ಬೆಂಗಳೂರು: ಉತ್ತರ ಪ್ರದೇಶ ಮೂಲದ ಯುವಕ ನೊಬ್ಬ ಲುಡೋ ಗೇಮ್ ಆ್ಯಪ್ ಮೂಲಕ ಪರಿಚಯ ವಾದ ಪಾಕಿಸ್ತಾನ ಮೂಲದ ಯುವತಿಯನ್ನು ಪ್ರೀತಿಸಿ, ಅಕ್ರಮವಾಗಿ ಭಾರತಕ್ಕೆ ಕರೆಸಿಕೊಂಡು ಮದುವೆಯಾಗಿದ್ದು, ಇದೀಗ ದಂಪತಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಉತ್ತರ ಪ್ರದೇಶ ಮೂಲದ ಮುಲಾಯಂ ಸಿಂಗ್ ಯಾದವ್(26) ಮತ್ತು ಪಾಕಿಸ್ತಾನ ಮೂಲದ ಇಕ್ರಾಜೀವಾನಿ(19) ಬಂಧಿತರು. ಇದೇ ವೇಳೆ ದಂಪತಿಗೆ ಬಾಡಿಗೆ ಮನೆ ನೀಡಿದ ಗೋವಿಂದ ರೆಡ್ಡಿ (50) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸದ್ಯ ಯುವತಿಯನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಿ, ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಲಾಗಿದೆ. ಮುಲಾಯಂ ಸಿಂಗ್ ಯಾದವ್ ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಎಚ್‌ಎಸ್ ಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಬಿಡುವಿನ ವೇಳೆ ಲುಡೋ ಎಂಬ ಗೇಮಿಂಗ್ ಆ್ಯಪ್ ಬಳಸುವಾಗ ಪಾಕಿಸ್ತಾನದ ಇಕ್ರಾ ಜೀವಾನಿ ಪರಿಚಯವಾಗಿದ್ದು, ಇಬ್ಬರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಆಕೆಗೆ ಆರ್ಥಿಕ ಸಮಸ್ಯೆ ಹಾಗೂ ಕಾನೂನು ತೊಡಕಾಗುವ ಹಿನ್ನೆಲೆಯಲ್ಲಿ ಆಕೆ ಅಧಿಕೃತವಾಗಿ ಭಾರತಕ್ಕೆ ಬರಲು ಹಿಂದೇಟು ಹಾಕಿದ್ದಳು. ಆದರೆ, ಮೂಲಾಯಂ ಆಕೆಯನ್ನು ಬೆಂಗಳೂರಿಗೆ ಕರೆಸಿಕೊಳ್ಳಲು ನಿರ್ಧರಿಸಿದ್ದಾನೆ.
ನೇಪಾಳದಲ್ಲಿ ಮದುವೆ, ಭಾರತಕ್ಕೆ ಇಕ್ರಾ ಜೀವಾನಿ ಎಂಟ್ರಿ: ಪ್ರಿಯತಮೆಯನ್ನು ಭಾರತಕ್ಕೆ ಕರೆಸಿ ಕೊಳ್ಳಲು ಸಾಕಷ್ಟು ಕಸರತ್ತು ಮಾಡಿದ್ದಾನೆ. ಹೀಗಾಗಿ ಪಾಕಿಸ್ತಾನದ ಹೈದರಾಬಾದ್‌ನಿಂದ ಇಕ್ರಾ ಜೀವಾನಿಯನ್ನು ಪ್ರವಾಸಿ ವೀಸಾ ಪಡೆಯಲು ಸೂಚಿಸಿ ನೇಪಾಳದ ಕಠ್ಮಂಡುಗೆ ಕರೆಸಿಕೊಂಡಿದ್ದಾನೆ. ಅಲ್ಲಿಯೇ ಇಬ್ಬರು ಮದುವೆಯಾಗಿದ್ದಾರೆ. ಬಳಿಕ ನೇಪಾ ಳದ ಗುರುತಿನ ಚೀಟಿ ಪಡೆದು, ಬಿಹಾರದ ಬಿರ್‌ಗಂಜ್ ಮೂಲಕ ಭಾರತಕ್ಕೆ ಬಂದಿದ್ದಾರೆ. ಬಳಿಕ ಪಾಟ್ನಾದಿಂದ ರೈಲು ಮಾರ್ಗದ ಮೂಲಕ 2022ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯಲ್ಲಿರುವ ಜನ್ನಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮುಲಾಯಂ ಸಿಂಗ್ ಎಚ್‌ಎಸ್‌ಆರ್ ಲೇಔಟ್‌ನ ಖಾಸಗಿ ಕಂಪನಿ ಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಇಕ್ರಾ ಜೀವಾನಿ ಮನೆಯಲ್ಲೇ ಇರುತ್ತಿದ್ದಳು ಎಂದು ಪೊಲೀಸರು ಹೇಳಿದರು.
ನಕಲಿ ಗುರುತಿನ ಚೀಟಿ: ಪ್ರೇಯಸಿಯನ್ನು ಬೆಂಗಳೂರಿಗೆ ಕಂಡು ಭಾರತದ ಪ್ರಜೆ ಎಂದು ಸಾಬೀತು ಪಡಿಸಿದ ಸಿಂಗ್. ಆಕೆಯ ಇಕ್ರಾ ಜೀವಾನಿ ಎಂಬ ಹೆಸರನ್ನು ರಾವಾ ಯಾದವ್ ಎಂದು ಬದಲಿದ್ದಾನೆ. ಆ ಹೆಸರನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಕೊಡಿಸಿದ್ದಾನೆ. ರವಾ ಯಾದವ್ ಹೆಸರಿನಲ್ಲಿ ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಪ್ರಕರಣ ಸಂಬಂಧ ವಿದೇಶಿ ಕಾಯ್ದೆ ನಿಯಮ ಉಲ್ಲಂಘನೆ, ವಂಚನೆ, ದಾಖಲೆಗಳ ನಕಲು ಮಾಡಿದ ಆರೋಪಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತಾಯಿಗೆ ಕರೆ ಮಾಡಿ ಬಲೆಗೆ ಬಿದ್ದ ಇಕ್ರಾ ಜೀವಾನಿ : ಬೆಂಗಳೂರಿಗೆ ಬಂದು ಏಳೆಂಟು ತಿಂಗಳು ಕಳೆದಿದ್ದ ಇಕ್ರಾ ಜೀವಾನಿ, ಪಾಕಿಸ್ತಾನದಲ್ಲಿರುವ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ಮಾಹಿತಿ ಸಂಗ್ರಹಿಸಿದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಕೂಡಲೇ ರಾಜ್ಯ ಗುಪ್ತಚರ ಮತ್ತು ಆಂತರಿಕಾ ಭದ್ರತಾ ದಳ(ಐಎಸ್‌ಡಿ)ಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಮೇರೆಗೆ ಬೆಳ್ಳಂದೂರು ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿ ಹಾಗೂ ಮನೆ ಮಾಲೀಕನನ್ನು ಬಂಧಿಸಿದ್ದಾರೆ.
ಮನೆ ಮಾಲೀಕನ ವಿಚಾರಣೆ : ಮದುವೆಯಾಗಲು ಪಾಕಿಸ್ತಾನದಿಂದ ಯುವತಿಯನ್ನು ಭಾರತಕ್ಕೆ ಕರೆಸಿಕೊಂಡು ಆಕೆ ಜತೆ ಅಕ್ರಮವಾಗಿ ವಾಸವಾಗಿದ್ದ ಮುಲಾಯಂ ಸಿಂಗ್ ಯಾದವ್‌ನನ್ನು ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಯುವತಿಯನ್ನು ಎಫ್ ಆರ್‌ಆರ್‌ಒಗೆ ಮಾಹಿತಿ ನೀಡಿ ರಾಜ್ಯ ಮಹಿಳಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಯಾವುದೇ ದಾಖಲೆ ಪಡೆಯದೆ ಬಾಡಿಗೆ ಮನೆ ನೀಡಿದ ಮಾಲೀಕ ಗೋವಿಂದರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದರು.