ಇಸ್ಲಾಮಾಬಾದ್ : ನಕಲಿ ಬ್ಯಾಂಕ್ ಖಾತೆ ಕೇಸಿಗೆ ಸಂಬಂಧಪಟ್ಟು ಪಾಕಿಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ ಇಂದು ಸೋಮವಾರ ದೇಶದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಅವರ ನಿವಾಸದಲ್ಲೇ ಬಂಧಿಸಿದೆ. ಇದೇ ವೇಳೆ ಅವರ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ ಜನರಿಗೆ ಶಾಂತಿಯಿಂದಿರುವಂತೆ ಕರೆ ನೀಡಿದೆ.
ನಕಲಿ ಬ್ಯಾಂಕ್ ಖಾತೆ ಕೇಸಿಗೆ ಸಂಬಂಧಿಸಿ ಇಸ್ಲಾಮಾಬಾದ್ ಹೈಕೋರ್ಟ್ ಜರ್ದಾರಿ ಅವರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ ಬೆನ್ನಿಗೇ ಪಾಕಿಸ್ಥಾನದ ರಾಷ್ಟ್ರೀಯ ಉತ್ತರದಾಯಿ ದಳದ (ಎನ್‌ಎಬಿ), ಮಹಿಳಾ ಅಧಿಕಾರಿಗಳೂ ಸೇರಿದ ತಂಡ ಪಿಪಿಪಿ ಸಹ-ಅಧ್ಯಕ್ಷ ಜರ್ದಾರಿ ಅವರ ನಿವಾಸಕ್ಕೆ ಹೋಗಿ ಅವರನ್ನು ಬಂಧಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಜರ್ದಾರಿ ಅವರ ಸಹೋದರಿ ಫರ್ಯಾಲ್ ತಾಲ್‌ಪುರ್ ಅವರನ್ನು ಈ ವರೆಗೆ ಬಂಧಿಸಲಾಗಿಲ್ಲ.
ಜರ್ದಾರಿ ಅವರ ಬೆಂಬಲಿಗರು ಮತ್ತು ಅವರ ರಾಜಕೀಯ ಸಲಹೆಗಾರರು ಮೊದಲು ಜರ್ದಾರಿ ಬಂಧನಕ್ಕೆ ಪ್ರತಿರೋಧ ಒಡ್ಡಿದರು. ಆದರೆ ಅನಂತರ ಭದ್ರತಾ ತಂಡಕ್ಕೆ ಜರ್ದಾರಿ ನಿವಾಸ ಪ್ರವೇಶಿಸಲು ಬಿಡಲಾಯಿತು. ಮಾತುಕತೆಯ ಬಳಿಕ 63ರ ಹರೆಯದ ಜರ್ದಾರಿ ಶರಣಾಗತರಾದರು.
ಜರ್ದಾರಿ ಮತ್ತು ಅವರ ಸಹೋದರಿ ಈಗಿನ್ನು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದೆ.