Advertisement

ವಿಜಯದಶಮಿಗೆ ಅರಮನೆ ನಗರಿ ಸಜ್ಜು

12:05 PM Oct 19, 2018 | |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ವಿಜಯದಶಮಿ ಮೆರವಣಿಗೆ (ಜಂಬೂಸವಾರಿ)ಗೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಅ.19ರ ಶುಕ್ರವಾರ ಮಧ್ಯಾಹ್ನ 2.30ರಿಂದ 3.16ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆ ಬಲರಾಮದ್ವಾರದಲ್ಲಿ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ವಿಜಯದಶಮಿ ಮೆರವಣಿಗೆ ಉದ್ಘಾಟಿಸುವರು. 

Advertisement

ಬಳಿಕ ಮಧ್ಯಾಹ್ನ 3.40ರಿಂದ 4.10ಗಂಟೆವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ತರುವ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಹಾಜರಿರುತ್ತಾರೆ.

ದೃಶ್ಯವೈಭವ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಪ್ರಾಕೃತಿಕ ಶ್ರೀಮಂತಿಕೆಗಳನ್ನು ಬಿಂಬಿಸುವ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ 100ಕ್ಕೂ ಹೆಚ್ಚು ಕಲಾ ತಂಡ, ರಾಜ್ಯದ ಎಲ್ಲಾ ಜಿಪಂ ಹಾಗೂ ವಿವಿಧ ಇಲಾಖೆ, ನಿಗಮಗಳ ಒಟ್ಟು 42 ಸ್ತಬ್ಧಚಿತ್ರ, ಮೆರವಣಿಗೆಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುವ ಅಂಬಾರಿ ಅರ್ಜುನ ಸೇರಿದಂತೆ ದಸರಾ ಗಜಪಡೆಯ 12 ಆನೆ, ಅಶ್ವಾರೋಹಿ ಪಡೆ, ಎನ್‌ಸಿಸಿ ಕೆಡೆಟ್ಸ್‌ ಅರಮನೆ ಆವರಣದಿಂದ 5 ಕಿ.ಮೀ ದೂರದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಈ ದೃಶ್ಯವೈಭವ ದೇಶವಿದೇಶಗಳಿಂದ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಕಣ್ತುಂಬಿಕೊಳ್ಳಲಿದ್ದಾರೆ.

ಪಂಜಿನ ಕವಾಯತು: ರಾತ್ರಿ 7 ಗಂಟೆಗೆ ಬನ್ನಿಮಂಪಟ ಮೈದಾನದಲ್ಲಿ ಪಂಜಿನ ಕವಾಯತು(ಟಾರ್ಚ್‌ಲೈಟ್‌ ಪೆರೇಡ್‌)ಆರಂಭವಾಗಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ಬಳಿಕ 2ಗಂಟೆಗಳ ಕಾಲ ಮೈನವಿರೇಳಿಸುವ ಸಾಹಸಮಯ, ರೋಮಾಂಚಕಾರಿ ಸಾಹಸ ಪ್ರದರ್ಶನ, ಬೈಕ್‌ ಸವಾರಿ, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಇದರೊಂದಿಗೆ ಹತ್ತು ದಿನಗಳ ಮೈಸೂರು ದಸರೆಗೆ ತೆರೆ ಬೀಳಲಿದೆ.

ಸಕಲ ಸಿದ್ಧತೆ: ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ಕಳೆದ ಎರಡು ತಿಂಗಳಿಂದ ನಗರದ ವಾತಾವರಣಕ್ಕೆ ಹೊಂದಿಕೊಂಡು, ಲಕ್ಷಾಂತರ ಜನರ ಗೌಜು ಗದ್ದಲದ ನಡುವೆ ಗಜ ಗಾಂಭೀರ್ಯದಿಂದ ಸಾಗುವ ತಾಲೀಮು ನೀಡಲಾಗಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಸ್ಥಳೀಯ ಕಲಾತಂಡಗಳಿಗೆ ಅವಕಾಶ ನೀಡುವ ಸಲುವಾಗಿ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಮೆರವಣಿಗೆಯಲ್ಲೂ ಗಜಪಡೆ ಅಂಬಾರಿ ರಹಿತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Advertisement

25 ಸಾವಿರ ಆಸನ ವ್ಯವಸ್ಥೆ: ಜಂಬೂಸವಾರಿ ವೀಕ್ಷಣೆಗಾಗಿ ಅರಮನೆ ಆವರಣದಲ್ಲಿ 25 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದಸರಾ ಗೋಲ್ಡ್‌ಕಾರ್ಡ್‌ದಾರರು, ಅತೀಗಣ್ಯರು, ಗಣ್ಯರು ಹಾಗೂ ದಸರಾ ಪಾಸ್‌ ಹೊಂದಿದ್ದವರಿಗೆ ಇಲ್ಲಿ ಅವಕಾಶ ನೀಡಲಾಗುತ್ತದೆ. ಇನ್ನುಳಿದಂತೆ ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಸಾರ್ವಜನಿಕರು ಕುಳಿತು ವೀಕ್ಷಣೆ ಮಾಡಲು ಶಾಮಿಯಾನ, ಕುರ್ಚಿ ಹಾಕಿ ಅನುಕೂಲ ಕಲ್ಪಿಸಲಾಗುತ್ತಿದೆ. ನಗರ ಪಾಲಿಕೆ ಸಂಚಾರಿ ವಾಹನಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಿದೆ.

ಬಿಗಿ ಬಂದೋಬಸ್ತ್: ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಲಕ್ಷಾಂತರ ಜನ ಸೇರುವುದರಿಂದ ಕಾನೂನು-ಸುವ್ಯವಸ್ಥೆ ಕಾಪಾಡಲು 5284 ಜನ ಪೊಲೀಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಜೊತೆಗೆ ನಗರದ ಪ್ರಮುಖ ರಸ್ತೆಗಳ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದೇ ಮೊದಲ ಬಾರಿ ಮೊಬೈಲ್‌ ಕಮಾಂಡೋ ವಾಹನ ನಗರದ ಪ್ರಮುಖ ಸ್ಥಳಗಳಲ್ಲಿನ ಆಗು-ಹೋಗುಗಳ ಮೇಲೆ ನಿಗಾಇರಿಸಿದೆ. ಜೊತೆಗೆ ಜಂಬೂಸವಾರಿ ದಿನ ಡ್ರೋಣ್‌ ಕ್ಯಾಮರಾ ಬಳಸಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next