Advertisement

ಕುಲಭೂಷಣ್ ಜಾಧವ್ ಪ್ರಕರಣ; ಮತ್ತೆ ಪಾಕಿಸ್ತಾನದ ಡಬ್ಬಲ್ ಗೇಮ್ ಬಟಾಬಯಲು!

12:07 PM May 25, 2017 | Team Udayavani |

ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಇದೀಗ ಕುಲಭೂಷಣ್ ಜಾಧವ್ ಅವರನ್ನು ನಾವು ಬಂಧಿಸಿದ್ದು ಇರಾನ್ ನಲ್ಲಿ, ಪಾಕಿಸ್ತಾನದಲ್ಲಿ ಅಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ಮತ್ತೊಮ್ಮೆ ಪಾಕಿಸ್ತಾನದ ಮುಖವಾಡ ಕಳಚಿಬಿದ್ದಂತಾಗಿದೆ.

Advertisement

ಜಾಧವ್ ಅವರನ್ನು ಇರಾನ್ ನಲ್ಲಿ ಬಂಧಿಸಿರುವುದಾಗಿ ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿ ಲೆಫ್ಟಿನೆಂಟ್ ಜನರಲ್ ಅಮ್ಜದ್ ಶೋಯೆಬ್ ಬಹಿರಂಗಗೊಳಿಸಿದ್ದಾರೆ. ಪ್ರಕರಣದ ಜಟಾಪಟಿ ವೇಳೆಯಲ್ಲೇ ಜಾಧವ್ ಅವರನ್ನು ಪಾಕಿಸ್ತಾನ ಇರಾನ್ ನಲ್ಲಿ ಬಂಧಿಸಿರುವುದಾಗಿ ಭಾರತ ತಿಳಿಸಿತ್ತು. ಆದರೆ ಪಾಕಿಸ್ತಾನ ಮಾತ್ರ ಭಾರತದ ವಾದವನ್ನು ಒಪ್ಪದೆ, ಜಾಧವ್ ಅವರನ್ನು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 2016ರ ಮಾರ್ಚ್ 3ರಂದು ಬಂಧಿಸಿರುವುದಾಗಿ ಆರೋಪಿಸಿತ್ತು.

ಪಾಕಿಸ್ತಾನ ಹಾಗೂ ನೆರೆಹೊರೆಯಲ್ಲಿ ಜಾಧವ್ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಪಾಕ್ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿತ್ತು. ಪಾಕಿಸ್ತಾನ ಅಂತಾರಾಷ್ಟ್ರೀಯ ಕೋರ್ಟ್ ನಲ್ಲೂ ಜಾಧವ್ ಅವರನ್ನು ಬಲೂಚಿಸ್ತಾನದಲ್ಲೇ ಬಂಧಿಸಿರುವುದಾಗಿ ವಾದಿಸಿತ್ತು.

ಏತನ್ಮಧ್ಯೆ ಐಎಸ್ಐ ನಿವೃತ್ತ ಅಧಿಕಾರಿ ಶೋಯೆಬ್ ಅವರು ಜಾಧವ್ ಅವರನ್ನು ಬಂಧಿಸಿರುವುದು ಇರಾನ್ ನಲ್ಲಿ ಎಂದು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next