಸಲಾರರು. ತಮ್ಮ ಪಕ್ಷದ ಶಾಸಕರು ತೋರಿದ ದುರ್ನಡತೆಯನ್ನು ಅವರು ಖಂಡಿಸಿ ಬಹಿರಂಗ ಕ್ಷಮೆ ಕೇಳಬೇಕಿತ್ತು. 89 ಡಿಎಂಕೆ ಶಾಸಕರನ್ನು ಅಮಾನತು ಮಾಡಿ ಬಹುಮತ ಸಾಬೀತಿಗೆ ಅವಕಾಶ ಕೊಡಬೇಕಾಗಿ ಬಂದಿದ್ದು ದುರ್ದೈವ. ಆದರೆ, ಸ್ಪೀಕರ್ ಧನಪಾಲ್ ಕೈಗೊಂಡ ಕ್ರಮ ಸೂಕ್ತವಾದುದು. ಜಯಲಲಿತಾ ನಿಧನದ ನಂತರ ಇಂತಹ ಬೆಳವಣಿಗೆ ನಿರೀಕ್ಷಿತವಾದರೂ ವಿಧಾನಸಭೆಯಲ್ಲಿ ಇಂತದ್ದು ಸಹ್ಯವಲ್ಲ. ಅದರಲ್ಲೂ ಎಐಡಿಎಂಕೆ ಆಂತರಿಕ ಸಂಘರ್ಷ ಏನೇ ಇರಲಿ. ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ಎಡಪ್ಪಾಡಿ ಕೆ.ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ಅಡ್ಡಿ ಮಾಡಿದ್ದು ಸಮರ್ಥನೀಯವಲ್ಲ. ಮೂವತ್ತು ವರ್ಷಗಳ ಹಿಂದೆ ಎಂಜಿಆರ್ ನಿಧನರಾದ ನಂತರ ಎಐಎಡಿಎಂಕೆಯಲ್ಲಿ ಉಂಟಾಗಿದ್ದ ತಿಕ್ಕಾಟ ಹಿನ್ನೆಲೆಯಲ್ಲಿ 1987ರಲ್ಲಿ ವಿಶ್ವಾಸಮತಯಾಚನೆ ನಡೆದಿತ್ತು. ಆಗ ಎಂಜಿಆರ್ ಪತ್ನಿ ಜಾನಕಿರಾಮಚಂದ್ರನ್ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಆಗ ಎಐಎಡಿಎಂಕೆಗೆ ವಿರುದ್ಧವಾಗಿದ್ದವರು ಜಯಲಲಿತಾ ನೇತೃತ್ವದ ಬಂಡಾಯ ಶಾಸಕರೇ. ಈಗಲೂ ಅಂತಹುದೇ ಸನ್ನಿವೇಶ ಎದುರಾಗಿತ್ತು. ಆದರೆ, ಎಐಎಡಿಎಂಕೆಗೆ ವಿರುದ್ಧವಾಗಿರುವುದು ಡಿಎಂಕೆ ಶಾಸಕರು ಎಂಬುದು ವಿಶೇಷ. ತಮಿಳುನಾಡು ವಿಧಾನಸಭೆಯ 235 ಸ್ಥಾನಗಳ ಪೈಕಿ ಎಐಎಡಿಎಂಕೆ 135 ಸ್ಥಾನ ಹೊಂದಿತ್ತು. ಜಯಲಲಿತಾ ನಿಧನದಿಂದ ಆ ಸಂಖ್ಯೆ 134ಕ್ಕೆ ಇಳಿದಿದೆ. ಪನ್ನೀರ್‌ಸೆಲ್ವಂ ಬಣದಲ್ಲಿ 11 ಶಾಸಕರು ಗುರುತಿಸಿಕೊಂಡಿದ್ದರೂ ಎಡಪ್ಪಾಡಿಗೆ 123 ಶಾಸಕರ ಬೆಂಬಲ ಇತ್ತು. 122 ಶಾಸಕರು ಎಡಪ್ಪಾಡಿ ಪರವೇ ಮತ ಹಾಕಿದರು. ಶಾಸಕರ ಬೆಂಬಲದ ಪತ್ರ ನೋಡಿದ ನಂತರವೇ ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ಕೊಟ್ಟಿದ್ದು. ಇಷ್ಟಾದರೂ ಡಿಎಂಕೆ ರಹಸ್ಯ ಮತದಾನಕ್ಕೆ ಆಗ್ರಹಿಸಿದ್ದು ಯಾವ ಕಾರಣಕ್ಕೆ ಎಂಬುದೇ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಪನ್ನೀರ್‌ಸೆಲ್ವಂ ಪರ ಇದ್ದವರು ಎಡಪ್ಪಾಡಿ ವಿರುದ್ಧ ಮತ ಚಲಾಯಿಸಿದರೂ ಬಹುಮತಕ್ಕೆ ಬೇಕಾಗಿದ್ದು 118 ಮಾತ್ರ. ಅಷ್ಟು ಸದಸ್ಯರ ಬೆಂಬಲ ಇದ್ದೇ ಇತ್ತು. ತಾಂತ್ರಿಕವಾಗಿ ಪನ್ನೀರ್‌ಸೆಲ್ವಂ ಅವರು ಎಐಎಡಿಎಂಕೆ ಶಾಸಕರು. ಪಕ್ಷದ ವತಿಯಿಂದ ವಿಪ್ ನೀಡಿದರೆ ಅವರು ಎಡಪ್ಪಾಡಿ ಪಳನಿಸ್ವಾಮಿ ಪರವೇ ಮತ ಚಲಾಯಿಸಬೇಕಿತ್ತು. ಆದರೆ, ವಿರುದ್ಧ ಮತ ಹಾಕಿರುವುದರಿಂದ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಮುಂದೆ ಆ ಬೆಳವಣಿಗೆ ಏನಾಗುತ್ತೋ ಕಾದು ನೋಡಬೇಕಿದೆ. ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕ್ರಮ ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ಮೊರೆ ಹೋಗಿರುವುದು, ಆಯೋಗ ನೋಟಿಸ್ ಕೊಟ್ಟಿರುವುದು, ಪನ್ನೀರ್‌ಸೆಲ್ವಂ ಬಣ ಶಶಿಕಲಾ, ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಬೆಳವಣಿಗೆ ನಡೆದಿದ್ದರೂ ಯಾರದು ನೈಜ ಎಐಎಡಿಎಂಕೆ ಎಂದು ನಿರ್ಧಾರವಾಗಬೇಕಾಗಿರುವುದು ಆಯೋಗದಲ್ಲಿ. ಹೀಗಾಗಿ, ಅದುವರೆಗೂ ನಮ್ಮದೇ ಪಕ್ಷ ಎಂದು ಯಾರೂ ಹೇಳಿಕೊಳ್ಳುವಂತಿಲ್ಲ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷದಿಂದ ಅಖೀಲೇಶ್‌ಯಾದವ್ ಅವರನ್ನು ಉಚ್ಛಾಟಿಸಲಾಯಿತು. ಆದರೆ, ಚುನಾವಣಾ ಆಯೋಗಕ್ಕೆ ಅಖೀಲೇಶ್ ಯಾದವ್ ನಮ್ಮದೇ ನಿಜವಾದ ಪಕ್ಷ ಎಂದು ಪ್ರಮಾಣಪತ್ರ ಸಲ್ಲಿಸಿದರು. ಶಾಸಕರು, ಸಂಸದರು, ರಾಜ್ಯ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರ ಬೆಂಬಲದ ಆಧಾರದ ಮೇಲೆ ಆಯೋಗ ಸಹ ಅಖೀಲೇಶ್ ಪರ ತೀರ್ಪು ನೀಡಿತು. ಹೀಗಾಗಿ, ಜಯಲಲಿತಾ ನಿಧನ ನಂತರ ಓ.ಪನ್ನೀರ್‌ಸೆಲ್ವಂ ಬಣ ಶಶಿಕಲಾ ಬಣದವರನ್ನು ಉಚ್ಚಾಟಿಸಿದ್ದರೆ, ಶಶಿಕಲಾ ಬಣ ಓ.ಪನ್ನೀರ್‌ಸೆಲ್ವಂ ಬಣದವರನ್ನು ಉಚ್ಚಾಟಿಸಿದೆ. ಪನ್ನೀರ್‌ಸೆಲ್ವಂ ಪರ 10 ಸಂಸದರು, 11 ಶಾಸಕರು ಇರಬಹುದು. ಜನರ ಸಹಾನುಭೂತಿ ಅವರ ಪರವೇ ಇರಬಹುದು. ಆದರೆ, ಆ ಜನರು ಆರಿಸಿದ ಜನಪ್ರತಿನಿಧಿಗಳು ಶಶಿಕಲಾ ಹಾಗೂ ಎಡಪ್ಪಾಡಿ ಕೆ.ಪಳನಿಸ್ವಾಮಿ ಪರ ಹೆಚ್ಚಾಗಿದ್ದರು. ಒಂದೊಮ್ಮೆ ವಿಶ್ವಾಸಮತ ಸಂದರ್ಭದಲ್ಲಿ ಎಐಎಡಿಎಂಕೆಯಿಂದ ಪನ್ನೀರ್‌ಸೆಲ್ವಂ ಬಣ, ಡಿಎಂಕೆ, ಕಾಂಗ್ರೆಸ್, ಇತರರು ಸರ್ಕಾರದ ವಿರುದ್ಧ ಮತ ಹಾಕಿದರೂ ಅವರ ಸಂಖ್ಯೆ 111 ಮಾತ್ರ. ಎಡಪ್ಪಾಡಿ ಬಹುಮತ ಸಾಬೀತುಪಡಿಸಲು ಯಾವುದೇ ಅಡ್ಡಿಯಾಗುತ್ತಿರಲಿಲ್ಲ.(ಪನ್ನೀರ್‌ಸೆಲ್ವಂ ಪರ ಇನ್ನೂ ಐದಾರು ಶಾಸಕರು ಬೆಂಬಲಕ್ಕೆ ನಿಂತರೆ ಆಗ ಎಡಪ್ಪಾಡಿಗೆ ಕಷ್ಟವಾಗುತ್ತಿತ್ತು ಅಷ್ಟೇ) ಇದನ್ನು ಅರಿತು ಡಿಎಂಕೆ, ಬಂಡಾಯ ಎಐಎಡಿಎಂಕೆ ಶಾಸಕರು ಕೋಲಾಹಲ ಸೃಷ್ಟಿಸಿ ರಂಪಾಟ ಮಾಡಿದರು. ಅವರ ಉದ್ಧೇಶ, ಸಂವಿಧಾನಿಕ ಬಿಕ್ಕಟ್ಟು ಉಂಟಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲಿ ಎಂಬುದೇ ಆಗಿತ್ತು. ಇನ್ನು ಮುಖ್ಯಮಂತ್ರಿ ಗಾದಿ ಅಲಂಕರಿಸಿರುವ ಗೌಂಡರ್ ಸಮುದಾಯದ ಪ್ರಭಾವಿ ಮುಖಂಡ 62 ವರ್ಷದ ಎಡಪ್ಪಾಡಿ ಕೆ.ಪಳನಿಸ್ವಾಮಿ ರಾಜಕೀಯದ ಎಳಸು ಅಲ್ಲ. 1972ರಲ್ಲೇ ಎಐಎಡಿಎಂಕೆ ಪ್ರವೇಶಿಸಿದವರು. 1987ರಲ್ಲಿ ಎಂಜಿಆರ್ ನಿಧನ ನಂತರ ಪಕ್ಷದಲ್ಲಿ ಬಿಕ್ಕಟ್ಟು ಏರ್ಪಟ್ಟಾಗ ಜಯಲಲಿತಾ ಪರ ಗಟ್ಟಿಯಾಗಿ ನಿಂತವರು. 1989, 1991, 2011, 2016ರ ವಿಧಾನಸಭೆ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾದವರು. 1998ರಲ್ಲಿ ತಿರುಚ್ಚಿನಗೋಡ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು. 2011ರಲ್ಲಿ ಜಯಲಲಿತಾ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಐದು ವರ್ಷ ಭರ್ತಿ ಕೆಲಸ ಮಾಡಿ 2016ರಲ್ಲಿ ಎರಡನೇ ಬಾರಿ ಸರ್ಕಾರ ರಚಿಸಿದಾಗಲೂ ಅದೇ ಖಾತೆಯಲ್ಲಿ ಮುಂದುವರಿದು ಜಯಲಲಿತಾ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಆದರೆ, ಜಯಲಲಿತಾ ತನ್ನ ನಂತರ ಅಥವಾ ಪರ್ಯಾಯ, ತಾತ್ಕಾಲಿಕ ಎಂದಾಗ ಓ.ಪನ್ನೀರ್‌ಸೆಲ್ವಂ ಅವರನ್ನೇ ಯಾಕೆ ಆಯ್ಕೆ ಮಾಡುತ್ತಿದ್ದರು ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಉತ್ತರ ಪನ್ನೀರ್‌ಸೆಲ್ವಂ ಮೃಧು ಸ್ವಭಾವಿ. ಎಡಪ್ಪಾಡಿ ಕೆ.ಪಳನಿಸ್ವಾಮಿ ಡ್ಯಾಶಿಂಗ್ ನೇಚರ್. ಪಳನಿಸ್ವಾಮಿ ಆರ್ಥಿಕವಾಗಿಯೂ ಸ್ಥಿತಿವಂತ, ಪ್ರಬಲ ಸಮುದಾಯದ ನಾಯಕ. ತನಗೆ ತಿರುಮಂತ್ರ ಹಾಕಬಹುದು ಎಂಬ ಆತಂಕ ಇದ್ದ ಕಾರಣದಿಂದಲೇ ಜಯಾ ಆಯ್ಕೆ ಪನ್ನೀರ್‌ಸೆಲ್ವಂ ಆಗುತ್ತಿತ್ತು . ಒಂದಂತೂ ಸತ್ಯ, ತಮಿಳುನಾಡು ಮಟ್ಟಿಗೆ ಹೇಳಬೇಕಾದರೆ “ಪಿಕ್ಚರ್ ಅಬಿ ಬಾಕಿ ಹೈ’. ಈಗಲೂ ಇರುವ ಪ್ರಶ್ನೆ ಎಂದರೆ “ತಮಿಳುನಾಡಿಲ್ ಇಪ್ಪು ಎಡಪ್ಪಾಡಿ ಪಳನಿಸ್ವಾಮಿ “ನಾಯಗನ್’ ಅಪುರ್‌ಮಾ ವರುವಾರು ಚಿನ್ನಮ್ಮ ಶಶಿಕಲಾ..! (ತಮಿಳುನಾಡಿನಲ್ಲಿ ಈಗ ಎಡಪ್ಪಾಡಿ ಪಳನಿಸ್ವಾಮಿ ನಾಯಕ, ಆಮೇಲೆ ಬರ್ತಾರೆ ಚಿನ್ನಮ್ಮ ಶಶಿಕಲಾ) – ಎಸ್.ಲಕ್ಷ್ಮಿನಾರಾಯಣ