Advertisement

ಪಾಕ್ ಗೆ ಯುದ್ಧಾವೇಶ

09:19 AM Aug 13, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನ ಈಗ ಭಾರತದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆಯೇ?

Advertisement

ಲಡಾಖ್‌ ಸಮೀಪದ ಪಾಕ್‌ ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಈ ಅನುಮಾನಕ್ಕೆ ಪುಷ್ಟಿ ನೀಡಿವೆ. ವಿಶೇಷ ಸ್ಥಾನಮಾನ ವಾಪಸ್‌ ಪಡೆದಂದಿನಿಂದ ಈವರೆಗೆ ಪಾಕಿಸ್ಥಾನವು ಲಡಾಖ್‌ ಸಮೀಪದ ತನ್ನ ಮುಂಚೂಣಿ ನೆಲೆಗೆ ಒಂದೊಂದಾಗಿ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿರುವ ವಿಚಾರ ಬಹಿರಂಗವಾಗಿದೆ.

ವಾಯುಪಡೆ ವಿಮಾನಗಳಿಂದ ಸಾಗಾಟ
ಲಡಾಖ್‌ ವಿರುದ್ಧ ದಿಕ್ಕಿನಲ್ಲಿ ಪಾಕ್‌ನ ಸ್ಕರ್ದು ವಾಯು ನೆಲೆ ಇದೆ. ಅಲ್ಲಿಗೆ ಪಾಕ್‌ ವಾಯು ಪಡೆಯ ಮೂರು ಸಿ-130 ಸಾಗಣೆ ವಿಮಾನಗಳು ಶನಿವಾರದಿಂದ ಸೇನಾ ಸಾಮಗ್ರಿ ಸಾಗಾಟ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಜೆಎಫ್-17 ಯುದ್ಧ ವಿಮಾನಗಳನ್ನೂ ಇಲ್ಲಿ ನಿಯೋಜಿಸಲು ತಯಾರಿ ನಡೆಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಸೂಕ್ಷ್ಮ ನಿಗಾ
ಪಾಕಿಸ್ಥಾನದ ಈ ಚಟುವಟಿಕೆಗಳ ಮೇಲೆ ಭಾರತದ ಗುಪ್ತಚರ ಸಂಸ್ಥೆಗಳು, ಸೇನಾಪಡೆ ಮತ್ತು ವಾಯುಪಡೆ ಸೂಕ್ಷ್ಮವಾಗಿ ನಿಗಾ ಇರಿಸುತ್ತಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಪಾಕ್‌ ಪತ್ರಕರ್ತನಿಂದ ಸುಳಿವು
ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಪಾಕ್‌ ಸೈನಿಕರು ಎಲ್‌ಒಸಿಯತ್ತ ಸಾಗುತ್ತಿದ್ದಾರೆ ಎಂದು ಪಾಕ್‌ ಪತ್ರಕರ್ತ ಹಮೀದ್‌ ಮಿರ್‌ ರವಿವಾರ ಟ್ವೀಟ್‌ ಮಾಡಿದ್ದರು.

Advertisement

ದೋವಲ್‌ ವೈಮಾನಿಕ ಸಮೀಕ್ಷೆ
ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಪ್ರದೇಶಗಳಲ್ಲಿ ಸೋಮವಾರ ಎನ್‌ಎಸ್‌ಎ ಅಜಿತ್‌ ದೋವಲ್‌ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಮತ್ತು ಸೇನಾ ಕಮಾಂಡರ್‌ಗಳು ಕೂಡ ವಿವಿಧ ಭಾಗಗಳಲ್ಲಿ ಪ್ರತ್ಯೇಕ ವೈಮಾನಿಕ ಸಮೀಕ್ಷೆ ನಡೆಸಿದ್ದು, ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ. ಪಾಕಿಸ್ಥಾನವು ಸಮರಕ್ಕೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಬಂದ ಬೆನ್ನಲ್ಲೇ ಈ ವೈಮಾನಿಕ ಸಮೀಕ್ಷೆ ನಡೆಸಿರುವುದು ಕುತೂಹಲ ಮೂಡಿಸಿದೆ.

ದಿಲ್ಲಿ-ಲಾಹೋರ್‌ ಬಸ್‌ ಸೇವೆ ರದ್ದು
ದಿಲ್ಲಿ ಮತ್ತು ಲಾಹೋರ್‌ ನಡುವಿನ ಸೌಹಾರ್ದ ಸೇತುವಾಗಿದ್ದ ಬಸ್‌ ಸಂಚಾರವನ್ನು ಪಾಕ್‌ ಸ್ಥಗಿತಗೊಳಿ ಸಿದ ಬೆನ್ನಲ್ಲೇ ಭಾರತವೂ ಸೋಮವಾರ ಈ ಬಸ್‌ ಸೇವೆ ರದ್ದು ಮಾಡಿದೆ. ಸೋಮವಾರ ಬೆಳಗ್ಗೆ 6 ಗಂಟೆಗೆ ದಿಲ್ಲಿಯಿಂದ ಲಾಹೋರ್‌ಗೆ ಈ ಬಸ್‌ ಹೊರಡಬೇಕಿತ್ತು. ಆದರೆ ಪಾಕಿಸ್ಥಾನವು ಬಸ್‌ ಸೇವೆ ಸ್ಥಗಿತಗೊಳಿಸಿದ ಕಾರಣ ಇಲ್ಲಿಂದಲೂ ಬಸ್‌ ಹೊರಡಲಿಲ್ಲ ಎಂದು ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ತಿಳಿಸಿದೆ. 2 ದಿನಗಳ ಹಿಂದಷ್ಟೇ ಎರಡೂ ದೇಶಗಳ ನಡುವಿನ ಸಂಜೋತಾ ಎಕ್ಸ್‌ಪ್ರೆಸ್‌ ರೈಲು, ಥಾರ್‌ ರೈಲು ಸೇವೆ ಕೂಡ ರದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next