ಇಸ್ಲಾಮಾಬಾದ್ : ದಿವಾಳಿ ಅಂಚಿಗೆ ತಲುಪಿರುವ ಪಾಕಿಸ್ಥಾನವನ್ನು ಮತ್ತೆ ಸುಸ್ಥಿತಿಗೆ ತರುವ ದಿಶೆಯಲ್ಲಿ ಮಿತವ್ಯಯದ ಅಭಿಯಾನವನ್ನು ಆರಂಭಿಸಿದ್ದ ನೂತನ ಪ್ರಧಾನಿ ಇಮ್ರಾನ್‌ಖಾನ್ ನೇತೃತ್ವದ ಪಾಕಿಸ್ಥಾನ ಸರಕಾರ ಇದೀಗ ಅನಿವಾರ್ಯವಾಗಿ ಅಭಿವೃದ್ಧಿ ನಿಧಿಗೆ ಕತ್ತರಿ ಹಾಕುವುದಕ್ಕೆ ಮುಂದಾಗಿದೆ.
ಪಾಕ್ ದೈನಿಕ ಡಾನ್ ನ್ಯೂಸ್ ವರದಿಯ ಪ್ರಕಾರ ಪಾಕ್ ಸರಕಾರ ಅಭಿವೃದ್ಧಿ ನಿಧಿಯನ್ನು ಕಡಿತಗೊಳಿಸಿ ಉಳಿಸುವ ಹಣವನ್ನು ಜಲ ಕ್ಷೇತ್ರದ ಯೋಜನೆಗಳಿಗೆ ಮತ್ತು ವಿತ್ತೀಯ ಕೊರತೆಯನ್ನು ನಿಭಾಯಿಸುವುದಕ್ಕೆ ಬಳಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಅಭಿವೃದ್ಧಿ ನಿಧಿಯನ್ನು 250 ಶತಕೋಟಿ ರೂ.ಗಳನ್ನು ಕಡಿತಗೊಳಿಸಲು ಪಾಕ್ ಸರಕಾರ ನಿರ್ಧರಿಸಿರುವುದಾಗಿ ಡಾನ್ ವರದಿ ತಿಳಿಸಿದೆ.
ಅಭಿವೃದ್ಧಿ ನಿಧಿಗೆಂದು ಹಿಂದಿನ ಬಜೆಟ್‌ನಲ್ಲಿ 1,030 ಶತಕೋಟಿ ರೂ.ಗಳನ್ನು ತೆಗೆದಿರಿಸಲಾಗಿತ್ತು. ಸರಕಾರ ಈಗ ಅದನ್ನು 775 ಶತಕೋಟಿ ರೂ.ಗಳಿಗೆ ಇಳಿಸಲು ನಿರ್ಧರಿಸಿದೆ.
ಪಾಕಿಸ್ಥಾನದ ಯೋಜನಾ ಆಯೋಗವು ಅಭಿವೃದ್ಧಿ ಯೋಜನೆಗಳಿಗೆ 35 ಶತಕೋಟಿ ರೂ. ಬಿಡುಗಡೆ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆಯೋಗವು 135 ಶತಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು.
ಜಲ ಕ್ಷೇತ್ರದ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರೈಸುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಪಾಕ್ ಸರಕಾರ ಹೇಳಿದೆ. ಹಾಗೆಯೇ ವಿತ್ತೀಯ ಕೊರತೆಯನ್ನು ಇಳಿಸಿ ದೇಶವನ್ನು ದಿವಾಳಿ ಅಂಚಿನಿಂದ ಹಿಂದಕ್ಕೆ ತರುವುದು ಕೂಡ ಸರಕಾರದ ಆದ್ಯತೆಯಾಗಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.