ಭಟ್ಕಳ: ಶಿವರಾತ್ರಿ ಪ್ರಯುಕ್ತ ಮುರ್ಡೇಶ್ವರದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಉತ್ಸವಾದಿಗಳು ನಡೆದವು. ಪ್ರತಿವರ್ಷದಂತೆ ಈ ವರ್ಷವೂ ಪಾಲಕಿ ಉತ್ಸವ, ಪುಷ್ಪ ರಥೋತ್ಸವ ಜರುಗಿತು.
ಶಿವರಾತ್ರಿ ಪ್ರಯುಕ್ತ ಬೆಳಗ್ಗೆಯಿಂದಲೇ ಶ್ರೀ ದೇವರ ದರ್ಶನಕ್ಕೆ ಸರದಿಯ ಸಾಲು ಆರಂಭವಾಗಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಸಾಲು ಬೆಳೆಯುತ್ತಲೇ ಇತ್ತು. ನಂತರ ಮಧ್ಯಾಹ್ನದ ಸುಮಾರಿಗೆ ಸ್ವಲ್ಪ ಕಡಿಮೆಯಾಗಿದ್ದರೂ ಸಂಜೆ ಮತ್ತೆ ಭಕ್ತರ ಸಂಖ್ಯೆ ಹೆಚ್ಚಿತ್ತು.
ಕಳೆದ ಕೆಲ ವರ್ಷಗಳಿಂದ ಶಿವಾರಾತ್ರಿಯಂದು ಉಪವಾಸವಾದ್ದರಿಂದ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆಯಾಗಲೀ ಫಲಹಾರದ ವ್ಯವಸ್ಥೆಯಾಗಲೀ ಇರಲಿಲ್ಲವಾಗಿತ್ತು. ಆದರೆ ಶಿವರಾತ್ರಿಯಂದು ಹಲವರು ಫಲಹಾರ ಮಾಡುವುದರಿಂದ ಶ್ರೀ ದೇವಸ್ಥಾನದ ವತಿಯಿಂದ ಈ ವರ್ಷದಿಂದ ಫಲಹಾರದ ವ್ಯವಸ್ಥೆ ಮಾಡಲು ಆಡಳಿತ ಧರ್ಮದರ್ಶಿ ಡಾ| ಆರ್.ಎನ್. ಶೆಟ್ಟಿಯವರ ಸೂಚನೆಯಂತೆ ಸಾವಿರಾರು ಜನರಿಗೆ ಮಧ್ಯಾಹ್ನದ ಫಲಹಾರದ ವ್ಯವಸ್ಥೆ ಮಾಡಲಾಯಿತು.
ಶಿವರಾತ್ರಿ ಉತ್ಸವ ಅಂಗವಾಗಿ ಸಂಜೆ ಶ್ರೀ ದೇವರ ಚಿನ್ನದ ರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಉತ್ಸವ ಮೂರ್ತಿಯ ಉತ್ಸವ ಓಲಗ ಮಂಟಪಕ್ಕೆ ಆಗಮಿಸಿ ಪೂಜಿಸಿದ ನಂತರ ಪುಷ್ಪ ರಥೋತ್ಸವ ನಡೆಯಿತು. ತಾಲೂಕಿನ ಶಿವ ಕ್ಷೇತ್ರಗಳಾದ ಪುರಾಣ ಪ್ರಸಿದ್ಧ ಚೋಳೇಶ್ವರದಲ್ಲಿಯೂ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ಶ್ರೀ ದೇವರಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಬಂದರಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕುಟುಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ, ಅಖಂಡ ಭಜನಾ ಕಾರ್ಯಕ್ರಮ ಭಕ್ತರ ಸಹಕಾರದಿಂದ ನಡೆಯಿತು. ನಗರದಲ್ಲಿರುವ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನ, ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರೂಕೇರಿಯ ಕೊಡುಕಿ ಶಂಭುಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ಶಿವಾಲಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.
ಪಾದಯಾತ್ರೆ: ಪ್ರತಿವರ್ಷದಂತೆ ಈ ವರ್ಷವೂ ಭಟ್ಕಳದ ಚೋಳೇಶ್ವರದಿಂದ ಶಿವಾನಿ ಶಾಂತಾರಾಮ ನೇತೃತ್ವದಲ್ಲಿ ಸುಮಾರು 700ಕ್ಕೂ ಹೆಚ್ಚು ಜನರು ಪಾದಯಾತ್ರೆ ಮೂಲಕ ತೆರಳಿ ಶ್ರೀ ಮುರುಡೇಶ್ವರನ ದರ್ಶನ ಪಡೆದರು. ಕಳೆದ 9 ವರ್ಷಗಳ ಹಿಂದೆ ಕೇವಲ ಕೆಲವೇ ಜನರು ಆರಂಭಿಸಿದ್ದ ಪಾದಯಾತ್ರೆ ವರ್ಷಂಪ್ರತಿ ಜನರು ಹೆಚ್ಚುತ್ತಾ ಹೋಗುತ್ತಿರುವುದು ವಿಶೇಷವಾಗಿದೆ.